ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BJP Ghar Vaapsi: ಈಶ್ವರಪ್ಪ, ಯತ್ನಾಳ್, ಹೆಬ್ಬಾರ್, ಎಸ್‌ಟಿಎಸ್ ಮರಳಿ ಬಿಜೆಪಿಗೆ ?

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾದಂತೆ ಬಿಜೆಪಿಯಲ್ಲಿನ ರಾಜ್ಯಾ ಧ್ಯಕ್ಷರ ಆಯ್ಕೆ ಹಾಗೂ ಉಚ್ಚಾಟನೆಗೊಂಡವರ ಘರ್‌ವಾಪ್ಸಿಗೆ ವೇದಿಕೆ ಸಜ್ಜುಗೊಂಡಿದೆ. ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖರ್‌ಗೆ ಮತ್ತೆ ಪಕ್ಷದ ಬಾಗಿಲುಗಳು ತೆರೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಈಶ್ವರಪ್ಪ, ಯತ್ನಾಳ್, ಹೆಬ್ಬಾರ್, ಎಸ್‌ಟಿಎಸ್ ಮರಳಿ ಬಿಜೆಪಿಗೆ ?

-

Profile
Ashok Nayak Jun 14, 2026 6:15 AM

ಕಮಲ ಪಕ್ಷದಲ್ಲಿ ಘರ್‌ ವಾಪ್ಸಿ ಪ್ರಕ್ರಿಯೆ ಶುರು?

ಪರಿಷತ್ ಚುನಾವಣೆ ಎದುರಿರುವಂತೆಯೇ ಸುಳಿವು

ರಾಜ್ಯ ಉಸ್ತುವಾರಿ ಅಗರ್ವಾಲ್ ಹೇಳಿಕೆ ಕುತೂಹಲ

ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದ್ದು, ಆಡಳಿತ ಪಕ್ಷ ಕಾಂಗ್ರೆಸ್ʼನಲ್ಲಿ ಮುಖ್ಯಮಂತ್ರಿ ಬದಲಾವಣೆಯ ನಂತರ ಈಗ ಪ್ರತಿಪಕ್ಷದಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ.

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾದಂತೆ ಬಿಜೆಪಿಯಲ್ಲಿನ ರಾಜ್ಯಾ ಧ್ಯಕ್ಷರ ಆಯ್ಕೆ ಹಾಗೂ ಉಚ್ಚಾಟನೆಗೊಂಡವರ ಘರ್‌ವಾಪ್ಸಿಗೆ ವೇದಿಕೆ ಸಜ್ಜುಗೊಂಡಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್‌ಗೆ ಮತ್ತೆ ಪಕ್ಷದ ಬಾಗಿಲುಗಳು ತೆರೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ವಿಧಾನಪರಿಷತ್ ಚುನಾವಣೆ ಎದುರು ಇರುವಂತೆ, ಮುಂಬರುವ ಚುನಾವಣೆಗೆ ಪಕ್ಷವನ್ನು ಸಿದ್ದಗೊಳಿಸಲು ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್, ಹಾಲಿ ರಾಜ್ಯಾಧ್ಯಕ್ಷರ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದಿರುವುದು ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: BJP Karnataka: ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ; ಎಚ್‌.ಡಿ.ದೇವೇಗೌಡರಿಗೆ ಇಲ್ಲ ಟಿಕೆಟ್‌!

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ವಹಿಸಿಕೊಂಡು ನವೆಂಬರ್‌ಗೆ ಮೂರು ವರ್ಷಗಳಾಗುತ್ತಿದ್ದರೂ, ಅಧಿಕಾರ ವಹಿಸಿಕೊಂಡಲ್ಲಿಂದ ಪಕ್ಷದೊಳಗೆ ಅಪಸ್ವರ ಕೇಳಿ ಬರುತ್ತಲೇ ಇದೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಶಾಸಕ ಬಸನಗೌಡ ಯತ್ನಾಳ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬದಲಾವಣೆಗೂ ಆಗ್ರಹಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಇದಾದ ನಂತರ ರಮೇಶ್ ಜಾರಕಿಹೊಳಿ ಸೇರಿದಂತೆ ಇತರರು ಕೂಡ ನಾಯಕತ್ವದ ಬಗ್ಗೆ ತಕರಾರು ಎತ್ತಿದ್ದರೂ, ಕೇಂದ್ರದ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಕಳೆದ ತಿಂಗಳಲ್ಲಿ ಬಿಜೆಪಿಯ ರಾಷ್ಟ್ರಾಧ್ಯಕ್ಷರ ಬದಲಾವಣೆ ಆದರ ನಂತರ, ಕರ್ನಾಟಕದಲ್ಲಿಯೂ ಕೆಲ ಬದಲಾವ ಣೆಗಳಾಗಬಹುದು ಎನ್ನಲಾಗಿತ್ತು.

ಹೀಗಾಗಿ ರಾಜ್ಯ ರಾಜಕಾರಣದಲ್ಲಿನ ಸಮೀಕರಣ ಬಿಜೆಪಿಯಲ್ಲಿನ ರಾಜ್ಯಾಧ್ಯಕ್ಷರ ಬದಲಾವಣೆ ಸೇರಿದಂತೆ ಪಕ್ಷದಿಂದ ಉಚ್ಚಾಟನೆಗೊಂಡ ನಾಯಕರ ಮರುಸೇರ್ಪಡೆಯ ಸಾಧ್ಯತೆ ಶೀಘ್ರದಲ್ಲಿ ನಡೆಯಲಿರುವ ಸುಳಿವು ಸಿಕ್ಕಿದೆ.

ಮಂಗಳೂರಲ್ಲಿ ಮಾತನಾಡಿರುವ ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಕೈಗೊಳ್ಳಲಿದ್ದು, ಪಕ್ಷದಿಂದ ಉಚ್ಚಾಟನೆಗೊಂಡ ನಾಯಕರ ಮರುಸೇರ್ಪಡೆ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.

ಪಕ್ಷದಿಂದ ಯಾರನ್ನೂ ಹೊರಹಾಕುವುದು ಬಿಜೆಪಿಗೆ ಸಂತೋಷದ ವಿಷಯವಲ್ಲ. ಸಾಮಾನ್ಯವಾಗಿ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗುತ್ತದೆ. ಬಳಿಕ ಅವರ ನಡವಳಿಕೆ, ಪರಿಸ್ಥಿತಿ ಹಾಗೂ ಪಕ್ಷದ ನಿರ್ಧಾರಗಳ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

ಯಾವ ಕಾರಣಕ್ಕಾಗಿ ಅವರು ಪಕ್ಷದಿಂದ ಹೊರ ಹೋಗಿದ್ದಾರೆ ಎಂಬುದರ ಬಗ್ಗೆ ಅವರಿಗೇ ಆತ್ಮಾವ ಲೋಕನ ಆಗಬೇಕು. ರಾಜಕೀಯದಲ್ಲಿ ಸಾಧ್ಯತೆಗಳಿಗೆ ಎಂದಿಗೂ ಬಾಗಿಲು ಮುಚ್ಚಿರುವು ದಿಲ್ಲ. ಆದರೆ, ಈ ಕುರಿತು ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್, ರಾಜ್ಯಾ ಧ್ಯಕ್ಷರ ನೇಮಕ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ವಿಷಯವಾಗಿದೆ. ಹಾಲಿ ಅಧ್ಯಕ್ಷರ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.

ಅಲ್ಲದೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆ ಕುರಿತು ಮಾತನಾಡಿ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ನೆಲೆ ಬಲಗೊಂಡಿದ್ದು, ಹಿಂದೆ ಅಸ್ತಿತ್ವವೇ ಇಲ್ಲದಿದ್ದ ಪ್ರದೇಶಗಳಲ್ಲಿಯೂ ಬಿಜೆಪಿ ಪ್ರಭಾವ ವಿಸ್ತರಿಸಿದೆ. ಕರ್ನಾಟಕದಲ್ಲಿಯೂ ಮುಂದಿನ ಚುನಾವಣೆ ಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದು ಈ ಸಂಬಧ ಪಕ್ಷದಲ್ಲಿನ ಕೆಲವು ಅಪಸ್ವರ, ತೊಡಕುಗಳನ್ನು ನಿವಾರಿಸಲು ಈಗಾಗಲೇ ಮುಂದಾಗಿರುವುದು ಕೂಡ ಕೇಂದ್ರ ಸೂಚನೆಯಂತೆ ನಡೆದಿದೆ ಎನ್ನಲಾಗಿದೆ.

ಹೀಗಿದ್ದರೂ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಕೇಂದ್ರದ ವರಿಷ್ಠರು ತೆಗೆದುಕೊಳ್ಳಲಿರುವ ನಿರ್ಧಾರಗಳು ತೀವ್ರ ಕುತೂಹಲ ಕೆರಳಿಸಿವೆ.

ಅಗರ್ವಾಲ್ ಹೇಳಿದ್ದೇನು?

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನವನ್ನು ರಾಷ್ಟ್ರಾಧ್ಯಕ್ಷರು ಮಾಡುತ್ತಾರೆ

ಉಚ್ಚಾಟನೆಗೊಂಡ ನಾಯಕರ ಮರುಸೇರ್ಪಡೆ ಸಾಧ್ಯತೆ ತಳ್ಳಿ ಹಾಕಲು ಸಾಧ್ಯವಿಲ್ಲ. ಯಾರನ್ನೂ

ಹೊರ ಹಾಕುವುದು ಸಂತೋಷದ ವಿಷಯವಲ್ಲ.

ಉಚ್ಚಾಟಿತರ ನಡೆವಳಿಕೆ, ಪಕ್ಷದ ನಿರ್ಧಾರಗಳ ಆಧಾರದಲ್ಲಿ ಮುಂದಿನ ತೀರ್ಮಾನವಾಗುತ್ತದೆ.