Hemavathi Backwaters Tragedy: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವಕರ ಸಾವು
Hassan News: ಬೆಂಗಳೂರಿನಿಂದ ಹತ್ತು ಯುವಕರ ತಂಡ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿತ್ತು. ದೇವರ ದರ್ಶನ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ತೆರಳಿದ ವೇಳೆ ದುರಂತ ನಡೆದಿದೆ.
ಹಾಸನ ಬಳಿಯ ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕರು. -
ಹಾಸನ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ (Hemavathi Backwaters Tragedy) ಮುಳುಗಿ ಬೆಂಗಳೂರಿನ ಮೂವರು ಯುವಕರು ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಶೆಟ್ಟಿಹಳ್ಳಿ ಚರ್ಚ್ ಸಮೀಪ ನಡೆದಿದೆ. ಪ್ರವಾಸಕ್ಕೆಂದು ಬಂದಿದ್ದ ಯುವಕರು, ಈಜಲು ನದಿಗೆ ಇಳಿದಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಬೆಂಗಳೂರು ಮೂಲದ ಚರಣ್ (20), ಮಿಲನ್ (23) ಹಾಗೂ ಮಣಿಕಂಠ (20) ಮೃತ ಯುವಕರು ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಹತ್ತು ಯುವಕರ ತಂಡ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿತ್ತು. ದೇವರ ದರ್ಶನ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದರು. ಈ ವೇಳೆ ಚರ್ಚ್ ಬಳಿಯ ಹೇಮಾವತಿ ನದಿಯ ಹಿನ್ನೀರಿನಲ್ಲಿ ಯುವಕರು ಈಜಲು ನೀರಿಗೆ ಇಳಿದಿದ್ದಾರೆ.
ನೀರಿನ ಆಳದ ಅರಿವಿಲ್ಲದೆ ಇಳಿದ ಪರಿಣಾಮ ಚರಣ್, ಮಿಲನ್ ಮತ್ತು ಮಣಿಕಂಠ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ತಮ್ಮ ಮೂವರು ಸ್ನೇಹಿತರು ಕಣ್ಣೆದುರೇ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಆಘಾತಗೊಂಡ ಉಳಿದ ಸ್ನೇಹಿತರು, ಕೂಡಲೇ ದಡಕ್ಕೆ ಬಂದು ರಕ್ಷಣೆಗಾಗಿ ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಲೇ ಆ ಮೂವರೂ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟ ಮೂವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೊರೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ಯುವಕರ ಮೃತದೇಹಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಶೋಧಕಾರ್ಯ ನಡೆಸುತ್ತಿದ್ದಾರೆ.