ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಅ.10ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ: ಅನಂತ ಹೆಗಡೆ ಅಶೀಸರ

ಬೆಂಗಳೂರಿನ ಬೃಹತ್ ಧರಣಿಗೆ ವ್ಯಾಪಕ ಸಿದ್ಧತೆ ನಡೆಸಲಾಗಿದ್ದು, ನಿರ್ವಹಣೆಗಾಗಿ ಸಂಚಾಲನಾ ಸಮಿತಿ ರಚಿಸಲಾಗಿದೆ. ಬೇಡ್ತಿ (ಗಂಗಾವಳಿ)- ವರದಾ ನದಿ ಜೋಡಣೆ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ವಿರೋಧಿಸಿ ಅ.10ರಂದು ಬೆಂಗಳೂರಿನಲ್ಲಿ 3 ಸಾವಿರಕ್ಕೂ ಅಧಿಕ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾಹಿತಿ ನೀಡಿದ್ದಾರೆ.

ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಅ.10ಕ್ಕೆ ಬೆಂಗಳೂರಿನಲ್ಲಿ ಧರಣಿ

-

Prabhakara R
Prabhakara R Oct 3, 2026 5:58 PM

ಶಿರಸಿ: ಬೇಡ್ತಿ (ಗಂಗಾವಳಿ)- ವರದಾ ನದಿ ಜೋಡಣೆ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಧರಣಿಯಲ್ಲಿ 3 ಸಾವಿರಕ್ಕೂ ಅಧಿಕ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

ನಗರದ ಯೋಗ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬೃಹತ್ ಧರಣಿಗೆ ವ್ಯಾಪಕ ಸಿದ್ಧತೆ ನಡೆಸಲಾಗಿದ್ದು, ನಿರ್ವಹಣೆಗಾಗಿ ಸಂಚಾಲನಾ ಸಮಿತಿ ರಚಿಸಲಾಗಿದೆ. ಧರಣಿಯಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಜಸ್ಟಿಸ್ ಸಿ.ಎಂ.ಜೋಶಿ, ಪರಿಸರ ತಜ್ಞ ಪ್ರೊ. ಎ.ಎನ್. ಯಲ್ಲಪ್ಪ ರೆಡ್ಡಿ, ಪ್ರಮುಖರಾದ ಡಾ.ವಿ.ಎನ್.ನಾಯಕ, ಬಸವರಾಜ ಪಾಟೀಲ, ಡಾ.ಗಿರಿಧರ ಕಜೆ, ನಾರಾಯಣ ಹೆಬ್ಬಾರ, ಚಕ್ರವರ್ತಿ ಸೂಲಿಬೆಲೆ, ತೇಜಸ್ವಿನಿ ಅನಂತಕುಮಾರ, ಡಾ.ಶ್ರೀನಿವಾಸ ರೆಡ್ಡಿ, ಡಾ.ಟಿ.ವಿ.ರಾಮಚಂದ್ರ, ಶಾಂತಾರಾಮ ಸಿದ್ದಿ, ನೀರ್ನಳ್ಳಿ ರಾಮಕೃಷ್ಣ, ಡಾ.ಪ್ರಕಾಶ ಮೇಸ್ತ, ಅರವಿಂದ ನಾಯಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪಶ್ಚಿಮಘಟ್ಟ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಬೃಹತ್ ಯೋಜನೆಗಳಿಂದ ನದಿಗಳ ಧಾರಣಾ ಸಾಮರ್ಥ್ಯ ಕುಸಿದಿದೆ. ನೀರಿಲ್ಲದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್‌ ಅನ್ನು ತಡೆಹಿಡಿದು, ಸಮೀಕ್ಷಾ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದು ವಿಜ್ಞಾನಿಗಳು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ಧರಣಿಯಲ್ಲಿ ಒತ್ತಾಯಿಸಲಾಗುವುದು ಎಂದರು.

ಶ್ರೀ ಸ್ವರ್ಣವಲ್ಲಿ ಮಠದ ಶ್ರೀಗಳ ಚಾತುರ್ಮಾಸ ಸಂದರ್ಭದಲ್ಲಿ ಕೇವಲ ಮೂರು ತಿಂಗಳಲ್ಲಿ ಭಕ್ತರಿಂದ ಮುಖ್ಯಮಂತ್ರಿಗೆ 15 ಸಾವಿರ ಪತ್ರಗಳನ್ನು ಬರೆಯಲಾಗಿದೆ. ಇದೀಗ ಅ.10ರಂದು ಬೆಂಗಳೂರಿನಲ್ಲಿ 3 ಸಾವಿರಕ್ಕೂ ಅಧಿಕ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಬೇಡ್ತಿ ಚಳವಳಿಯ ಭಾಗವಾಗಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಪರಿಸರ ಗೀತೆ ರಚನಾ ಸ್ಪರ್ಧೆಯ ಗೀತೆಗಳ ಸಿಡಿಯನ್ನು ಧರಣಿಯಲ್ಲಿ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.

ನವೆಂಬರ್‌ನಲ್ಲಿ ಯಲ್ಲಾಪುರದಲ್ಲಿ ರಸ್ತೆ ತಡೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಬೇಡ್ತಿ-ಅಘನಾಶಿನಿ ಯೋಜನೆ ಕೈಬಿಡುವ ಕುರಿತು ಚರ್ಚಿಸಲು ದಿನಾಂಕ ನಿಗದಿಪಡಿಸಲು ಶಾಸಕರು ತುರ್ತಾಗಿ ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ಧರಣಿಯ ಮಾಹಿತಿಗಾಗಿ ವಿವೇಕ (9741033442) ಮತ್ತು ರಮೇಶ್ ಭಟ್ (9880280486) ಸಂಪರ್ಕಿಸಬಹುದು ಎಂದರು.

ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಬೆಂಗಳೂರಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಜನರು ನೆಲೆಸಿದ್ದಾರೆ. ಜಿಲ್ಲೆಯ ಜೀವನದಿಗಳ ರಕ್ಷಣೆಗಾಗಿ ಹೋರಾಟ ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಧರಣಿಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು. ನಮ್ಮ ಕೂಗು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಬರಬೇಕು ಎಂದರು.

ಯೋಜನೆ ವಿರುದ್ಧ ರಾಜೀನಾಮೆ ನೀಡಲು ಸಿದ್ಧ ಎಂದು ಜನಪ್ರತಿನಿಧಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ನದಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವುದನ್ನು ಸರ್ಕಾರಕ್ಕೆ ಮನದಟ್ಟು ಮಾಡಬೇಕಿದೆ. ನದಿ ಜೋಡಣೆ ಯೋಜನೆಗೆ ಪೂರ್ಣ ವಿರಾಮ ಹಾಕುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ವಿಶ್ವನಾಥ ಶಿಗೇಹಳ್ಳಿ, ರಮೇಶ ದುಬಾಶಿ, ಗಣಪತಿ ಬಿಸಲಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

image

ಬೇಡ್ತಿ-ವರದಾ ನದಿ ತಿರುವು ಯೋಜನೆಯು ಡಿಪಿಆರ್ ಹಂತಕ್ಕೆ ತಲುಪಿದ್ದು, ಯೋಜನಾ ಸ್ಥಳದ ಸರ್ವೆ ನಡೆಸಲು ಖಾಸಗಿ ಕಂಪೆನಿಯೊಂದಕ್ಕೆ ಟೆಂಡರ್ ನೀಡಲಾಗಿದೆ. ಹೀಗಾಗಿ ಜಿಲ್ಲೆಯ ಜನರ ಬದುಕಿ‌ನ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ.

-ಅನಂತ ಹೆಗಡೆ ಅಶೀಸರ, ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ