ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಂಡವಪುರದ ಐತಿಹಾಸಿಕ ʼಅಮ್ಮಣ್ಣಿ ಅಮ್ಮನ ಕಲ್ಯಾಣಿʼಗೆ ಕಾಯಕಲ್ಪ; ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ ಪರಿತ್ರಾಣ ಫೌಂಡೇಶನ್‌

Ammanni Ammana Kalyani: ಮೈಸೂರು ಅರಸರಾದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ತಮ್ಮ ಧರ್ಮ ಪತ್ನಿಯ ನೆನಪಿನಲ್ಲಿ ಮೇಲುಕೋಟೆ ಬೆಟ್ಟದ ಬಳಿ ಗೌಡಗೆರೆ ಗ್ರಾಮದಲ್ಲಿ ಕಲ್ಯಾಣಿಯನ್ನು ನಿರ್ಮಿಸಿದ್ದರು. ಈ ಕಲ್ಯಾಣಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಇದರ ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರೊಂದಿಗೆ ಬೆಂಗಳೂರಿನ ಪರಿತ್ರಾಣ ಫೌಂಡೇಶನ್‌ ಕೈಜೋಡಿಸಿದೆ.

ಪಾಂಡವಪುರದ ಐತಿಹಾಸಿಕ ಅಮ್ಮಣ್ಣಿ ಅಮ್ಮನ ಕಲ್ಯಾಣಿಗೆ ಕಾಯಕಲ್ಪ

ಪಾಂಡವಪುರ ತಾಲೂಕಿನ ಗೌಡಗೆರೆಯ ಕಲ್ಯಾಣಿ ಸ್ವಚ್ಛತಾ ಕಾರ್ಯದಲ್ಲಿ ಪರಿತ್ರಾಣ ತಂಡ ಮತ್ತು ಗ್ರಾಮಸ್ಥರು. -

Prabhakara R
Prabhakara R Sep 23, 2026 3:41 PM

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕು ಮಾಣಿಕ್ಯನಹಳ್ಳಿ ಪಕ್ಕದ ಗೌಡಗೆರೆ ಗ್ರಾಮದಲ್ಲಿನ ಐತಿಹಾಸಿಕ ʼಅಮ್ಮಣ್ಣಿ ಅಮ್ಮನ ಕಲ್ಯಾಣಿʼ (Ammanni Ammana Kalyani) ಸಂರಕ್ಷಣಾ ಕಾರ್ಯಕ್ಕೆ ಗ್ರಾಮಸ್ಥರೊಂದಿಗೆ ಬೆಂಗಳೂರಿನ ಪರಿತ್ರಾಣ ಫೌಂಡೇಶನ್ (Paritrana Foundation) ಕೈಜೋಡಿಸಿದ್ದು, ಶ್ರಮದಾನದ ಮೂಲಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದೆ.

ಮೈಸೂರು ಅರಸರಾದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು (ಆಡಳಿತದ ಅವಧಿ 1673-1704) ತಮ್ಮ ಧರ್ಮ ಪತ್ನಿಯ ನೆನಪಿನಲ್ಲಿ ಮೇಲುಕೋಟೆ ಬೆಟ್ಟದ ಅಡಿಯಲ್ಲಿ ಬರುವ ಗೌಡಗೆರೆ ಗ್ರಾಮದಲ್ಲಿ ಈ ಕಲ್ಯಾಣಿಯನ್ನು ನಿರ್ಮಿಸಿದ್ದರು ಎಂದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ.

ಗ್ರಾಮಸ್ಥರು ಹೇಳುವ ಪ್ರಕಾರ, 10 ರಿಂದ 12 ವರ್ಷಗಳ ಹಿಂದೆ ಈ ಕಲ್ಯಾಣಿಯೂ ಜಲ ಸಮೃದ್ಧಿಯಿಂದ ಕೂಡಿತ್ತು. ಅವರು ಈ ಕಲ್ಯಾಣಿಯಲ್ಲಿ ಈಜಿದ ದಿನಗಳು, ದನಕರುಗಳಿಗೆ ನೀರು ಕುಡಿಸುತ್ತಿದ್ದ ದಿನಗಳು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮುಂತಾದ ಕಾರ್ಯಗಳಿಗೆ ನೀರಿನ ಆಶ್ರಯವಾಗಿದ್ದ ದಿನಗಳನ್ನು ನೆನೆಯುತ್ತಾರೆ.

Ammanni Ammana Kalyani (1)

ಉದ್ದ 300 ಅಡಿ, ಅಗಲ 300 ಅಡಿ ಮತ್ತು ಆಳ 30 ಅಡಿಯ ಈ ಜಲ ಮೂಲವು ವರ್ಷದಿಂದ ವರ್ಷಕ್ಕೆ ಮಳೆಯ ಕೊರತೆ ಹಿನ್ನೆಲೆಯಲ್ಲಿ ಬರಡಾಗಿತ್ತು. ಹೀಗಾಗಿ ಕಸ-ಕಡ್ಡಿ, ಗಿಡಗಂಟಿಗಳಿಂದ ಮುಚ್ಚಿಹೋಗಿತ್ತು. ಇದರಿಂದ ಎಚ್ಚೆತ್ತ ಗೌಡಗೆರೆ ಗ್ರಾಮದ ಯುವಜನತೆ ಮತ್ತು ಹಿರಿಯರು, ಏನಾದರೂ ಪ್ರಯತ್ನ ಮಾಡಿ ಕಲ್ಯಾಣಿಯನ್ನು ಉಳಿಸಬೇಕು, ಅದರ ಗತವೈಭವವನ್ನು ಮಾರುಕಳಿಸುವಂತೆ ಮಾಡಬೇಕು ಎಂದು ಯೋಚಿಸುತ್ತಿದ್ದ ಸಮಯದಲ್ಲಿ ಇವರ ಪವಿತ್ರ ಕಾರ್ಯಕ್ಕೆ ಬೆಂಗಳೂರಿನ ಪರಿತ್ರಾಣ ಫೌಂಡೇಶನ್ ಕೈ ಜೋಡಿಸಿದೆ.

ಪರಿತ್ರಾಣ ಫೌಂಡೇಶನ್ ಸ್ಥಾಪಕರಾದ ಸಚಿನ್ ಶಂಕರ್ ಮತ್ತು ಅವರ ತಂಡ, ಜಲಸಂರಕ್ಷಣೆ ಭಾಗವಾಗಿ ಐತಿಹಾಸಿಕ ಕೊಳದ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸಿತು. ಊರಿನ ಉತ್ಸಾಹಿ ಯುವಕರು, ಹಿರಿಯರು ಈ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು. ಅದರ ಫಲವಾಗಿ ಇಂದು ಸ್ವಚ್ಛವಾದ ಕಲ್ಯಾಣಿ ನಾವು ಕಾಣುವಂತಾಗಿದೆ.

ಸೆ.6ರ ಭಾನುವಾರ ಸೇರಿ ಹಿಂದಿನ ಎರಡು ಭಾನುವಾರಗಳಲ್ಲಿ ಶ್ರಮದಾನದ ಮೂಲಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದೆ. ಹೀಗಾಗಿ ಪರಿತ್ರಾಣ ಫೌಂಡೇಶನ್‌ ತಂಡದ ಕಾರ್ಯವು ಅನುಕರಣೀಯ ಮತ್ತು ಅಭಿನಂದನೀಯವಾಗಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರಶಂಸೆ

Ammanni Ammana Kalyani

ಪಾಂಡವಪುರ ತಾಲೂಕಿನ ಜನಪ್ರಿಯ ಯುವ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ಗ್ರಾಮಕ್ಕೆ ಭೇಟಿ ನೀಡಿ, ತಂಡದ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಅಲ್ಲದೆ ಕಲ್ಯಾಣಿಗೆ ಜಲಮರುಪೂರಣ ವ್ಯವಸ್ಥೆ ಶೀಘ್ರದಲ್ಲಿಯೇ ಕಲ್ಪಿಸುವುದಾಗಿ ಭರವಸೆ ನೀಡಿರುವುದು ಗ್ರಾಮಸ್ಥರಲ್ಲಿ ಮತ್ತು ತಂಡದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ.

ಸ್ವಚ್ಛತಾ ಕಾರ್ಯದಲ್ಲಿ ಸಚಿನ್ ಶಂಕರ್, ಮಹೇಶ್, ಸಂತೋಷ್, ದಿವ್ಯ, ಪವನ್, ನಾಗೇಶ್, ಲಿಖಿತ್ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು. ಇನ್ನು ತಂಡದ ಕಾರ್ಯವನ್ನು ಉತ್ತೇಜಿಸಲು ಚನ್ನಪಟ್ಟಣದ ಲಕ್ಷ್ಮಿಕಿಶೋರ್ ಅರಸ್, ಪಂಜಾಬ್‌ನ ರೊಪಡ್ ಜಿಲ್ಲೆಯ ನಿವಾಸಿಯಾದ ಯುವಕ ನವಜೋತ್ ಸಿಂಗ್ ಆಸಕ್ತಿಯಿಂದ ಆಕಸ್ಮಿಕವಾಗಿ ಬಂದು ಸೇವೆ ಸಲ್ಲಿಸಿದ್ದಾರೆ.

ಇನ್ನು ಹಾಸನ ಜಿಲ್ಲೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಸಂಚಾಲಕರಾದ ಟಿ.ವಿ. ನಟರಾಜ ಪಂಡಿತ್ ಅವರು ಆಗಮಿಸಿ, ಸಾಮಾಜಿಕ ಕಾರ್ಯಗಳನ್ನು ಯಾವ ಕಾರಣದಿಂದ ಮಾಡಬೇಕು, ಅವುಗಳ ಮಹತ್ವ ಮತ್ತು ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಮಾತನಾಡಿದರು.

ಒಟ್ಟಿನಲ್ಲಿ ಗ್ರಾಮಸ್ಥರ ಮತ್ತು ಪರಿತ್ರಾಣ ತಂಡದ ಸಂಘಟಿತ ಪ್ರಯತ್ನದಿಂದ ಗ್ರಾಮದ ಜಲಮೂಲವೂ ಉಳಿದು, ಜನರು, ಪಶು ಪಕ್ಷಿಗಳಿಗೆ ಶುದ್ಧ ನೀರಿನ ಆಸರೆ ಆಗಲಿ ಎಂಬುವುದು ಗ್ರಾಮಸ್ಥರ ಆಶಯವಾಗಿದೆ.