ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೋಸ್ಟರ್ ಅಂಟಿಸುವ ಹಳೇ ಚಾಳಿ ಬಿಡಬೇಕು : ಸಿಎಂ ವಿರುದ್ಧ ವಾಗ್ದಾಳಿ ಮಾಡಿದ ಕುಮಾರಸ್ವಾಮಿ

ತಾಲೂಕಿನ ಸಿ.ಎಸ್.ಪುರದಲ್ಲಿ ನೂತನವಾಗಿ ನಿರ್ಮಿಸಿರುವ ಸಾರ್ವಜನಿಕ ಸಮುದಾಯ ಭವನ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ದೊಡ್ಡ ಆಲಹಳ್ಳಿಯಲ್ಲಿ ಟೆಂಟ್ ನಡೆಸುತ್ತಿದ್ದ ಕಾಲದಿಂದಲೂ ಪೋಸ್ಟರ್ ಅಂಟಿಸುವ ಚಾಳಿ ಹೊಂದಿರುವವರು ಮುಖ್ಯಮಂತ್ರಿಯಾದ ಮೇಲೂ ಅದನ್ನು ಬಿಟ್ಟಿಲ್ಲ ಎಂದು ಹೆಸರು ಹೇಳದೆ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು

ಪೋಸ್ಟರ್ ಅಂಟಿಸುವ ಹಳೇ ಚಾಳಿ ಬಿಡಬೇಕು

-

Profile
Ashok Nayak Nov 15, 2026 2:32 PM

ಗುಬ್ಬಿ: ಬರಗಾಲದ ನಡುವೆ ರೈತಪರ ಯೋಜನೆ ರೂಪಿಸಿ ಜವಾಬ್ದಾರಿ ಆಡಳಿತ ನಡೆಸುವುದು ಬಿಟ್ಟು ಪೋಸ್ಟರ್ ಅಂಟಿಸುವ ಹಳೇ ಚಾಳಿ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ವಿರುದ್ಧ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ವಾಗ್ದಾಳಿ ನಡೆಸಿದರು.

ತಾಲೂಕಿನ ಸಿ.ಎಸ್.ಪುರದಲ್ಲಿ ನೂತನವಾಗಿ ನಿರ್ಮಿಸಿರುವ ಸಾರ್ವಜನಿಕ ಸಮುದಾಯ ಭವನ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ದೊಡ್ಡ ಆಲಹಳ್ಳಿಯಲ್ಲಿ ಟೆಂಟ್ ನಡೆಸುತ್ತಿದ್ದ ಕಾಲದಿಂದಲೂ ಪೋಸ್ಟರ್ ಅಂಟಿಸುವ ಚಾಳಿ ಹೊಂದಿರುವವರು ಮುಖ್ಯಮಂತ್ರಿಯಾದ ಮೇಲೂ ಅದನ್ನು ಬಿಟ್ಟಿಲ್ಲ ಎಂದು ಹೆಸರು ಹೇಳದೆ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ರಾಜ್ಯದ ಆಡಳಿತದಲ್ಲಿ ಜನರ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಟೀಕಿಸಿದ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುಮಾರಸ್ವಾಮಿಗೆ ಹೊಟ್ಟೆ ಉರಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾನು ಮುಖ್ಯಮಂತ್ರಿ ಪದವಿಯನ್ನು ಕಾಣದವನೇನಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ. ಆದರೆ ಇವರಂತೆ ಬೇರೆಯವರ ಸ್ಟಿಂಗ್ ವಿಡಿಯೋಗಳನ್ನು ಮಾಡಿಕೊಂಡು ಕೂರುವ ಕೆಲಸ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: H.D. Kumaraswamy's event cancel: ರಾಜಕೀಯ 'ಕೈ ಚಳಕ'; ಮಂಡ್ಯದ ಸರಕಾರಿ ಮಹಿಳಾ ಕಾಲೇಜಿನಲ್ಲಿ ರದ್ದಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ!

2018ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಅಂದು ರೈತರ ಸಂಕಷ್ಟವನ್ನು ಮನಗಂಡು ಸಾಲಮನ್ನಾ ಯೋಜನೆ ಜಾರಿಗೆ ತಂದಿದ್ದೆ. ಇಂದು ಆ ರೈತರ ಆಶೀರ್ವಾದವೇ ನನ್ನನ್ನು ಕಾಪಾಡುತ್ತಿದೆ ಎಂದು ಹೇಳಿದ ಅವರು 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ದೇವೇಗೌಡರ ಮನೆಗೆ ಬಂದು ಸರ್ಕಾರ ರಚನೆಗೆ ಸಹಕಾರ ಕೋರಿದ್ದರು. ದೇವೇಗೌಡರು ತಮ್ಮ ಮಗನ ಆರೋಗ್ಯ ಸರಿಯಿಲ್ಲ, ನೀವೇ ಮುಖ್ಯಮಂತ್ರಿಯಾಗಿ ಎಂದು ಹೇಳಿದರೂ ಕಾಂಗ್ರೆಸ್ ನಾಯಕರು ಒಪ್ಪದೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಆದರೆ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಕಿರುಕುಳ ನೀಡಲು ಆರಂಭಿಸಿದರು ಎಂದು ಗಂಭೀರವಾಗಿ ಆರೋಪಿಸಿದ್ದರು. ಎಲ್ಲವನ್ನೂ ಸಹಿಸಿಕೊಂಡು ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದೆ. ಅಧಿಕಾರಕ್ಕಾಗಿ ಅಲ್ಲ, ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡಿದೆ ಎಂದು ತಮ್ಮ ಹಿಂದಿನ ಆಡಳಿತದ ಅನುಭವವನ್ನು ಹಂಚಿಕೊಂಡರು.

ರಾಜ್ಯದಲ್ಲಿ ರೈತರು, ಬಡವರು ಹಾಗೂ ಮಧ್ಯಮ ವರ್ಗದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಜನರ ಗಮನವನ್ನು ಬೇರೆಡೆ ಸೆಳೆಯುವ ಬದಲು ಅಭಿವೃದ್ಧಿ ಕಾರ್ಯಗಳು, ನೀರಾವರಿ, ಉದ್ಯೋಗ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ ಅವರು ಮುಂಬರುವ ಚುನಾವಣೆಯಲ್ಲಿ ತುರುವೇಕೆರೆಯ ಲ್ಲಿ ಎನ್‌ಡಿಎ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಣ್ಣ ತಮ್ಮಂದಿರ ರೀತಿ ಜಯರಾಮ್ ಹಾಗೂ ಕೃಷ್ಣಪ್ಪ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ನಿಲ್ಲುವುದಿಲ್ಲ. ಅವಿರೋಧ ಆಯ್ಕೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ತಾಲ್ಲೂಕಿನ ಜನರ ಮೇಲೆ ಮಾಜಿ ಪ್ರಧಾನಿ ಎಚ್.ಡಿ .ದೇವೇಗೌಡರ ಋಣ ಬಹಳಷ್ಟಿದೆ. ದೇವೇಗೌಡರು ಕಾಲುವೆಗಳ ಮೂಲಕ ನೀರು ತಂದು ನಮ್ಮ ಭಾಗಕ್ಕೆ ನೀಡದಿದ್ದರೆ ಇಂದು ನಮ್ಮ ಪ್ರದೇಶವೂ ಬಳ್ಳಾರಿ ಜಿಲ್ಲೆಯಂತೆ ಬರಪೀಡಿತವಾಗಬೇಕಿತ್ತು. ನೀರಾವರಿ ಸೌಲಭ್ಯದಿಂದಾಗಿ ಈ ಭಾಗದ ಕೃಷಿ ಮತ್ತು ಜನಜೀವನದಲ್ಲಿ ಮಹತ್ವದ ಬದಲಾವಣೆ ಯಾಗಿದೆ. 2009 ರ ಉಪಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಿ.ಎಸ್.ಪುರ ಭಾಗದ ಜನರ ಕೊಡುಗೆ ಅಪಾರವಾಗಿದೆ. ಈ ಭಾಗದ ಜನರು ನೀಡಿದ ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಋಣ ತೀರಿಸುವ ಉದ್ದೇಶದಿಂದ ರೈತರು ಹಾಗೂ ಬಡವರ ಅನುಕೂಲಕ್ಕಾಗಿ ಈ ಸಮುದಾಯ ಭವನ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಸುಮಾರು 35 ಸಾವಿರ ರೂಪಾಯಿ ಬಾಡಿಗೆ ಪಡೆದು ಸಾರ್ವಜನಿಕರ ಶುಭ ಸಮಾರಂಭಗಳಿಗೆ ಭವನವನ್ನು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಕಡಿಮೆ ವೆಚ್ಚದಲ್ಲಿ ಸಮಾರಂಭಗಳನ್ನು ಆಯೋಜಿಸಲು ಈ ಭವನ ಸಹಕಾರಿ ಯಾಗಲಿದೆ. ಭವನದ ನಿರ್ವಹಣೆ, ಸ್ವಚ್ಛತೆ ಹಾಗೂ ಸಾರ್ವಜನಿಕ ಬಳಕೆಯ ನಿಯಮಗಳನ್ನು ಸ್ಥಳೀಯ ಸಮಿತಿ ರೂಪಿಸಲಿದೆ. ಸುಸಜ್ಜಿತ ಸಮುದಾಯ ಭವನ ನಿರ್ಮಾಣದಲ್ಲಿ ಹಲವರ ಕೊಡುಗೆ ಇದೆ. ಹೋಬಳಿಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಭವನವನ್ನು ಸ್ವಚ್ಛವಾಗಿ ಕಾಪಾಡುವುದರ ಜತೆಗೆ ಎಲ್ಲ ವರ್ಗದ ಜನರಿಗೂ ಸಮಾನವಾಗಿ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದೊಂದಿಗಿನ ಆತ್ಮೀಯ ಸಂಬಂಧವನ್ನು ಸ್ಮರಿಸಿದ ಕೃಷ್ಣಪ್ಪ, ದೇವೇಗೌಡರ ಮನೆಯ ಅನ್ನ ತಿಂದಿದ್ದೇನೆ. ಅವರ ಪತ್ನಿ ಚೆನ್ನಮ್ಮ ಅವರು ನನ್ನನ್ನು ಮನೆಯ ಮಗನಂತೆ ಸತ್ಕರಿಸಿದ್ದಾರೆ. ಮನೆಗೆ ಹೋದಾಗ 'ಬಾ ಕೃಷ್ಣ ಎಂದೇ ವಿಶೇಷ ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ಮತ್ತು ವಿಶ್ವಾಸವನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು.

ಆದ್ದರಿಂದ ರಾಜಕೀಯ ಬಿಡುತ್ತೇನೆಯೇ ಹೊರತು ಜೆಡಿಎಸ್ ಪಕ್ಷವನ್ನು ಬಿಡುವುದಿಲ್ಲ. ಆದರೆ ಡಿಕೆಶಿ ಅವರು ಕಾಂಗ್ರೆಸ್ ನತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ಸಾವಿರ ಕೋಟಿ ಕೊಟ್ಟರೂ ಕಾಂಗ್ರೆಸ್ ಹೋಗಲ್ಲ. ನನ್ನ ಜೀವ ಇರುವವರೆಗೂ ಜೆಡಿಎಸ್‌ನಲ್ಲೇ ಇರುತ್ತೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ(M T Krishnappa) ಘೋಷಿಸಿದರು.

ಕಾರ್ಯಕ್ರಮದಲ್ಲಿ ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಮ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ನಿಂಗಪ್ಪ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಮಾಜಿ ಅಧ್ಯಕ್ಷ ಆರ್.ಸಿ.ಆಂಜನಪ್ಪ, ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಕುಣಿಗಲ್‌ನ ಡಾ.ರವಿ ನಾಗರಾಜಯ್ಯ, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.