OBC Morcha: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಕಡೆಗಣನೆಗೆ ಆಕ್ರೋಶ: ನಗರದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದಿಂದ ಪ್ರತಿಭಟನೆ
ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಆಂಜನೇಯಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇ
Ashok Nayak
Dec 13, 2024 1:17 AM
ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿಯೇ ಸ್ಥಾಪಿಸಿರುವ ನಿಗಮ ಮಂಡಳಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸದೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಆಂಜನೇಯಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲ್ಯಾಖೆ ವ್ಯಾಪ್ತಿಯ ವಿವಿಧ ನಿಗಮ ಮಂಡಳಿಗಳಿಗೆ ಅನುದಾನ ಸ್ಥಗಿತಗೊಳಿಸುವ ಮೂಲಕ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ಕಲ್ಲು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಬಜೆಟ್‌ನಲ್ಲಿ ಘೋಷಿಸುವ ಮೊತ್ತಕ್ಕೆ ವಾಸ್ತವವಾಗಿ ಬಿಡುಗಡೆ ಮಾಡಿರುವ ಮೊತ್ತಕ್ಕೆ ವ್ಯತ್ಯಾಸವಿದೆ. ತಮ್ಮ ರಾಜಕೀಯ ಲಾಭಕ್ಕಾಗಿ ಅಹಿಂದ ಮಂತ್ರ ಪಠಿಸಿದ್ದ ಸಿಎಂ ಸಿದ್ದರಾಮಯ್ಯ ಸಮುದಾಯಗಳ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ದರು.
ಸ್ವಉದ್ಯೋಗ ಯೋಜನೆ, ವಿದ್ಯಾರ್ಥಿ ಅರಿವು ಯೋಜನೆ ಹಾಗೂ ಸಣ್ಣ ಹಿಡುವಳಿದಾರ ರೈತರಿಗಾಗಿ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾಗುತ್ತಿದ್ದ ಉಚಿತ್ ಬೋರ್‌ವೆಲ್ ಯೋಜನೆ ಬಹುತೇಕ ಸ್ಥಗಿತಗೊಂಡಿದೆ. ಹಿಂದು ಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ವಿನಿಯೋಗವಾಗಬೇಕಿದ್ದ ಅನುದಾನವನ್ನು ಪಂಚ ಯೋಜನೆ ಗಳಿಗೆ ಬಳಸಿಕೊಂಡು ಸಮುದಾಯಗಳನ್ನು ಕಡೆಗಣಿಸಲಾಗಿ ಎಂದು ಕಿಡಿಕಾರಿದರು.
ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್‌ಗೌಡ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಸರ್ಕಾರ ನೀಡಿದ ಆಶ್ವಸನೆಯಂತೆ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಟಾನ ಮಾಡಿಲ್ಲ. ಜನರಿಗೆ ಮಂಕುಬೂದಿ ಎರಚುವ ಮಾತುಗಳ ಮೂಲಕ ಸಮಯ ವ್ಯರ್ಥ ಮಾಡುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವ್ಯಾಪ್ತಿಯ ವಿವಿಧ ನಿಗಮ, ಮಂಡಳಿಗಳಿಗೆ ಅನುದಾನ ಸ್ಥಗಿತಗೊಳಿಸಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಟೀಕಿಸಿದರು.
ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಬದ್ದತೆಯಿಂದ ಕೆಲಸ ಮಾಡಲು ಸರ್ಕಾರಕ್ಕೆ ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡದೆ ಕೇವಲ ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಇನ್ನಾದರೂ ಸರ್ಕಾರ ನಿಗಮ ಮಂಡಳಿಗೆ ಅನುದಾನ ಒದಗಿಸುವ ಜೊತೆಗೆ ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕರಾದ ರಾಜಣ್ಣ, ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ ಮುರಳಿಧರ್, ಒಬಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪತಿ, ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಆರ್.ಆಂಜನಪ್ಪ, ನಗರ ಮಂಡಲ ಅಧ್ಯಕ್ಷ ನರೇಶ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಸುಮತಿ, ಪ್ರತಾಪ್, ಸುರೇಂದ್ರಗೌಡ, ವಿ.ಮಧುಚಂದ್ರ, ವೇಣು, ಶಿವಕುಮಾರ್, ವಾಸು, ನಾಗೇಶ್ ಇದ್ದರು.