ಮಾಜಿ ಸಚಿವ ಬಿ.ಸಿ. ನಾಗೇಶ್ ಪಾರ್ಥೀವ ಶರೀರದ ಅಂತಿಮ ರಥಯಾತ್ರೆ ಸಾಗುತ್ತಿದ್ದಂತೆ ಆಜಾನ್ ಕೂಗದೆ ಸೌಹಾರ್ದತೆ ಮೆರೆದ ಮುಸ್ಲಿಮರು
BC Nagesh: ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಸ್ಟ್ 18ರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ಅವರ ಪಾರ್ಥೀವ ಶರೀರದ ಮೆರವಣಿಗೆ ವೇಳೆ ತಿಪಟೂರಿನಲ್ಲಿ ಮುಸ್ಲಿಮರು ಆಜಾನ್ ಕೂಗದೆ ಗೌರವ ಸಲ್ಲಿಸಿದರು.
ತಿಪಟೂರಿನಲ್ಲಿ ಬಿ.ಸಿ. ನಾಗೇಶ್ ಅವರ ಅಂತಿಮ ಯಾತ್ರೆ -
ತಿಪಟೂರು, ಆ. 20: ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಸ್ಟ್ 18ರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ (BC Nagesh) ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯು ಸರ್ಕಾರಿ ಗೌರವಗಳೊಂದಿಗೆ ತಿಪಟೂರಿನ ಬಂಡಿಹಳ್ಳಿ ಗೇಟ್ ಬಳಿ ಇರುವ ರುದ್ರ ಭೂಮಿಯಲ್ಲಿ ಸಕಲ ಗೌರವಗಳೊಂದಿಗೆ ನೆರವೇರುತ್ತಿದೆ. ಈ ಮಧ್ಯೆ ಬಿ.ಸಿ. ನಾಗೇಶ್ ಪಾರ್ಥೀವ ಶರೀರದ ಅಂತಿಮ ರಥಯಾತ್ರೆ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದಿಂದ ವಿಶೇಷ ಗೌರವ ಸಲ್ಲಿಕೆಯಾಗಿದೆ. 1 ಗಂಟೆ ಸುಮಾರಿಗೆ ಮಸೀದಿ ಮುಂದೆ ಯಾತ್ರೆ ಬರುತ್ತಿದ್ದಂತ್ತೆಯೇ ಆಜಾನ್ ಕೂಗದೆ ಮುಸ್ಲಿಮರು ಗೌರವ ಸಲ್ಲಿಸಿದರು. ಮುಸ್ಲಿಮರ ಕೋಮು ಸೌಹಾರ್ದತೆಯ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಿಪಟೂರು ನಗರದ ದೊಡ್ಡಪೇಟೆಯ ಜಾಮಿಯ ಮಸೀದಿ ಬಳಿ ಈ ದೃಶ್ಯ ಕಂಡು ಬಂದಿದೆ. ಆಜಾನ್ ಕೂಗುವ ವೇಳೆಗೆ ಮಸೀದಿ ಮುಂದೆ ಸಾಗುತ್ತಿದ್ದ ಪಾರ್ಥೀವ ಶರೀರದ ಯಾತ್ರೆ ಸಾಗುತ್ತಿತ್ತು. ಕೂಡಲೇ ಅವರು ಆಜಾನ್ ಕೂಗದಿರಲು ನಿರ್ಧರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದ ಸೋಮಣ್ಣ
ನಾಗೇಶ್ ಅವರ ಅಂತಿಮ ದರ್ಶನ ಪಡೆದು ತಿಪಟೂರಿನಲ್ಲಿ ಮಾತನಾಡಿದ ಸಚಿವ ಸೋಮಣ್ಣ ಭಾವುಕರಾದರು. ʼʼನಾಗೇಶ್ ಎಷ್ಟು ಸಾರಿ ಶಾಸಕ ಸಚಿವರಾಗಿದ್ದರು ಅನ್ನೋದು ಮುಖ್ಯ ಅಲ್ಲ. ಉತ್ತಮ ವ್ಯಕ್ತಿಯನ್ನ ಕಳೆದುಕೊಂಡಿದ್ದೇವೆ. ಅವರ ಅನಿವಾರ್ಯತೆ, ಅವಶ್ಯಕತೆ ಇನ್ನೂ ಇತ್ತು. ಲೋಕಸಭೆ ಚುನಾವಣೆಯಲ್ಲಿ ಜೆ.ಸಿ. ಮಾಧುಸ್ವಾಮಿ ಜತೆ ಮಾತ್ನಾಡಬೇಕು ಅಂತ ಹೇಳಿದ್ದರುʼʼ ಎಂದರು. ಇನ್ನು ಕುಟುಂಬಕ್ಕೆ ರಾಜಕೀಯ ಪ್ರಾಧ್ಯನತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ʼʼಅವರ ಹಣೆ ಬರಹದಲ್ಲಿ ಇದ್ದ ಹಾಗೆ ಆಗುತ್ತೆʼʼ ಎಂದು ಹೇಳಿದರು.
ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ
ವಿದ್ಯಾರ್ಥಿಗಳಿಂದ ಅಂತಿಮ ನಮನ
ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಬಿ.ಸಿ. ನಾಗೇಶ್ ಪಾರ್ಥಿವ ಶರರೀಕ್ಕೆ ಅಂತಿಮ ನಮನ ಸಲ್ಲಿಸಿದರು. ಮೌನಾಚಾರಣೆ ಮೂಲಕ ವಿದ್ಯಾರ್ಥಿಗಳಿಂದ ಗೌರವ ಸಲ್ಲಿಸಿದರು.
ತಿಪಟೂರು ನಗರ ಅಕ್ಷರಶಃ ಸ್ಥಬ್ಧ
ಇನ್ನು ತಿಪಟೂರು ನಗರ ಅಕ್ಷರಶಃ ಸ್ಥಬ್ಧವಾಗಿತ್ತು. ಸಣ್ಣ-ಸಣ್ಣ ಗೂಡಂಗಡಿಗಳು ಸೇರಿ ಬೃಹತ್ ಮಳಿಗೆಗಳು ಕೂಡ ಸಂಪೂರ್ಣ ಬಂದ್ ಆಗಿಸದ್ದವು. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಮಾಲಕರು ಗೌರವ ಸೂಚಿಸಿದರು. ನಾಗೇಶ್ ಪಾರ್ಥೀವ ಶರೀರದ ಅಂತಿಮ ಯಾತ್ರೆ ತಿಪಟೂರು ನಗರದಲ್ಲಿ ಸಾಗುತ್ತಿದ್ದಂತೆ ಹಲವರು ನೆಚ್ಚಿನ ನಾಯಕನಿಗೆ ಕಂಬನಿ ಮಿಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ದತೆ ನಡೆಯುತ್ತಿದ್ದು, ನಾಯಕರಾದ ಬಸವನಗೌಡ ಯತ್ನಾಳ್ ಭಾಗಿ, ಸುರೇಗೌಡ, ಜ್ಯೋತಿಗಣೇಶ್ ಭಾಗಿಯಾಗಿದ್ದಾರೆ. 67 ವರ್ಷದ ನಾಗೇಶ್ 1 ವರ್ಷದಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
![]()
ನಾಗೇಶ್ ನನ್ನ ಅತ್ಯಂತ ಆಪ್ತ ಹಾಗೂ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಆಗಲಿಕೆ ವೈಯಕ್ತಿಕವಾಗಿ ನನಗೆ ತೀವ್ರ ನೋವನ್ನುಂಟು ಮಾಡಿದೆ. ವಿದ್ಯಾರ್ಥಿ ದೆಶೆಯಲ್ಲಿ ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನ ಪ್ರಾಮಾಣಿಕ ಕಾರ್ಯಕರ್ತನಾಗಿ ಬೆಳೆದ ಅವರು, ಸದಾ ಬಡವರ ಪರವಾಗಿ ನಿಂತು ಸೇವೆ ಸಲ್ಲಿಸಿದ್ದಾರೆ. ಅವರು ತಿಪಟೂರು ತಾಲೂಕು ಹಾಗೂ ರಾಜ್ಯಮಟ್ಟದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು.
-ಡಾ.ಜಿ. ಪರಮೇಶ್ವರ್, ಡಿಸಿಎಂ