ಬಂಧಿತ ಸರ್ಕಾರಿ ಅಧಿಕಾರಿ ಜೈಲಿನಲ್ಲಿರಬೇಕಾದ ಬದಲು ಗೆಳತಿಯೊಂದಿಗೆ ಆಸ್ಪತ್ರೆಯಲ್ಲಿ ಪತ್ತೆ: ನ್ಯಾಯಾಧೀಶರು ಗರಂ
Government officer in hospital: ಕರ್ನಾಟಕ ಲೋಕಾಯುಕ್ತರಿಂದ ಬಂಧನಕ್ಕೊಳಗಾಗಿದ್ದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಮಂಡ್ಯ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವಿಐಪಿ ಸೌಲಭ್ಯ ನೀಡಲಾಗುತ್ತಿರುವುದು ಪತ್ತೆಯಾಗಿದೆ. ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ್ ಹಠಾತ್ ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಜೆಮಿನಿ ಎಐ ರಚಿತ ಚಿತ್ರ -
ಮಂಡ್ಯ, ಆ. 25: ಕರ್ನಾಟಕ ಲೋಕಾಯುಕ್ತರಿಂದ ಬಂಧನಕ್ಕೊಳಗಾಗಿದ್ದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಮಂಡ್ಯ (Mandya) ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವಿಶೇಷ ಉಪಚಾರ (VIP treatment) ನೀಡಲಾಗುತ್ತಿರುವುದು ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾಗುವಂತಹ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲದಿದ್ದರೂ ಅವರನ್ನು ಈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀರಂಗಪಟ್ಟಣದಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ (ADLR) ಮೊಹಮ್ಮದ್ ಹುಸೇನ್ ಅವರನ್ನು ಅಕ್ರಮ ಖಾತೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ನಿಯಮಗಳ ಪ್ರಕಾರ ಅವರನ್ನು ಜೈಲಿನಲ್ಲಿ ಇರಿಸಬೇಕಾಗಿತ್ತು. ಅದರ ಬದಲಾಗಿ, ಹುಸೇನ್ ಅವರನ್ನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (MIMS) ದಾಖಲಿಸಲಾಯಿತು. ಅಲ್ಲಿ ಅವರು ಸ್ಪೆಷಲ್ ತಂಗಿದ್ದರು.
ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ್ ಹಠಾತ್ ತಪಾಸಣೆ ನಡೆಸಿದಾಗ ಮೊಹಮ್ಮದ್ ಹುಸೇನ್ ಆಸ್ಪತ್ರೆಗೆ ದಾಖಲಾಗಿರುವುದು ಬೆಳಕಿಗೆ ಬಂದಿದೆ. ನ್ಯಾಯಾಧೀಶರು, ತಂಡದೊಂದಿಗೆ ಮಿಮ್ಸ್‌ಗೆ ಭೇಟಿ ನೀಡಿ ಹುಸೇನ್ ಅವರನ್ನು ದಾಖಲಿಸಲಾಗಿದ್ದ ವಾರ್ಡ್ ಪರಿಶೀಲಿಸಿದರು.
ನ್ಯಾಯಾಧೀಶರು ಪರಿಶೀಲಿಸುತ್ತಿರುವ ವಿಡಿಯೊ:
Prisoner found with his girlfriend inside a hospital ward during surprise inspections by KSLSA. Hussain who was working with govt was arrested by Lokayukta & was at MIMS hospital since Aug 21 for treatment he didn't apparently need. Detailed report has been sought. pic.twitter.com/oBAoXvqaYp
— Deepak Bopanna (@dpkBopanna) August 25, 2026
ತಪಾಸಣೆಯ ಸಮಯದಲ್ಲಿ, ನ್ಯಾಯಾಧೀಶರು ಹುಸೇನ್ ಅವರ ವೈದ್ಯಕೀಯ ಸ್ಥಿತಿಯ ಬಗ್ಗೆ ವೈದ್ಯರನ್ನು ಪ್ರಶ್ನಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗುವಷ್ಟು ಅನಾರೋಗ್ಯದಿಂದ ಹುಸೇನ್ ಬಳಲುತ್ತಿಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ. ಹುಸೇನ್ ತಂಗಿದ್ದ ವಿಶೇಷ ಕೋಣೆಯೊಳಗೆ ಯುವತಿಯೊಬ್ಬಳು ಪತ್ತೆಯಾದಾಗ ತಪಾಸಣೆ ಮತ್ತೊಂದು ತಿರುವು ಪಡೆದುಕೊಂಡಿತು. ಆಕೆಯ ಬಗ್ಗೆ ಪ್ರಶ್ನಿಸಿದಾಗ, ತಾನು ಹುಸೇನ್ ಗೆಳತಿ ಎಂದು ಹೇಳಿದ್ದಾಳೆ ಎನ್ನಲಾಗಿದೆ.
ಏರ್‌ಪೋರ್ಟ್ ಮಾದರಿಯಲ್ಲಿ ಮಂಡ್ಯ ರೈಲು ನಿಲ್ದಾಣ ಅಭಿವೃದ್ಧಿಗೆ ಕ್ರಮ: ಎಚ್.ಡಿ.ಕುಮಾರಸ್ವಾಮಿ
ಯಾವುದೇ ವೈದ್ಯಕೀಯ ಕಾರಣಗಳಿಲ್ಲದೆಯೇ ಹುಸೇನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಿರ್ಧಾರದ ಬಗ್ಗೆ ನ್ಯಾಯಾಧೀಶರು ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದರು. ಜೈಲು ವೈದ್ಯರ ಶಿಫಾರಸಿನ ಮೇರೆಗೆ ಹುಸೇನ್ ಅವರನ್ನು ದಾಖಲಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಹುಸೇನ್ ಅವರನ್ನು ಜೈಲಿನಿಂದ ಆಸ್ಪತ್ರೆಗೆ ವರ್ಗಾಯಿಸಿದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗಿದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ನ್ಯಾಯಾಲಯಕ್ಕೆ ಮಾಹಿತಿ ನೀಡಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದ ನ್ಯಾಯಾಧೀಶರು, ಹುಸೇನ್ ಆಸ್ಪತ್ರೆಗೆ ದಾಖಲಾಗಿರುವುದು ಸೇರಿ ವಿವಿಧ ವರದಿಗಳನ್ನು ಸಲ್ಲಿಸುವಂತೆ ಜೈಲು ಅಧಿಕಾರಿಗಳು ಮತ್ತು ಮಿಮ್ಸ್ ವೈದ್ಯಕೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.