ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಅನುಷ್ಠಾನಕ್ಕೆ ಪ್ರಯತ್ನ: ಶಿವಾನಂದ ತಗಡೂರು
Vijayanagara News: ಹಿರಿಯ ಪತ್ರಕರ್ತ ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿರುವ ಕಾನಿಪ 95 ವರ್ಷಗಳನ್ನು ಪೂರೈಸುತ್ತದೆ. ದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಏಕೈಕ ಪತ್ರಕರ್ತರ ಸಂಘ ನಮ್ಮದು ಎಂಬುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಹೊಸಪೇಟೆಯಲ್ಲಿ ಕೆಯುಡಬ್ಲ್ಯೂಜೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಶಿವಾನಂದ ತಗಡೂರು. -
ಹೊಸಪೇಟೆ, ಡಿ.29: ಗ್ರಾಮೀಣ ಪತ್ರಕರ್ತರ ಪ್ರಮುಖ ಬೇಡಿಕೆಯಾಗಿರುವ ಉಚಿತ ಬಸ್, ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಜಾರಿಗೆ ಅಡ್ಡಿಯಾಗಿರುವ ಷರತ್ತುಗಳನ್ನು ಸಡಿಲಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿರುವುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು (Shivanand Tagadur) ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಹೊಸಪೇಟೆಯಲ್ಲಿ (Vijayanagara News) ಸೋಮವಾರ ಏರ್ಪಡಿಸಿದ್ದ ಸಂಘದ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಒದಗಿಸಬೇಕು ಎಂಬುದು ಮೂರು ದಶಕಗಳ ಬೇಡಿಕೆಯಾಗಿದೆ. ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿ, ಅನುದಾನವನ್ನೂ ತೆಗೆದಿರಿಸಿದರು. ಆದರೆ, ಪಾಸ್ ಪಡೆಯಲು ಕಾಯಂ ನೌಕರನಾಗಿಬೇಕು ಎಂಬ ಷರತ್ತು ವಿಧಿಸಿತ್ತು. ಆ ಬಗ್ಗೆ ಸಿಎಂ ಗಮನಕ್ಕೆ ತಂದು, ಕೈಬಿಡುವಂತೆ ಮಾಡಲಾಯಿತು. ಆನಂತರ ಮಾಸಿಕ ವೇತನ ಪಡೆದಿರಬೇಕು ಎಂಬ ಷರತ್ತು ಹಾಕಿದೆ. ಅದರಂತೆ ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಯೋಜನೆಗೆ ಮಾನ್ಯತೆ ಪಡೆದವರಿಗೆ ಮಾತ್ರ ಎಂದು ಷರತ್ತು ವಿಧಿಸಿದೆ. ಈ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದು, ಎಲ್ಲ ಪತ್ರಕರ್ತರಿಗೆ ಅನ್ವಯವಾಗುವಂತೆ ಜಾರಿಗೆ ತರುವಂತೆ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುವುದಾಗಿ ತಿಳಿಸಿದರು.
ಹಿರಿಯ ಪತ್ರಕರ್ತ ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿರುವ ಕಾನಿಪ 95 ವರ್ಷಗಳನ್ನು ಪೂರೈಸುತ್ತದೆ. ದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಏಕೈಕ ಪತ್ರಕರ್ತರ ಸಂಘ ನಮ್ಮದು ಎಂಬುದು ಹೆಮ್ಮೆಯ ಸಂಗತಿ. ಸಂಘದ ನೂತನ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕು. ಸಂಘದ ಎಲ್ಲ ಸದಸ್ಯರ ಹಿತ ಕಾಯುವ ಜತೆಗೆ ಗ್ರಾಮೀಣ ಪ್ರದೇಶದ ಕಟ್ಟಕಡೆಯ ಸದಸ್ಯನನ್ನೂ ಸಮಾನವಾಗಿ ನೋಡುವ ವ್ಯಕ್ತಿತ್ವ, ಅವರ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯಿಸಿಕೊಳ್ಳವ ಪತ್ರಿಕೋದ್ಯಮಕ್ಕೆ ಸಮಾಜದಲ್ಲಿ ಅತ್ಯುನ್ನತ ಗೌರವವಿದೆ. ಸ್ವಾತಂತ್ರ ಸಂಗ್ರಾಮದಲ್ಲಿ ಜನಾಭಿಪ್ರಾಯ ಮೂಡಿಸಲು ಮಹಾತ್ಮ ಗಾಂಧೀಜಿ, ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಪತ್ರಕರ್ತರು, ಸಂಪಾದಕರಾಗಿದ್ದರು. ಆಗ ಸೇವೆಯೇ ಪತ್ರಿಕೋದ್ಯಮ ಮುಖ್ಯಧ್ಯೇಯವಾಗಿತ್ತು. ಕಾಲಮಾನಕ್ಕೆ ತಕ್ಕಂತೆ ಈಗ ಉದ್ಯಮ ಸ್ವರೂಪ ಬೆಳೆದಿದೆ. ಈ ನಡುವೆ ಅನೇಕರು ನಾನಾ ಉದ್ದೇಶಗಳೊಂದಿಗೆ ಪತ್ರಿಕೋದ್ಯಮಕ್ಕೆ ನುಸುಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲೂ ಮುಖ್ಯವಾಗಿ ಬ್ಲ್ಯಾಕ್ ಮೇಲ್, ದಂಧೆಕೋರರು, ಕ್ರಿಮಿನಲ್‌ಗಳ ಹಾವಳಿಯಿಂದ ನೈಜ ಪತ್ರಕರ್ತರ ಘನತೆಗೆ ಧಕ್ಕೆಯಾಗುತ್ತಿದೆ. ಅಂತಹವರನ್ನು ಸಂಘದಿಂದ ಮೊದಲು ಹೊರ ಹಾಕುವ ಕೆಲಸ ಮಾಡಬೇಕು. ಮಹಾತ್ಮ ಗಾಂಧೀಜಿ ಅಂತಹವರು ಪ್ರತಿನಿಧಿಸಿದ್ದ ಮಾಧ್ಯಮ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಮಾಧ್ಯಮ ಎಂಬುದು ಸಮಾಜದ ಕನ್ನಡಿಯಿದ್ದಂತೆ. ಜನರು ಮತ್ತು ಆಡಳಿತದ ಮಧ್ಯೆ ಸೇತುವೆಯಾಗಿರುವ ಮಾಧ್ಯಮಗಳ ಸೇವೆ ಅವಿಸ್ಮರಣೀಯ. ಸ್ಥಳೀಯ ಪತ್ರಕರ್ತರಿಗೆ ವಸತಿ ನಿವೇಶನ, ಪ್ರೆಸ್ ಕ್ಲಬ್ ಜಾಗ ಒದಗಿಸುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಅರ್ಧಕ್ಕೆ ನಿಂತಿರುವ ವಾರ್ತಾ ಭವನ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಪ್ರತಿ ತಾಲೂಕಿನಲ್ಲಿ ಪತ್ರಿಕಾ ಭವನಗಳಾಗಬೇಕು. ಪತ್ರಕರ್ತರ ತುರ್ತು ಪರಿಸ್ಥಿತಿಯಲ್ಲಿ ಆರ್ಥಿಕ ನೆರವು ಒದಗಿಸಲು ಕಾನಿಪ ರಾಜ್ಯ ಸಮಿತಿ ಪತ್ರಕರ್ತರ ಕಲ್ಯಾಣಕ್ಕಾಗಿ 1 ಕೋಟಿ ರೂ. ಸಂಗ್ರಹಿಸಿರುವ ಮಾದರಿಯಲ್ಲಿ ವಿಜಯನಗರ ಜಿಲ್ಲಾ ಸಮಿತಿ ಪ್ರಯತ್ನ ನಡೆಸಿದೆ. ಈಗಾಗಲೇ ಸಂಸದ ಈ. ತುಕಾರಾಂ ಅವರು 1 ಲಕ್ಷ ರೂ. ನೀಡಿದ್ದಾರೆ. ಅದರೊಂದಿಗೆ ಹುಡಾ ಅಧ್ಯಕ್ಷ 2 ಲಕ್ಷ ರೂ. ಘೋಷಿಸಿದ್ದಾರೆ. ಅದರಂತೆ ಈ ಭಾಗದ ಜನಪ್ರತಿನಿಧಿಗಳು, ಕಾರ್ಖಾನೆಗಳು ಹಾಗೂ ಉದ್ಯಮಿಗಳ ಪತ್ರಕರ್ತರ ಕಲ್ಯಾಣ ನಿಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್‌ಗೆ ಬರೆದಿದ್ದ ಸಂಘದ ಭಿನ್ನವತ್ತಳೆಯನ್ನು ಸಂಘದ ರಾಜ್ಯ ಸಮಿತಿ ಸದಸ್ಯ ವೆಂಕೋಬ ನಾಯಕ ಪೂಜಾರ್ ಓದಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೊಕೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆ; ʼವೇದಾಂತ ಮೇಕಥಾನ್' ಎರಡು ತಿಂಗಳ ವಿಶೇಷ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಎಸ್ಪಿ ಎಸ್. ಜಾಹ್ನವಿ, ವಿಕಾಸ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ್ ಚ.ಹಿರೇಮಠ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಧನಂಜಯ್ಯಪ್ಪ, ಕಾನಿಪ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡ್, ಜಿಲ್ಲಾ ಉಪಾಧ್ಯಕ್ಷರಾದ ಉಜ್ಜಿನಿ ರುದ್ರಪ್ಪ, ಸಿ.ಕೆ. ನಾಗರಾಜ, ರಾಜು, ಕಾರ್ಯದರ್ಶಿಗಳಾದ ಸುರೇಶ್ ಚವ್ಹಾಣ್, ಸಂಜಯ್ ಕುಮಾರ್, ರವಿ ಮತ್ತಿತರರು ಉಪಸ್ಥಿತರಿದ್ದರು.