Tumkur News: ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜಾಗೃತಿ ವಹಿಸಬೇಕು : ಚೇಳೂರು ಪಿಎಸ್ಸೈ ನಾಗರಾಜು
Tumkur News: ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜಾಗೃತಿ ವಹಿಸಬೇಕು : ಚೇಳೂರು ಪಿಎಸ್ಸೈ ನಾಗರಾಜು
Ashok Nayak
December 20, 2024
ಗುಬ್ಬಿ: ಆಧುನಿಕತೆ ಬೆಳೆದಂತೆ ಅಪರಾಧ ಕೃತ್ಯ ಹಾಗೂ ಅನೈತಿಕ ಚಟುವಟಿಕೆ ಹೆಚ್ಚಾಗತೊಡಗಿದೆ. ವಿಶ್ವಮಟ್ಟದ ಪಿಡುಗು ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಎಚ್ಚರವಹಿಸಬೇಕು ಎಂದು ಚೇಳೂರು ಪಿಎಸ್ಸೈ ನಾಗರಾಜು ಕರೆ ನೀಡಿದರು.
ತಾಲ್ಲೂಕಿನ ಚೇಳೂರು ಗ್ರಾಮದ ಕಾಳಿದಾಸ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಸಿದ್ದಗಂಗಾ ರೋಟರಿ ಅಭಿವೃದ್ದಿ ಸಂಸ್ಥೆ, ಹೈದರಬಾದ್ ವೈ ಚಾಯ್ಸ್ ಫೌಂಡೇಶನ್, ತುಮಕೂರು ಒನ್ ಸ್ಟಾಪ್ ಸೆಂಟರ್ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆದ ಸುರಕ್ಷಿತಾ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಮಕ್ಕಳು ಹಾಗೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಆಸೆ ಆಮಿಷಯೊಡ್ಡಿ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಊರಿನ ಪ್ರಜ್ಞಾವಂತ ಜನರು ಈ ಬಗ್ಗೆ ನಿಗಾವಹಿಸಿ ಹೊಸಬರ ಪರಿಚಯ ಅವರ ನಡೆನುಡಿ ಗಮನಿಸಿ ಅನುಮಾನ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಜಯಣ್ಣ ಮಾತನಾಡಿ ಮಕ್ಕಳಲ್ಲಿ ಈ ಬಗ್ಗೆ ಎಚ್ಚರಿಕೆ ಅಗತ್ಯವಿದೆ. ಹಳ್ಳಿಯಿಂದ ಶಾಲೆಗೆ ಬಂದು ಮರಳಿ ಹೋಗುವಾಗ ರಸ್ತೆಯಲ್ಲಿ ಅಪರಿಚಿತರ ಸಂಪರ್ಕ ಮಾಡದಂತೆ ಜಾಗೃತಿ ಮೂಡಿಸಬೇಕಿದೆ. ಮಕ್ಕಳ ಮಾರಾಟ ದಂಧೆ ಈಗಾಗಲೇ ಸಾಕಷ್ಟು ಕಡೆ ನಡೆದಿದೆ. ಈ ನಿಟ್ಟಿನಲ್ಲಿ ಮಾನವ ಸಾಗಾಣಿಕೆ ಬಗ್ಗೆ ಪೊಲೀಸ್ ಇಲಾಖೆ ಜೊತೆ ಸಾರ್ವಜ ನಿಕರು ಕೈ ಜೋಡಿಸಿ ಈ ಕ್ರೈಮ್ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಅಭಿವೃದ್ದಿ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿದ್ಧಗಂಗಾ ರೋಟರಿ ಸಂಸ್ಥೆ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಮಾನವ ಕಳ್ಳ ಸಾಗಾಣಿಕೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕೂಡ ಒಂದಾಗಿದೆ. ಮಕ್ಕಳ ಹಕ್ಕು ಕಸಿದು ದುಡಿಮೆ ಮಾಡಿಸಲು ಊರಿಂದ ಊರಿಗೆ ಕರೆ ತರುವ ಸಾಗಾಣಿಕೆ ನಡೆಯುತ್ತಿದೆ. ಮಾನವ ಕಳ್ಳ ಸಾಗಾಣಿಕೆ ದಂಧೆಯ ಒಂದು ಭಾಗವಾದ ಬಾಲ ಕಾರ್ಮಿಕರ ಬಗ್ಗೆ ಸಹ ನಾವು ಸೂಕ್ಷ್ಮವಾಗಿ ಅಧ್ಯಯನ ನಡೆಸಿ ದಂಧೆಗೆ ಕಡಿವಾಣ ಹಾಕಲು ಪ್ರಯತ್ನ ನಡೆಸಿದ್ದೇವೆ ಎಂದು ತಿಳಿಸಿದರು.
ಸಿದ್ದಗಂಗಾ ರೋಟರಿ ಸಂಸ್ಥೆ ಸದಸ್ಯ ಶಿವರಾಜ್ ಮಾತನಾಡಿ ಚಿನ್ನಾಭರಣ, ಹಣ ಸೇರಿದಂತೆ ಇನ್ನಿತರ ವಸ್ತುಗಳ ಕಳ್ಳತನ ನಡೆದ ಈ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ಈಗ ದೊಡ್ಡ ಮಾರಕವಾಗಿದೆ. ಮಾನವ ಹಕ್ಕು ಉಲ್ಲಂಘನೆ ಜೊತೆಗೆ ಅಕ್ರಮ ದಂಧೆಗೆ ಮೂಲವಾದ ಈ ಸಾಗಾಣಿಕೆ ನಿಲ್ಲಿಸಲು ಎಲ್ಲರೂ ಪಣ ತೊಡಬೇಕು ಎಂದರು.
ಈ ಸಂದರ್ಭದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಶ್ವೇತಾ, ಅಭಿವೃದ್ದಿ ಸಂಸ್ಥೆಯ ಹೈದರ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಇದ್ದರು.