Shidlaghatta News: ನಗರದಲ್ಲಿ ಪೇಜಾವರ ಶ್ರೀಗಳ ಸಂಚಾರ; ಮನೆ ಮನೆಗೆ ಪಾದಪೂಜೆ, ಭಕ್ತರಿಗೆ ಆಶೀರ್ವಾದ
ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣನ ಸಂಸ್ಥಾನ ಪೂಜೆ ನೆರವೇರಿಸಿದ ಸ್ವಾಮೀಜಿ ಗಳು, ಅನುಗ್ರಹ ಭಾಷಣ ಮಾಡಿ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು. ಟಿ.ಬಿ. ರಸ್ತೆಯ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಆರತಿ ಸಲ್ಲಿಸಿದ ಅವರು, ನಗರದ ಶ್ರೀ ವಾಸವಿ ಶಾಲೆ, ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಹಾಗೂ ನಡಪಿನಾಯಕನಹಳ್ಳಿಯ ನವೋದಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಆಶೀರ್ವದಿಸಿದರು.
-
ಶಿಡ್ಲಘಟ್ಟ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಶಿಡ್ಲಘಟ್ಟ ನಗರದಲ್ಲಿ ಭಕ್ತರು ಅದ್ಧೂರಿ ಸ್ವಾಗತ ಕೋರಿದರು. ನಗರದ ಮಯೂರ ವೃತ್ತದಿಂದ ಅಶೋಕ ರಸ್ತೆ, ಶಂಕರ ಮಠ ರಸ್ತೆ ಮೂಲಕ ಮುತ್ತೂರು ಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದವರೆಗೆ ವೇದಘೋಷ, ಪೂರ್ಣಕುಂಭ ಸ್ವಾಗತ, ನಾದಸ್ವರ ವಾದನ ಹಾಗೂ ವಿವಿಧ ಭಜನಾ ತಂಡಗಳ ಗಾಯನದೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಿತು.
ಸ್ವಾಮೀಜಿಗಳು ಶಾಸಕ ಬಿ.ಎನ್. ರವಿಕುಮಾರ್ ಅವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿ ಸುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ಬಳಿಕ ಅಪ್ಪೇಗೌಡನಹಳ್ಳಿಯ ಲಕ್ಷ್ಮೀ ನಾರಾಯಣ ರೆಡ್ಡಿ ಅವರ ಗೋವಿನ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಆಶೀರ್ವದಿಸಿದರು. ನಂತರ ನಗರದ ವಿವಿಧ ಭಕ್ತರ ಮನೆಗಳಿಗೆ ತೆರಳಿ ಪಾದಪೂಜೆ ಸ್ವೀಕರಿಸಿ ಅನುಗ್ರಹ ನೀಡಿದರು.
ಇದನ್ನೂ ಓದಿ: Shidlaghatta News: ದೇವಾಲಯಗಳ ಅಭಿವೃದ್ಧಿಗೆ ಆದ್ಯತೆ: ಅರ್ಚಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ: ತಹಶೀಲ್ದಾರ್ ಗಗನ ಸಿಂಧು
ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣನ ಸಂಸ್ಥಾನ ಪೂಜೆ ನೆರವೇರಿಸಿದ ಸ್ವಾಮೀಜಿ ಗಳು, ಅನುಗ್ರಹ ಭಾಷಣ ಮಾಡಿ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು. ಟಿ.ಬಿ. ರಸ್ತೆಯ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಆರತಿ ಸಲ್ಲಿಸಿದ ಅವರು, ನಗರದ ಶ್ರೀ ವಾಸವಿ ಶಾಲೆ, ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಹಾಗೂ ನಡಪಿನಾಯಕನಹಳ್ಳಿಯ ನವೋದಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್(MLA B N Ravikumar), ಪೇಜಾವರ ಮಠದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳು ಸಮಾಜಕ್ಕೆ ಪ್ರೇರಣೆ ಯಾಗಿದ್ದು, ಸ್ವಾಮೀಜಿಗಳ ಆಗಮನದಿಂದ ಶಿಡ್ಲಘಟ್ಟದ ಜನರಿಗೆ ಆಧ್ಯಾತ್ಮಿಕ ಸ್ಪೂರ್ತಿ ದೊರೆತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲ್ಲೂಕು ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವೈಶಾಖ್, ಕಾರ್ಯದರ್ಶಿ ಕೆ. ಮಂಜುನಾಥ್, ಖಜಾಂಚಿ ಹರೀಶ್, ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಸದಸ್ಯರಾದ ವಾಸುದೇವರಾವ್ ಮತ್ತು ಸುಧೀಂದ್ರ, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಶಾಸಕ ಎಂ.ರಾಜಣ್ಣ(Former MLA M Rajanna), ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಆನಂದ್ ಗೌಡ, ಸಮಾಜ ಸೇವಕ ನರಸಿಂಹ ಮೂರ್ತಿ, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ವಿವಿಧ ದೇವಾಲಯಗಳ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.