MLA Dr M C Sudhakar: ಅಭಿವೃದ್ಧಿ ಕಾಣುತ್ತಿಲ್ಲ ಎನ್ನುವವರಿಗೆ ಶಾಸಕ ಡಾ.ಎಂ.ಸಿ.ಸುಧಾಕರ್ ತಿರುಗೇಟು
ಕ್ಷೇತ್ರದಲ್ಲಿ ಬಾಕಿ ಉಳಿದಿರುವ ರಸ್ತೆಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ ಹಲವು ಕೆಲಸಗಳು ಆಗಬೇಕಿವೆ. ಹೆಚ್ಚು ಹದಗೆಟ್ಟಿರುವ ಹಾಗೂ ಜನ ಮತ್ತು ಬಸ್ ಸಂಚಾರ ಹೆಚ್ಚಿರುವ ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಸ್ಥಳೀಯ ಮುಖಂಡರು ತಾಳ್ಮೆಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
-
ಚಿಂತಾಮಣಿ: ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಟೀಕಿಸುವವರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಲಿ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್(MLA Dr M C Sudhakar) ವಿರೋಧಿಗಳಿಗೆ ತಿರುಗೇಟು ನೀಡಿದರು.
ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಐ. ಕುರುಪಲ್ಲಿ, ವೆಂಕಟರಾಯನಕೋಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸೀತಂಪಲ್ಲಿ ಮತ್ತು ಕಂಚಿ ನಾಯಕನಹಳ್ಳಿ ಭಾಗದ ರಸ್ತೆಗಳು ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಉಳಿದಿದ್ದವು. ಇದೀಗ ರಾಗುಟ್ಟಹಳ್ಳಿಯಿಂದ ಕಂಚಿನಾಯಕನಹಳ್ಳಿವರೆಗಿನ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಬಾಕಿ ಉಳಿದಿರುವ ರಸ್ತೆಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ ಹಲವು ಕೆಲಸಗಳು ಆಗಬೇಕಿವೆ. ಹೆಚ್ಚು ಹದಗೆಟ್ಟಿರುವ ಹಾಗೂ ಜನ ಮತ್ತು ಬಸ್ ಸಂಚಾರ ಹೆಚ್ಚಿರುವ ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಸ್ಥಳೀಯ ಮುಖಂಡರು ತಾಳ್ಮೆಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Dr M C Sudhakar: ಅಂಬೇಡ್ಕರ್ ಭವನ, ಅನುಭವ ಕೇಂದ್ರದಿಂದ ಬಾಬಾಸಾಹೇಬರ ಆದರ್ಶಗಳಿಗೆ ಶಕ್ತಿ: ಡಾ.ಎಂ.ಸಿ.ಸುಧಾಕರ್
ವೆಂಕಟರಾಯನಕೋಟೆ ಗ್ರಾಮದ ಸಮೀಪದ ಕೆರೆಯ ಕೋಡಿ ಮಳೆಗಾಲದಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ, ಕೆರೆ ಕಟ್ಟೆಯ ಮೇಲಿನ ರಸ್ತೆ ಕಿರಿದಾಗಿದ್ದು, ಹೆಚ್ಚು ತಿರುವುಗಳಿದ್ದ ಕಾರಣ ಅಪಘಾತದ ಆತಂಕವೂ ಇತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೆರೆ ಕಟ್ಟೆಯನ್ನು 12 ಮೀಟರ್ ಅಗಲಕ್ಕೆ ವಿಸ್ತರಿಸ ಲಾಗುತ್ತಿದೆ. ಇದರಲ್ಲಿ ಏಳು ಮೀಟರ್ ಅಗಲದ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು. ಕಟ್ಟೆಯ ಆರಂಭದಿಂದ ಸುಮಾರು 650 ಮೀಟರ್ ಉದ್ದದವರೆಗೆ ರಸ್ತೆ ಅಭಿವೃದ್ಧಿಪಡಿಸುವುದರ ಜತೆಗೆ ನೂತನ ಸೇತುವೆಯನ್ನೂ ನಿರ್ಮಿಸಲಾಗುವುದು ಎಂದರು.
ಕೋನಕುಂಟ್ಲು ಗ್ರಾಮದ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ರಾಜಗೋಪುರ ನಿರ್ಮಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಸ್ಪಂದಿಸಲಾಗಿದೆ. ಭಕ್ತರ ಹುಂಡಿ ಹಣ ಹಾಗೂ ಗಣೇಶ ರಂಗಮಂದಿರ ಟ್ರಸ್ಟ್ ವತಿಯಿಂದ 96 ಲಕ್ಷ ರೂ. ಒದಗಿಸಲಾಗಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಅಗತ್ಯವಿರುವ ಉಳಿಕೆ ಅನುದಾನ ಕಲ್ಪಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂಗಾನಹಳ್ಳಿ ಗ್ರಾಮದಲ್ಲಿ 49 ಲಕ್ಷ ರೂ. ವೆಚ್ಚದಲ್ಲಿ ನೂತನ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.
ಬೋಡಂಪಲ್ಲಿ, ಚಂದ್ರಾಯನಹಳ್ಳಿ ಹಾಗೂ ಕೃಷ್ಣಾಪುರ ಗ್ರಾಮಗಳಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಯಿತು. ಮುಂಗಾನಹಳ್ಳಿ ಗ್ರಾಮದ ಎಸ್‌ಟಿ ಕಾಲೋನಿಯಲ್ಲಿ 10.5 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸ್ಕೂಲ್ ಸುಬ್ಬರೆಡ್ಡಿ, ಮಾದಮಂಗಲ ಚಂದ್ರಪ್ಪ, ರಮೇಶ್, ನಾರಾಯಣಸ್ವಾಮಿ ಡಿ.ಎ., ಸುಬ್ಬಣ್ಣ, ರಾಮಚಂದ್ರರೆಡ್ಡಿ, ಶಿವಣ್ಣ ಡಿ.ಎಂ., ವಿಜಯ್ ಕುಮಾರ್, ವೆಂಕಟರಮಣಪ್ಪ ಡಿ.ಕೆ., ನಾಗರಾಜ್ ಎ., ಚಿನ್ನಪ್ಪರೆಡ್ಡಿ, ಶ್ರೀನಿವಾಸ ಡಿ.ಎನ್., ವಿಶ್ವನಾಥ್ ಡಿ.ಎಂ., ಅಶ್ವಥ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.