Chikkaballapur SP Transferred: ಚಿಕ್ಕಬಳ್ಳಾಪುರಕ್ಕೆ ನೂತನ ಪೊಲೀಸ್ ವರಿಷ್ಠಾಧಿಕಾರಿ: ಕುಶಾಲ್ ಚೌಕ್ಸೆ ವರ್ಗಾವಣೆ; ಪದ್ಮಿನಿ ಸಾಹೂಗೆ ಜಿಲ್ಲಾ ಪೊಲೀಸ್ ಹೊಣೆ
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕುಶಾಲ್ ಚೌಕ್ಸೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ಪದ್ಮಿನಿ ಸಾಹೂ ಅವರನ್ನು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
-
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕುಶಾಲ್ ಚೌಕ್ಸೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ಪದ್ಮಿನಿ ಸಾಹೂ ಅವರನ್ನು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಆದೇಶ ಹೊರಡಿಸಿದ್ದು, ಪದ್ಮಿನಿ ಸಾಹೂ, ಐಪಿಎಸ್ (ಕೆಎನ್ 2015) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ನೇಮಕ ಮಾಡಲಾಗಿದೆ. ಅವರು ವರ್ಗಾವಣೆಗೊಂಡಿರುವ ಕುಶಾಲ್ ಚೌಕ್ಸೆ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.
ಇದೇ ಆದೇಶದಲ್ಲಿ ಚಿಕ್ಕಬಳ್ಳಾಪುರ ಎಸ್‌ಪಿಯಾಗಿದ್ದ ಕುಶಾಲ್ ಚೌಕ್ಸೆ, ಐಪಿಎಸ್ (ಕೆಎನ್ 2018) ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: Chikkaballapur News: ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು: ಸಿಇಒ ಡಾ.ವೈ.ನವೀನ್ ಭಟ್
ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪದ್ಮಿನಿ ಸಾಹೂ ಅಧಿಕಾರ ವಹಿಸಿಕೊಳ್ಳುವು ದರೊಂದಿಗೆ ಜಿಲ್ಲೆಯ ಪೊಲೀಸ್ ಆಡಳಿತದಲ್ಲಿ ಹೊಸ ಬದಲಾವಣೆಯ ನಿರೀಕ್ಷೆ ಮೂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ನಿಯಂತ್ರಣ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧಗಳಿಗೆ ಕಡಿವಾಣ ಹಾಗೂ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆಯ ಉತ್ತಮ ಸಂಪರ್ಕ ಸಾಧಿಸುವುದು ನೂತನ ಎಸ್ಪಿ ಅವರ ಮುಂದಿರುವ ಪ್ರಮುಖ ಆದ್ಯತೆಗಳಾಗಿವೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೈಬರ್ ವಂಚನೆ, ರಸ್ತೆ ಅಪಘಾತಗಳು, ಮಾದಕ ವಸ್ತುಗಳ ಅಕ್ರಮ ಹಾಗೂ ವಿವಿಧ ಕಾನೂನು-ಸುವ್ಯವಸ್ಥೆಯ ಸವಾಲುಗಳ ಹಿನ್ನೆಲೆಯಲ್ಲಿ ನೂತನ ಎಸ್ಪಿ ಅವರ ಕಾರ್ಯವೈಖರಿ ಕುತೂಹಲ ಮೂಡಿಸಿದೆ.
ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯ ಅಪರಾಧ ಪರಿಸ್ಥಿತಿ ಹಾಗೂ ಕಾನೂನು-ಸುವ್ಯವಸ್ಥೆಯ ಕುರಿತು ಮಾಹಿತಿ ಪಡೆದು ಮುಂದಿನ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ.