ತಂದೆ-ತಾಯಿ, ತಂಗಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟಿದ್ದ ಯುವಕ; ಒಂದೇ ಗುಂಡಿಯಲ್ಲಿ ಮೃತದೇಹಗಳು ಪತ್ತೆ!
Kottur Triple Murder Case: ಕೊಟ್ಟೂರಿನಲ್ಲಿ ಮೂವರನ್ನು ಕೊಲೆ ಮಾಡಿದ್ದ ಯುವಕ, ಬಳಿಕ ಬೆಂಗಳೂರಿನ ತಿಲಕ್‌ನಗರ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ ಎಂದು ಯುವಕ ಅಕ್ಷಯ್ ದೂರು ದಾಖಲಿಸಿದ್ದ. ಆದರೆ ಆರೋಪಿಯ ದ್ವಂದ್ವ ಹೇಳಿಕೆಯನ್ನು ಗಮನಿಸಿದ ಪೊಲೀಸರು, ಮತ್ತಷ್ಟು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಕೊಲೆಯಾದ ಭೀಮರಾಜ್-ಜಯಲಕ್ಷ್ಮೀ ದಂಪತಿ, ಪುತ್ರಿ ಅಮೃತಾ ಹಾಗೂ ಆರೋಪಿ ಅಕ್ಷಯ್. -
ವಿಜಯನಗರ: ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ ಬಳಿಕ ಮನೆಯಲ್ಲೇ ಹೂತಿಟ್ಟಿರುವುದಾಗಿ ಆರೋಪಿ ಯುವಕ ಅಕ್ಷಯ್ ಕುಮಾರ್ ಬಾಯಿಬಿಟ್ಟಿದ್ದು, ಇದೀಗ ಒಂದೇ ಗುಂಡಿಯಲ್ಲಿ ಮೂವರ ಮೃತ ದೇಹಗಳು ಪತ್ತೆಯಾಗಿವೆ.
ಮೂವರನ್ನು ಕೊಲೆ ಮಾಡಿದ್ದ ಯುವಕ, ಬಳಿಕ ಬೆಂಗಳೂರಿನ ತಿಲಕ್‌ನಗರ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದ. ಪೊಲೀಸರ ಮುಂದೆ ತನ್ನ ತಂದೆ, ತಾಯಿ ಮತ್ತು ಸಹೋದರಿ ಜಯದೇವ ಆಸ್ಪತ್ರೆಗೆ ಹೋದವರು ಮನೆಗೆ ವಾಪಸ್ ಆಗಿಲ್ಲ ಎಂದಿದ್ದ. ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿಯ ದ್ವಂದ್ವ ಹೇಳಿಕೆಯನ್ನು ಗಮನಿಸಿದ ಪೊಲೀಸರು, ಮತ್ತಷ್ಟು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಪ್ರತ್ಯೇಕವಾಗಿ ಮೂವರ ಕೊಲೆ
ಮೊದಲಿಗೆ ತಾಯಿ ಜಯಲಕ್ಷ್ಮೀಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದಂತ ಪಾಪಿ ಪುತ್ರ ಅಕ್ಷಯ್, ನಂತರ ಮನೆಯ ಕೊಠಡಿಯಲ್ಲಿ ಶವ ಹಾಕಿದ್ದ. ಬಳಿಕ ತಂಗಿ ಅಮೃತಾಗೆ ಕರೆ ಮಾಡಿ, ನಿನಗೆ ಗಿಫ್ಟ್ ತಂದಿದ್ದೇನೆ, ಬಾ ಅಂತ ಕರೆದಿದ್ದಾನೆ. ಆಗ ಮನೆಗೆ ಬಂದ ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ನಂತರ ತಂಗಿ, ತಾಯಿಯ ಮೃತದೇಹ ಕೊಠಡಿಯಲ್ಲಿ ಇರಿಸಿದ್ದ.
ಇನ್ನು ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ತಂದೆ ಭೀಮರಾಜ್ ಅವರನ್ನೂ ಕೊಲೆಗೈದ ಬಳಿಕ, ಮನೆಯ ಹಾಲ್‌ನಲ್ಲೇ ಒಂದೇ ಗುಂಡಿಯಲ್ಲಿ ಮೂರು ಮೃತದೇಹಗಳನ್ನು ಹೂತು ಹಾಕಿದ್ದ ಎಂಬುವುದು ತನಿಖೆ ವೇಳೆ ತಿಳಿದುಬಂದಿದೆ.
ವಿಜಯನಗರದ ಕೊಟ್ಟೂರಿನ ಎಲ್ ಬಿ ಬಡಾವಣೆಯಲ್ಲಿನ ಬಾಡಿಗೆ ಮನೆಯಲ್ಲಿ ಜನವರಿ 27ರಂದು ಈ ಕೃತ್ಯವನ್ನು ಆರೋಪಿ ಅಕ್ಷಯ್ ಎಸಗಿದ್ದ. ಬಳಿಕ ಬೆಂಗಳೂರಿಗೆ ಹೋಗಿ ತಾನೇ ಮಿಸ್ಸಿಂಗ್ ದೂರು ದಾಖಲಿಸಿದ್ದ. ಇದೀಗ ಆರೋಪಿ ಕೃತ್ಯ ಬಯಲಾದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕೊಟ್ಟೂರು ಎಸ್ಪಿ ಜಾಹ್ನವಿ, ಕೊಲೆಯ ಹಿಂದಿರುವ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ, ತ್ರಿವಳಿ ಕೊಲೆ ಕೇಸ್ ತನಿಖೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಇಬ್ಬರ ಹೆಸರು
ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರು ಉಲ್ಲೇಖ ಇದೆ ಎಂದು ವಿಜಯನಗರ ಎಸ್‌ಪಿ ಎಸ್.ಜಾಹ್ನವಿ ಹೇಳಿದ್ದಾರೆ. ಮೂರು ಶವಗಳನ್ನು ಶನಿವಾರ ತಿಲಕ್‌ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಹೊರತೆಗೆದ ಬಳಿಕ, ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ನಂತರ ಬಳಿಕ ಎಸ್‌ಪಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ವಿಜಯನಗರದಲ್ಲಿ ಶಾಕಿಂಗ್ ಘಟನೆ; ತಂದೆ, ತಾಯಿ, ತಂಗಿಯನ್ನು ಭೀಕರವಾಗಿ ಕೊಲೆಗೈದ ಯುವಕ
ಅರೋಪಿ ಅಕ್ಷಯ್ ಕುಮಾರ್ ತನ್ನ ತಂದೆ, ತಾಯಿ, ತಂಗಿ ನಾಪತ್ತೆಯಾಗಿದ್ದಾರೆ ಎಂದು ಮೊದಲಿಗೆ ದೂರು ನೀಡಿದ್ದ. ಆದರೆ ಆತನ ವರ್ತನೆಯಲ್ಲಿ ಸಂಶಯ ಬಂದ ಮೇರೆಗೆ ತಿಲಕ್‌ನಗರ ಪೊಲೀಸರು ವಿಚಾರಣೆ ನಡೆಸಿದಾಗ ಅವರ ಕೊಲೆ ಆಗಿರುವುದನ್ನು ತಿಳಿಸಿದ್ದ. ಹೀಗಾಗಿ ಶುಕ್ರವಾರ ತಿಲಕ್‌ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆತನನ್ನು ಶನಿವಾರ ಇಲ್ಲಿಗೆ ಕರೆತಂದು ಮಹಜರು ನಡೆಸಿ ಹೂತಿಟ್ಟ ಶವ ಹೊರತೆಗೆಯಲಾಗಿದೆ. ಸದ್ಯ ತಿಲಕ್‌ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಪ್ರಕರಣವನ್ನು ಹಸ್ತಾಂತರಿಸಿದ ಬಳಿಕ ನಮ್ಮ ವಿಚಾರಣೆ ಇಲ್ಲಿ ಆರಂಭವಾಗಲಿದೆ. ಕೊಲೆಗೆ ಕಾರಣ ಏನು ಇನ್ನೂ ಗೊತ್ತಾಗಿಲ್ಲ, ಅದರ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಅವರು ತಿಳಿಸಿದ್ದಾರೆ.