Poisonous Sweet: ಎಂಎಲ್‌ಸಿ ಹೆಸರಿನಲ್ಲಿ ವಿಷದ ಲಾಡು ಗಿಫ್ಟ್, ತಪ್ಪಿದ ಅನಾಹುತ
Poisonous Sweet: ಎಂಎಲ್‌ಸಿ ಹೆಸರಿನಲ್ಲಿ ವಿಷದ ಲಾಡು ಗಿಫ್ಟ್, ತಪ್ಪಿದ ಅನಾಹುತ
ಹರೀಶ್ ಕೇರ
January 4, 2025
ಶಿವಮೊಗ್ಗ: ಹೊಸ ವರ್ಷಕ್ಕೆ (Nee Year) ಶುಭಾಶಯ ಕೋರುವ ನೆಪದಲ್ಲಿ ನಗರದ (Shivamogga news) ಎಂಎಲ್‌ಸಿ ಒಬ್ಬರ ಹೆಸರಿನಲ್ಲಿ ವಿಷ ಸೇರಿಸಿದ ಲಾಡುಗಳನ್ನು (Poisonous Sweet) ಗಿಫ್ಟ್ ಆಗಿ ನಾನಾ ಗಣ್ಯರಿಗೆ ಕಳುಹಿಸಲಾದ ಆತಂಕಕಾರಿ ಘಟನೆ ವರದಿಯಾಗಿದೆ.
ಶಿವಮೊಗ್ಗದ ಸರ್ಜಿ ಗ್ರೂಪ್ ಆಫ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಆದ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ನಗರದ ಹಲವರು ವೈದ್ಯರು ಸೇರಿ ಕೆಲವು ಗಣ್ಯ ವ್ಯಕ್ತಿಗಳಿಗೆ ವಿಷಮಿಶ್ರಿತ ಲಾಡುಗಳಿರುವ ಪಾರ್ಸಲ್ ಅನ್ನು ಕೊರಿಯರ್ ಮೂಲಕ ಕಳುಹಿಸಲಾಗಿದೆ. ಭದ್ರಾವತಿಯಿಂದ ಈ ಪಾರ್ಸೆಲ್ ಕಳುಹಿಸಲಾಗಿದೆ.
ಇದನ್ನು ಪಡೆದ ಎನ್‌ಇಎಸ್ ಕಾರ್ಯದರ್ಶಿ ನಾಗರಾಜ್ ಅವರು ಲಾಡನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಅನುಮಾನ ಬಂದ ಅವರು ಡಾ.ಸರ್ಜಿಯವರಿಗೆ ಕರೆ ಮಾಡಿ ನೀವು ಕಳುಹಿಸಿದ ಸಿಹಿ ವ್ಯತ್ಯಾಸವಾಗಿದೆ. ಬೇರೆಯವರಿಗೆ ಕಳುಹಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದಿದ್ದಾರೆ. ತಾವು ಯಾವುದೇ ಪಾರ್ಸಲ್ ಕಳುಹಿಸಿಲ್ಲ ಎಂದು ಡಾ.ಸರ್ಜಿ ತಿಳಿಸಿದ್ದಾರೆ.
ಕೂಡಲೇ ಅಲರ್ಟ್ ಆದ ನಾಗರಾಜ್, ಪೊಲೀಸರಿಗೆ ದೂರು ನೀಡಿದ್ದು, ಪರೀಕ್ಷೆಗಾಗಿ ಲ್ಯಾಬ್‌ಗೆ ಲಡ್ಡು ಬಾಕ್ಸ್‌ಗಳನ್ನು ರವಾನೆ ಮಾಡಿದ್ದಾರೆ. ತಮ್ಮ ತೇಜೋವಧೆ ಮಾಡುವ ದೃಷ್ಟಿಯಿಂದ ಈ ರೀತಿಯ ಕೃತ್ಯ ಎಸಗಲಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು. ಈಗಾಗಲೇ ಎಸ್ಪಿ ಅವರಿಗೆ ದೂರು ನೀಡಿದ್ದೇನೆ ಎಂದು ಡಾ.ಧನಂಜಯ ಸರ್ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.