ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್ ಬಾಕಿ
ಮಗುವಿನ ರಕ್ಷಣೆಗೆ ಯಂತ್ರೋಪಕರಣ ಪೂರೈಸಿ ಸತತ 22 ತಾಸು ಕೆಲಸ ಮಾಡಿ ಕಾರ್ಯಾಚರಣೆ ಯಶಸ್ವಿಗೊಳಿಸುವಲ್ಲಿ ನೆರವಾಗಿದ್ದೇವೆ. ಆದರೆ ನಮ್ಮ ಕೂಲಿ ಹಾಗೂ ಯಂತ್ರೋಪಕರಣಗಳ ಬಾಡಿಗೆ 3 ಲಕ್ಷದಷ್ಟು ಇನ್ನೂ ಪಾವತಿಯಾಗಿಲ್ಲ. ಬಿಲ್ ಮೊತ್ತ ಕ್ಕಾಗಿ ಗ್ರಾಪಂ ಪಿಡಿಓ ಅವರಿಂದ ಹಿಡಿದು, ತಹಸೀ ಲ್ದಾರ್, ಎಸಿ, ಡಿಸಿವರೆಗೂ ಭೇಟಿಯಾಗಿ ಕೇಳುತ್ತಲೇ ಬಂದಿದ್ದರೂ ವರ್ಷವಾದರೂ ಬಿಲ್ ಪಾವತಿ ಯಾಗಿಲ್ಲ

ಸಾತ್ವಿಕ ರಕ್ಷಣಾ ಕಾರ್ಯಾಚರಣೆಗೆ ಯಂತ್ರೋಪಕರಣಗಳನ್ನು ಪೂರೈಸಿ ಸತತ 22 ಗಂಟೆಗಳ ಕಾಲ ಕೆಲಸ ಮಾಡಿ ಈಗ ಬಾಕಿ ಬಿಲ್ ಗಾಗಿ ಡಿಸಿ ಅವರಿಗೆ ಭೇಟಿಯಾಗಲು ಬಂದ ಕೆಲಸಗಾರರು.

ಬಸವರಾಜ್ ಎಸ್.ಉಳ್ಳಾಗಡ್ಡಿ ವಿಜಯಪುರ
ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್ ಬಾಕಿ ಕೊಳವೆಬಾವಿಗೆ ಬಿದ್ದಿದ್ದ ಬಾಲ ಕನ ರಕ್ಷಣಾ ಕಾರ್ಯಾಚರಣೆ ಬಾಕಿ ಹಣಕ್ಕಾಗಿ ಡಿಸಿ ಕಚೇರಿಗೆ ಅಲೆಯುತ್ತಿರುವ ಮಾಲೀಕರು
ಕಳೆದ ವರ್ಷ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ಯಶಸ್ವಿ ರಕ್ಷಣಾ ಕಾರ್ಯಾಚರಣೆಯನ್ನು ರಾಜ್ಯದ ಜನತೆ ಮರೆತಿಲ್ಲ. ಅಪದ್ಬಾಂಧವರಂತೆ ಯಂತ್ರೋ ಪಕರಣಗಳನ್ನು ತಂದು ಅಹರ್ನಿಶಿ ಕೆಲಸ ಮಾಡಿದವರಿಗೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಅವರಿಗೆ ಕಳೆದ ಒಂದು ವರ್ಷದಿಂದ ಯಂತ್ರೋಪಕರಣ ಬಾಕಿ ಬಿಲ್ ಪಾವತಿಯಾಗದೆ ಜಿಲ್ಲಾಡಳಿತದ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ.
ಪ್ರಕರಣದ ವಿವರ: 2024ರ ಏಪ್ರಿಲ್ 03ರಂದು ಲಚ್ಯಾಣದಲ್ಲಿ ಕೊಳೆಬಾವಿಗೆ ಬಿದ್ದಿದ್ದ ಬಾಲಕ ಸಾತ್ವಿಕ ಗುಜಗೊಂಡನನ್ನು ಸ್ಥಳೀಯರ ಜೆಸಿಬಿ, ಹಿಟ್ಯಾಚಿ, ಟ್ರ್ಯಾಕ್ಟರ್ ಬ್ರೇಕರ್ಸ್, ಬೋರ್‌ವೆಲ್ ಕ್ಯಾಮೆರಾ ಹೀಗೆ ಹಲವು ಯಂತ್ರೋಪಕರಣಗಳನ್ನು ಬಳಸಿ ರಕ್ಷಣಾ ತಂಡವು ಸತತ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕ ಸಾತ್ವಿಕನನ್ನು ಸಾವಿನ ದವಡೆಯಿಂದ ಪಾರುಮಾಡಿ ಹೊರಗೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ ಜಿಲ್ಲಾಡಳಿತ ಬಳಸಿದ್ದ ಯಂತ್ರೋಪಕರಣಗಳ ಬಾಡಿಗೆ ನೀಡದ ಕಾರಣ ತುರ್ತು ಕಾರ್ಯಾಚರಣೆಗೆ ನೆರವಾದವರು ಈಗ ತಮ್ಮ ಬಿಲ್ ಮೊತ್ತಕ್ಕಾಗಿ ವರ್ಷ ದಿಂದ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.
ಇದನ್ನೂ ಓದಿ: Vijayapura News: ಕೌಟುಂಬಿಕ ಕಲಹ- ಮೊಬೈಲ್ ಟವರ್ ಏರಿ ಕುಳಿತ ಯುವಕ!
ಬಿಲ್ ಪಾವತಿ- ಬರೀ ಭರವಸೆ: ಮಗುವಿನ ರಕ್ಷಣೆಗೆ ಯಂತ್ರೋಪಕರಣ ಪೂರೈಸಿ ಸತತ 22 ತಾಸು ಕೆಲಸ ಮಾಡಿ ಕಾರ್ಯಾಚರಣೆ ಯಶಸ್ವಿಗೊಳಿಸುವಲ್ಲಿ ನೆರವಾಗಿದ್ದೇವೆ. ಆದರೆ ನಮ್ಮ ಕೂಲಿ ಹಾಗೂ ಯಂತ್ರೋಪಕರಣಗಳ ಬಾಡಿಗೆ 3 ಲಕ್ಷದಷ್ಟು ಇನ್ನೂ ಪಾವತಿಯಾಗಿಲ್ಲ. ಬಿಲ್ ಮೊತ್ತ ಕ್ಕಾಗಿ ಗ್ರಾಪಂ ಪಿಡಿಓ ಅವರಿಂದ ಹಿಡಿದು, ತಹಸೀಲ್ದಾರ್, ಎಸಿ, ಡಿಸಿವರೆಗೂ ಭೇಟಿಯಾಗಿ ಕೇಳುತ್ತಲೇ ಬಂದಿದ್ದರೂ ವರ್ಷವಾದರೂ ಬಿಲ್ ಪಾವತಿಯಾಗಿಲ್ಲ.
ಕಳೆದ 3 ತಿಂಗಳಿಂದ ಒಬ್ಬರ ಮೇಲೊಬ್ಬರು ಹಾಕುತ್ತಾ ಕೊನೆಗೆ ಡಿಸಿ ಬಳಿ ಬಂದಾಗ,ವಾರದಲ್ಲೇ ಎಲ್ಲ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಬಿಲ್ ಪಾವತಿಯಾಗದ ಕಾರಣ ಮತ್ತೆ ಈಗ ಬಂದು ಡಿಸಿ ಅವರನ್ನು ಭೇಟಿಯಾಗಿ ಬಿಲ್ ಕೇಳಿದಾಗ ಮತ್ತೆ ಒಂದು ವಾರದಲ್ಲಿ ಪಾವತಿಸುವುದಾಗಿ ಹೇಳಿದ್ದಾರೆ. ವಾರದಲ್ಲಿ ನಮ್ಮೆಲ್ಲರ ಬಿಲ್ ಪಾವತಿಯಾಗದಿದ್ದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಭೀಮಾಶಂಕರ ಭಜಂತ್ರಿ, ರಾಜಶೇಖರಯ್ಯ ಮಠಪತಿ ಎಚ್ಚರಿಕೆ ನೀಡಿದ್ದಾರೆ.
3.70 ಲಕ್ಷ ರು. ಬಾಡಿಗೆ ಬಾಕಿ
ಕೊಳವೆಬಾವಿಗೆ ಬಿದ್ದ ಮಗುವಿನ ರಕ್ಷಣಾ ಕಾರ್ಯಕ್ಕೆ 2 ಹಿಟ್ಯಾಚಿ ವಾಹನ (ರು.1,84,800 ಬಾಡಿಗೆ), 3 ಜೆಸಿಬಿ (89000 ರು. ಬಾಡಿಗೆ), 4 ಟ್ರ್ಯಾಕ್ಟರ್ ಬ್ರೇಕರ್ಸ್ (52800 ರು. ), 3 ಟ್ರ್ಯಾಕ್ಟರ್ (16500 ರು.), ಒಂದು ವಾಟರ್ ಟ್ಯಾಂಕರ್ (15950 ರು.), ಒಂದು ಹ್ಯಾಂಡ್ ಡ್ರಿಲ್ಲಿಂಗ್ ಯಂತ್ರ (6600 ರು.) ಹಾಗೂ ಒಂದು ಕಟಿಂಗ್ ಮಷೀನ್ (4268 ರು.) ಹೀಗೆ ಯಂತ್ರೋಪಕರಣಗಳ ಬಾಡಿಗೆ ಒಟ್ಟು 370018 ರು. ಬಾಕಿ ಪಾವತಿಯಾಗದೆ ವರ್ಷದಿಂದ ಬಾಕಿ ಇದೆ.