Chikkaballapur News: ಸಮಗ್ರ ಆರೋಗ್ಯ ಅಭಿಯಾನಕ್ಕೆ ಶೀಘ್ರ ಚಾಲನೆ: ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಕರೆ
1859ರ ಮೊದಲ ಮಹಾಯುದ್ಧದ ಭೀಕರತೆಯ ಹಿನ್ನೆಲೆಯಲ್ಲಿ ರೆಡ್'ಕ್ರಾಸ್ ಸಂಸ್ಥೆ ಹುಟ್ಟಿಕೊಂಡು ಇಂದು ವಿಶ್ವದಾದ್ಯಂತ ಮಾನವೀಯ ಸೇವೆಯ ಪ್ರತೀಕವಾಗಿ ಬೆಳೆದಿದೆ. ಮಹಾತ್ಮ ಗಾಂಧೀಜಿ ಅಭಿಪ್ರಾಯಪಟ್ಟಂತೆ ಪರರ ಸೇವೆಯೇ ಪರಮಾತ್ಮನ ಸೇವೆ” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವರಕ್ತದಾನಿಗಳ ದಿನಾಚರಣೆಗೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ ನೀಡಿ ಮಾತನಾಡಿದರು. ಸಾಧಕರನ್ನು ಸನ್ಮಾನಿಸಿದರು -
ಚಿಕ್ಕಬಳ್ಳಾಪುರ: ಮಾನವ ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಅನ್ವೇಷಣೆ ಯಾವು ದಾದರೂ ಇದ್ದರೆ ಅದು ಸಹಕಾರ ತತ್ವವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅಭಿಪ್ರಾಯ ಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ(World Blood Donor Day) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು. ರೆಡ್ ಕ್ರಾಸ್(Red Cross) ಸಂಸ್ಥೆ ಕಳೆದ 18 ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ಜೀವಗಳಿಗೆ ಆಸರೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಸಹಕಾರ ಮನೋಭಾವವೇ ನಾಗರಿಕತೆಯ ಬೆಳವಣಿಗೆಗೆ ಅಡಿಪಾಯವಾಗಿದ್ದು, ಅದರ ಮತ್ತೊಂದು ರೂಪವೇ ಸೇವೆಯಾಗಿದೆ ಎಂದು ಹೇಳಿದರು.
1859ರ ಮೊದಲ ಮಹಾಯುದ್ಧದ ಭೀಕರತೆಯ ಹಿನ್ನೆಲೆಯಲ್ಲಿ ರೆಡ್'ಕ್ರಾಸ್ ಸಂಸ್ಥೆ ಹುಟ್ಟಿಕೊಂಡು ಇಂದು ವಿಶ್ವದಾದ್ಯಂತ ಮಾನವೀಯ ಸೇವೆಯ ಪ್ರತೀಕವಾಗಿ ಬೆಳೆದಿದೆ. ಮಹಾತ್ಮ ಗಾಂಧೀಜಿ ಅಭಿಪ್ರಾಯಪಟ್ಟಂತೆ ಪರರ ಸೇವೆಯೇ ಪರಮಾತ್ಮನ ಸೇವೆ” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಹಿರಿಯ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಅಧಿಕಾರವಾಗಿ ಅಲ್ಲ, ಸೇವೆಯಾಗಿ ನೋಡಬೇಕು. ಸೇವಾ ಮನೋಭಾವವೇ ವ್ಯಕ್ತಿಯನ್ನು ಸಮಾಜದೊಂದಿಗೆ ಬೆಸೆಯುವ ಶಕ್ತಿ ಎಂದು ಹೇಳಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿರುವುದು ಹೆಮ್ಮೆಯ ಸಾಧನೆ. ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದ ಕುರಿತು ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಮಗ್ರ ಆರೋಗ್ಯ ತಪಾಸಣಾ ಅಭಿಯಾನ ಆರಂಭಿಸಲು ರೂಪುರೇಷೆ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಚಾಲನೆ ನೀಡ ಲಾಗುವುದು ಎಂದರು.
ಇದೇ ತಿಂಗಳಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಗೂ ಚಾಲನೆ ನೀಡಲಾಗುವುದು. ಅಗತ್ಯವಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯೂ ಉಚಿತ ವಾಗಿ ಇರಲಿದೆ ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಗೆ ದಾನಿಗಳು ಮತ್ತು ಪೋಷಕರ ಅಗತ್ಯವಿದೆ ಎಂಬ ಮನವಿಯನ್ನು ಗಮನಿಸಿ ದ್ದು, ಜಿಲ್ಲೆಯ ಕೈಗಾರಿಕಾ ವಲಯದಿಂದ ನೆರವು ದೊರಕುವಂತೆ ಪ್ರಯತ್ನಿಸಲಾಗುವುದು. ವೈಯಕ್ತಿಕ ವಾಗಿಯೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ರಕ್ತದಾನವು ನಿಸ್ವಾರ್ಥ ಸೇವೆ ಯಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದ ಅವರು ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿ ಸಹಕಾರ ನೀಡುತ್ತಿರುವ ಜಿಲ್ಲೆಯ 200ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ರಕ್ತದಾನಿಗಳಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸುವ ಸೇವೆಗೆ ಕೂಡ ಎಸ್‌ಪಿ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ 50 ಬಾರಿ ರಕ್ತದಾನ ಮಾಡಿದ ಮಹಾಂತೇಶ್, 37 ಬಾರಿ ರಕ್ತದಾನ ಮಾಡಿದ ದಯಾನಂದ್ ಕುಮಾರ್ ಹಾಗೂ 25 ಬಾರಿ ರಕ್ತದಾನ ಮಾಡಿದ ಮಹೇಶ್ ಅವರನ್ನು ಹಾರ ತುರಾಯಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಜಯರಾಂ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅಶ್ವಿನ್, ತಹಶೀಲ್ದಾರ್ ರಶ್ಮಿ, ನಾಗಾರ್ಜುನ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ಅಭಯ ಆಸ್ಪತ್ರೆಯ ಡಾ.ಎಸ್.ಪ್ರಶಾಂತ್‌ಕುಮಾರ್, ಡಿಹೆಚ್‌ಒ ಡಾ.ಮಹೇಶ್, ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ.ರಾಜು,ರೆಡ್‌ಕ್ರಾಸ್ ಸಂಸ್ಥೆಯ ರವಿಕುಮಾರ್, ಡಾ.ಬಿ.ವಿ.ಕೃಷ್ಣ, ಸು.ದಾ.ವೆಂಕಟೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.