ಹಾಡು ನಿಲ್ಲಿಸಿದ ಹಾಡು ಹಕ್ಕಿ
ಶುಕ್ರವಾರ ಹುಟ್ಟಿದ್ದರಿಂದ ಇವರಿಗೆ ಸುಕ್ರಿ ಎಂದು ಹೆಸರಿಟ್ಟಿದ್ದರಂತೆ. ಯಾವುದೇ ಪೆನ್ನು, ಪಟ್ಟಿ ಹಿಡಿ ಯದೇ ಸುಕ್ರಮ್ಮ ಸಕ್ಕರೆಯಂತೆ ಸವಿಯಾಗಿ ಹಾಡು ಹೇಳುತ್ತಿದ್ದುದೇ ಆಶ್ಚರ್ಯ. ಅಕ್ಕರೆಯಿಂದ ನಾಟಿ ಕಾವ್ಯವನ್ನು ಪೊಗದಸ್ತಾಗಿ ಅವರು ಕೇಳುಗರಿಗೆ ಉಣ ಬಡಿಸುತ್ತಿದ್ದರು. ಹಳೆಯ ಕಾಲದ ಗ್ರಾಮಫೋನು ಗಳ ಲ್ಲಿರುತ್ತಿದ್ದ, ಮನಸ್ಸನ್ನು ಮೀಟುವ ಅನುಪಮ ಗೀತೆಗಳಂತೆಯೇ, ಈ ಸುಕ್ರಿಯವರ ಗೀತಲಹರಿ ಸಾಗುತ್ತಿತ್ತು


ರಾಜು ಅಡಕಳ್ಳಿ ಬೆಂಗಳೂರು
ಸುಕ್ರಿ ಬೊಮ್ಮಗೌಡ ಅಂಕೋಲಾ ಸಮೀಪದ ಬಡಗೇರಿಯ ಅಪ್ಪಟ ಹಳ್ಳಿ ಕಲಾವಿದೆ. ಹಾಲಕ್ಕಿ ಹಾಡಿಯ ಅಭಿಜಾತ ಪ್ರತಿಭೆ. ಇವರು ಶಾಲೆ ಮೆಟ್ಟಿಲು ಹತ್ತಿದವರಲ್ಲ. ಆದರೆ ಹಾಡಲು ನಿಂತರೆ ಇವರ ಸಿರಿ ಕಂಠದಿಂದ ನೂರಾರು ಹಾಡುಗಳು ಹೊರ ಹೊಮ್ಮುತ್ತಿದ್ದವು. ಸ್ವತಃ ಓದು ಬರಹವಿಲ್ಲ ದಿದ್ದರೂ, ಐದಾರು ಸಾವಿರ ಹಳ್ಳಿ ಹಾಡುಗಳನ್ನು, ಜಾನಪದ ಗೀತೆಗಳನ್ನು ಹಾಡುತ್ತಾ ಬೆರಗು ಮೂಡಿಸಿದ ಸುಕ್ರಮ್ಮ, ತಮಗೆ ಪದ್ಮಶ್ರೀ ಪ್ರದಾನ ಮಾಡಿದ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಶೀರ್ವಾದ ಮಾಡಿ ಮನಗೆದ್ದವರು. ತಮ್ಮ ಧ್ವನಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಗೆ ಕರೆಸಿಕೊಂಡವರು.
ಸುಕ್ರಿ ಯವರಿಗೆ 88 ವರ್ಷವಾಗಿತ್ತು. ಆದರೆ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗಲೂ ಹಾಡು ನಿಲ್ಲಿಸಿ ದವರಲ್ಲ. ಮೊನ್ನೆ ತಮ್ಮನ್ನು ಕಾಣಲು ಬಂದ ವೈದ್ಯಾಧಿಕಾರಿ ಮುಂದೆಯೇ ಹಾಡಿ ಎಲ್ಲರನ್ನೂ ಚಕಿತಗೊಳಿಸಿದ್ದರು.
ಇದನ್ನೂ ಓದಿ: Sukri Bommagowda Passes Away: ಸಂಗೀತವೇ ಬದುಕಾಗಿದ್ದ ಸುಕ್ರಿ ಬೊಮ್ಮಗೌಡ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರ ಸಂತಾಪ
ಶುಕ್ರವಾರ ಹುಟ್ಟಿದ್ದರಿಂದ ಇವರಿಗೆ ಸುಕ್ರಿ ಎಂದು ಹೆಸರಿಟ್ಟಿದ್ದರಂತೆ. ಯಾವುದೇ ಪೆನ್ನು, ಪಟ್ಟಿ ಹಿಡಿಯದೇ ಸುಕ್ರಮ್ಮ ಸಕ್ಕರೆಯಂತೆ ಸವಿಯಾಗಿ ಹಾಡು ಹೇಳುತ್ತಿದ್ದುದೇ ಆಶ್ಚರ್ಯ. ಅಕ್ಕರೆಯಿಂದ ನಾಟಿ ಕಾವ್ಯವನ್ನು ಪೊಗದಸ್ತಾಗಿ ಅವರು ಕೇಳುಗರಿಗೆ ಉಣ ಬಡಿಸುತ್ತಿದ್ದರು. ಹಳೆಯ ಕಾಲದ ಗ್ರಾಮ ಫೋನುಗಳಲ್ಲಿರುತ್ತಿದ್ದ, ಮನಸ್ಸನ್ನು ಮೀಟುವ ಅನುಪಮ ಗೀತೆಗಳಂತೆಯೇ, ಈ ಸುಕ್ರಿ ಯವರ ಗೀತಲಹರಿ ಸಾಗುತ್ತಿತ್ತು. ಕನ್ನಡದ ಹಾಡಿಗೆ ಅಲ್ಲಲ್ಲಿ ಹಾಲಕ್ಕಿಯವರ ಆಡು ಭಾಷೆಯ ಶಬ್ದ ಸೇರಿಸಿ ಹಾಡಿನ ರಸಪಾಕದ ರುಚಿ ಹೆಚ್ಚಿಸುತ್ತಿದ್ದರು.
ಈ ಜನಪದ ಕೋಗಿಲೆ ತಮಗೆ ಮನ ಬಂದಾಗಲೆಲ್ಲ ಹಾಡುತ್ತಿದ್ದವರು. ಈ ಹಾಡಿನಲ್ಲಿಯೇ ಹಾಲಕ್ಕಿ ಬುಡಕಟ್ಟು ಜನಾಂಗದ ನಿಗೂಢ ಭಂಡಾರದಲ್ಲಿ ಹುದುಗಿರುವ ಅಪರೂಪದ ಸಾಹಿತ್ಯವನ್ನು ಪರಿಚಯಿಸಿದ್ದರು. ಈ ಸಾಹಿತ್ಯದಲ್ಲಿ ಹಳ್ಳಿ ಬದುಕನ್ನು ಕಟ್ಟಿಕೊಡುವ ಅವತರಣಿಕೆಗಳೇ ಹೆಚ್ಚಿರು ತ್ತಿದ್ದವು. ಪ್ರಕೃತಿದತ್ತವಾಗಿ ಒಲಿದು ಬಂದ ಸಾಹಿತ್ಯವನ್ನು ಪ್ರೀತಿಸುವ ಅಪರೂಪದ ಭಾವಜೀವಿ ಇವರಾಗಿದ್ದರು.
ಇದನ್ನೂ ಓದಿ: Sukri Bommagowda: ಸಾರಾಯಿ ಮುಕ್ತ ಗ್ರಾಮಕ್ಕಾಗಿ ಹೋರಾಟ ಮಾಡಿದ ಪದ್ಮಶ್ರೀ ಪುರಸ್ಕೃತೆ, ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ
ನೋವಿನಲ್ಲೂ ನಲಿವಿನ ಹಾಡು: ಇವರು ಅತ್ಯಂತ ಹಿಂದುಳಿದ ಹಾಲಕ್ಕಿ ಜನಾಂಗದಲ್ಲಿ ಹುಟ್ಟಿ ಕಡುಬಡತನದಲ್ಲಿ ಬೆಂದವರು. ಬಾಳ ಸಂಗಾತಿಯಾಗಿದ್ದ ಬೊಮ್ಮಗೌಡರು ಸುಕ್ರಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಅಸು ನೀಗಿದ್ದರು. ಒಬ್ಬಂಟಿಯಾಗಿ, ಸೆರಗಿನಲ್ಲಿ ಕೆಂಡದಂಥ ಸಂಕಟ ತುಂಬಿ ಕೊಂಡಿದ್ದರೂ ಎಂದಿಗೂ ಹಾಡನ್ನು ನಿಲ್ಲಿಸಲಿಲ್ಲ.
ಕೂಲಿನಾಲಿ ಮಾಡಿ, ಕಟ್ಟಿಗೆ ಮಾರಾಟ ಮಾಡಿ ಬದುಕಿನ ಸಂತೆಯಲ್ಲಿ ಸಾಗಿದವರು. ಬದುಕಿನ ಈ ಹಾಡುಪಾಡುಗಳೇ ಇವರ ಹಾಡಿಗೆ ವಸ್ತುವಾಗಿದ್ದವು. ಬದುಕಿನ ನೋವುಗಳನ್ನು ಸಹಜವಾಗಿ ಸ್ವೀಕರಿಸಿದ್ದ ಇವರು ಸದಾ ಹಸನ್ಮುಖಿಯಾಗಿದ್ದವರು. ಪದ್ಮಶ್ರೀ ಪ್ರಶಸ್ತಿ ಬಂದ ದಿನವೂ ಬೆಳಗಿನ ಜಾವ ಎಂದಿನಂತೆ ಗುಡ್ಡಬೆಟ್ಟಕ್ಕೆ ಕಟ್ಟಿಗೆ ತರಲು ಹೋಗಿದ್ದಂಥ ನಿರ್ಲಿಪ್ತ ಜೀವ ಇವರಾಗಿದ್ದರು.
ತಾನು ಓಡಾಡುವ ಹಳ್ಳಿಕೇರಿ, ಗುಡ್ಡ ಬೆಟ್ಟ, ಸುತ್ತಾಡುವ ಮದುವೆ ಮುಂಜಿ, ಸ್ಥಳೀಯ ಭೂತ - ಬೇಡರ ವೇಷ, ನಡು ಬಗ್ಗಿಸಿ ಮಾಡುತ್ತಿದ್ದ ಗದ್ದೆ ನಾಟಿ ಕೆಲಸ, ಕರಾವಳಿಯಲ್ಲಿ ಸುರಿಯುವ ಧೋ ಎಂಬ ಮಳೆ, ಸುಗ್ಗಿ ಹಬ್ಬ.. ಹೀಗೆ ಅಲ್ಲಿಯ ಜನಜೀವನದ ಎಲ್ಲಾ ಆಚರಣೆಗಳು ಜಾನಪದದ ವಸ್ತುವಾಗಿ ಈ ಸುಕ್ರಮ್ಮನ ಬಾಯಲ್ಲಿ ಹಾಡಾಗಿ ಹರಿಯುತ್ತಿದ್ದವು.
ದೇವರ ಭಜನೆ, ದೇಶಭಕ್ತಿ ಗೀತೆಗಳಿಗೂ ಇವರಲ್ಲಿ ಕೊರತೆಯಿರಲಿಲ್ಲ. ಐದಾರು ದಶಕಗಳಿಂದ ಜನಪದ ಹಾಡಿನ ಸುಧೆ ಹರಿಸಿದರೂ ಸುಕ್ರಿ ಬೊಮ್ಮಗೌಡ ಪ್ರಚಾರದ ಬೆಳಕಿಗೆ ಬಂದಿದ್ದು ಎರಡು ದಶಕಗಳಿಂದೀಚೆಗೆ. ಈ ಬಳಿಕ ದೂರದರ್ಶನದಲ್ಲಿ ಇವರು ಅನೇಕ ಕಾರ್ಯಕ್ರಮ ನೀಡಿದ್ದಾರೆ.
ಆಕಾಶವಾಣಿಯಿಂದಲೂ ಈ ಅಜ್ಜಿಯ ಹಾಡುಗಳನ್ನು ಸಂಗ್ರಹಿಸಿ ಪ್ರಸಾರಗೊಳಿಸಲಾಗಿದೆ. ಇವರ ಮೊಮ್ಮಗಳು ಶುಭಲಕ್ಷ್ಮಿಯವರು ಅಜ್ಜಿಯ ವಿಶಿಷ್ಟ ಹಾಡುಗಳನ್ನು ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ಸೂಲಗಿತ್ತಿ, ನಾಟಿವೈದ್ಯೆ: ಪದ್ಮಶ್ರೀ ಬಂದಾಗಲೂ ಕೈಮಗ್ಗದ ಚೌಕುಳಿ ಸೀರೆಯನ್ನು ಮೊಣಕಾಲಿನವರೆಗೆ ನೆರಿಗೆ ಮಾಡಿ ಇಳಿಬಿಟ್ಟು, ಎಡಬದಿಗೆ ಸೆರಗು ತಂದು ಗಂಟು ಕಟ್ಟಿ ಉಡುತ್ತಾ, ಕುಪ್ಪುಸವಿಲ್ಲದ ಭುಜಗಳ ತುಂಬೆಲ್ಲ ಕರಿಮಿಣಿ ಸರ ಧರಿಸಿ ಪ್ರಶಸ್ತಿ ಸ್ವೀಕರಿಸಿದ್ದ ಸುಕ್ರಿ ತಮ್ಮ ಸಾಂಪ್ರದಾಯಿಕ ದಿರಿಸಿನಿಂದಲೇ ನಾಡಿಗೆ ಪರಿಚಿತರಾಗಿದ್ದರು. ಇವರ ಪ್ರತಿಭೆ ಹಾಡಿಗಷ್ಟೇ ಸೀಮಿತ ವಾಗಿರಲಿಲ್ಲ.
ಎಷ್ಟೋ ಬಾರಿ ಆ ಭಾಗದಲ್ಲಿ ಎಮ್ಮೆ, ದನ ಕರು ಹಾಕಿದಾಗ ಸೂಲಗಿತ್ತಿಯಾಗಿ ಇವರು ಕೆಲಸ ಮಾಡಿದ್ದರು. ಪರಂಪರಾಗತ ನಾಟಿ ವೈದ್ಯ ಪದ್ಧತಿಯಲ್ಲೂ ಅವರು ಅಪಾರ ಜ್ಞಾನ ಹೊಂದಿ ದ್ದರು. ಹಾಡಿನ ಜೊತೆಗೆ ತಾರ್ಲೆ ಕುಣಿತ ತಂಡವನ್ನು ಕಟ್ಟಿ ಅಂಕೋಲಾ ಸುತ್ತಮುತ್ತಲ ಹಾಲಕ್ಕಿ ಜನಾಂಗದ ಅನೇಕರಿಗೆ ಕಲೆ, ಸಂಸ್ಕೃತಿಯನ್ನು ಕಲಿಸಿದ್ದರು. ಈ ತಂಡ ಬೆಂಗಳೂರು, ಮೈಸೂರು, ದೆಹಲಿ, ಕೇರಳ, ಕನ್ಯಾಕುಮಾರಿಯವರೆಗೂ ಸುತ್ತಾಡಿ ಉತ್ತರ ಕನ್ನಡದ ಜಾನಪದ ಕಲೆಯನ್ನು ಪರಿಚಯಿಸಿತ್ತು.
ಸಾಕ್ಷರತಾ ಆಂದೋಲನ, ಸಾರಾಯಿ ನಿಷೇಧ, ರೈತ ಹೋರಾಟಗಳಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಈ ತಂಡದ ಮೂಲಕ ಜನಜಾಗೃತಿ ಮೂಡಿಸಿದ ಸಾಧನೆ ಈ ಕಾಡು ಕುಸುಮ ಸುಕ್ರಿಯ ವರದ್ದು. ಸುಕ್ರಿಯವರ ಕಾರಣದಿಂದ ಹಾಡಿಯಲ್ಲಿ ದನ ಮೇಯಿಸಿಕೊಂಡು, ಕೂಲಿ ಕೆಲಸ ಮಾಡಿ ಕೊಂಡು ಇರುತ್ತಿದ್ದ ಬಡಗೇರಿ ಹಾಡಿಯ ನುಗುಲಿ, ಕುಸುಲಿ, ಪದ್ಮಾವತಿ ಗೌಡ, ತೋಕುಗೌಡ, ನುಗ್ಗಿ ಗೌಡ, ಪಾರ್ವತಿ ಹೊಸಬು ಗೌಡ, ಕುಚಲಿ ಮಾಣಿ ಗೌಡ, ನೀಲಮ್ಮ ಬೇಡು ಗೌಡ, ಸುಕ್ತು ಗೌಡ, ಸೋಮಿ, ಸಣ್ಣಬುದ್ದು, ಆಯಿ ಕರಿಯಾ ಗೌಡ, ಚೋಮಿ ಗೌಡರಂತಹವರೆಲ್ಲ ಸುಕ್ರಜ್ಜಿಯ ಕಲಾ ತಂಡ ಸೇರಿ ಹಾಡು, ಜೋಗುಳ ಹೇಳುತ್ತಾ ಅನೇಕ ರಾಜ್ಯಗಳನ್ನು ಸುತ್ತಿ ಬಂದಿದ್ದಾರೆ.
ಸಾರಾಯಿ ವಿರೋಧಿ ಹೋರಾಟಗಾರ್ತಿ
ಸುಮಾರು 30 ವರ್ಷಗಳ ಹಿಂದೆ ಸುಕ್ರಜ್ಜಿಗೆ ಕರುಳು ಹಿಂಡಿದ ಘಟನೆ. ಸಾರಾಯಿಯ ವ್ಯಸನಕ್ಕೆ ಅಜ್ಜಿಯ ದತ್ತು ಪುತ್ರನೇ ಬಲಿಯಾಗಿದ್ದ. ಇದರಿಂದಾಗಿ ಈ ಅಮ್ಮಮ್ಮ ಸಾರಾಯಿ ವಿರೋಧಿ ಆಂದೋಲನಕ್ಕೆ ತಮ್ಮ ತಂಡದೊಂದಿಗೆ ಧುಮುಕಿ, ಹಾಡು, ಲಾವಣಿ, ಕುಣಿತ, ಬೀದಿ ನಾಟಕಗಳ ಮೂಲಕ ಆ ಭಾಗದಲ್ಲಿ ಸಾರಾಯಿ ವಿರೋಧಿ ಹೋರಾಟಕ್ಕೆ ಸ್ತ್ರೀ ಶಕ್ತಿ ತುಂಬಿದರು.
ಇದರಿಂದಾಗಿ ಬಾವಿಕೇರಿ, ಬಡಿಗೇರಿ, ಕೇಣಿ, ಅಂಕೋಲ, ಕಾರವಾರ ಮುಂತಾದ ಕಡೆಗಳಲ್ಲಿ ನಡೆಯು ತ್ತಿದ್ದ ಕಳ್ಳಭಟ್ಟಿ ದಂಧೆ ನಿಂತು ಸಾವಿರಾರು ರೈತ ಕುಟುಂಬಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಚೇತರಿಸಿಕೊಳ್ಳುವಂತಾಯಿತು. ಆಗ ಡಾ. ಕುಸುಮ, ಅಮ್ಮಬಾಯಿ, ಕರಿಯಮ್ಮ ಭುವನೇಶ್ವರಿ ಆಳಗೊಂಡ ಮುಂತಾದವರೊಂದಿಗೆ ಸುಕ್ರಿಯವರು ತಮ್ಮ ಒಕ್ಕಲತಿಯರ ತಾರ್ಲೆ ಕಲಾ ತಂಡ ದೊಂದಿಗೆ ಹೋರಾಟದ ಮುಂಚೂಣಿಯಲ್ಲಿದ್ದರು. ಸುಕ್ರಜ್ಜಿ ತಮ್ಮ ಇಳಿ ವಯಸ್ಸನ್ನೂ ಲೆಕ್ಕಿಸದೇ ಈ ಹೋರಾಟಕ್ಕೆ ಇಳಿದಿದ್ದರಿಂದ ಸಹಜವಾಗಿಯೇ ಆಗ ಅಲ್ಲಿ ಹೊಸ ಸಂಚಲನ ಮೂಡಿತ್ತು. ರೈತರೊಂದಿಗೆ ಕಾಲ್ನಡಿಗೆ ಜಾಥಾದಲ್ಲಿ ಕಾರವಾರದವರೆಗೂ ಇವರು ಹೋಗಿ ಆ ಭಾಗದ ರೈತರ ಸಮಸ್ಯೆ ಪರಿಹಾರಕ್ಕೆ ತಮ್ಮ ದನಿಗೂಡಿಸಿದ್ದರು.
ಸುಕ್ರಿಯವರ ಈ ಎಲ್ಲಾ ಸಾಧನೆಗಳನ್ನು ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ, ರಾಜ್ಯ ಸರಕಾರವು ರಾಜ್ಯೋತ್ಸವ ಪ್ರಶಸ್ತಿ,, ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ಮುಂತಾದ ಅನೇಕ ಪುರಸ್ಕಾರಗಳನ್ನು ನೀಡಿದೆ.