Country for Rent: ಬಾಡಿಗೆಗೆ ಲಭ್ಯವಿದ್ದ ದೇಶದ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಅಚ್ಚರಿಯ ಮಾಹಿತಿ
ಯುರೋಪ್‍ನಲ್ಲಿ ನೆಲೆಗೊಂಡಿರುವ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಈ ಸಣ್ಣ ದೇಶವನ್ನು 2011 ರವರೆಗೆ ಒಂದು ರಾತ್ರಿ ತಂಗಲು ಬಾಡಿಗೆ ಪಡೆಯಬಹುದಾಗಿತ್ತಂತೆ. ಕೇವಲ 40,000 ಜನಸಂಖ್ಯೆಯನ್ನು ಹೊಂದಿರುವ ಈ ಸಣ್ಣ ದೇಶವನ್ನು ಒಂದು ರಾತ್ರಿ ಬಾಡಿಗೆಗೆ(Country for Rent) ಪಡೆಯಬಹುದಾಗಿತ್ತು. ಹಾಗಾದ್ರೆ ಆ ಯಾವುದು? ಒಂದು ರಾತ್ರಿಗೆ ಅದರ ಬಾಡಿಗೆ ಎಷ್ಟು? ಎಂಬುದನ್ನು ತಿಳಿಯಿರಿ.
Vishwavani News
January 3, 2025
ಮನೆ, ಕಾರು ಮತ್ತು ಕೆಲವು ದೈನಂದಿನ ವಸ್ತುಗಳನ್ನು ಬಾಡಿಗೆಗೆ ಪಡೆಯುವುದು ಸಾಮಾನ್ಯ. ಅಲ್ಲದೇ ವಿಶ್ವದ ಕೆಲವು ಭಾಗಗಳಲ್ಲಿ, ಬಾಯ್‍ಫ್ರೆಂಡ್‍ಗಳು ಅಥವಾ ಗರ್ಲ್‍ಫ್ರೆಂಡ್‍ಗಳನ್ನು ಸಹ ಬಾಡಿಗೆ ಪಡೆಯುವ ವ್ಯವಸ್ಥೆ ಕೂಡ ಇದೆ. ಆದರೆ ಒಂದು ಕಾಲದಲ್ಲಿ ಇಡೀ ದೇಶವೊಂದು ಬಾಡಿಗೆಗೆ (Country for Rent) ಲಭ್ಯವಿತ್ತು ಎಂಬುದು ನಿಮಗೆ ಗೊತ್ತೇ? ಅದ್ಯಾವ ದೇಶ, ಎಷ್ಟು ಬಾಡಿಗೆ ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಆ ದೇಶ ಯಾವುದೆಂದರೆ ಲಿಚ್ಟೆನ್‌ಸ್ಟೈನ್ (Liechtenstein). ಯುರೋಪ್‍ನಲ್ಲಿ ನೆಲೆಗೊಂಡಿರುವ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಈ ಸಣ್ಣ ದೇಶವನ್ನು 2011ರವರೆಗೆ ಒಂದು ರಾತ್ರಿ ತಂಗಲು ಬಾಡಿಗೆ ಪಡೆಯಬಹುದಾಗಿತ್ತು ಮತ್ತು ಈ ವಿಚಾರವನ್ನು ನಂಬಲು ಕಷ್ಟವೆನಿಸಿದರೂ, ಇದು ನಿಜ. ಕೇವಲ 40,000 ಜನಸಂಖ್ಯೆಯನ್ನು ಹೊಂದಿರುವ ಈ ಸಣ್ಣ ದೇಶವನ್ನು ಭಾರಿ ಬೆಲೆಗೆ ಒಂದು ರಾತ್ರಿ ಬಾಡಿಗೆಗೆ ಪಡೆಯಬಹುದಾಗಿತ್ತು. ಹಾಗಾದ್ರೆ ಒಂದು ಚಿಕ್ಕ ಮನೆಗೆ ಸಾಕಷ್ಟು ಬಾಡಿಗೆ ಕೇಳುವಾಗ ಕೇವಲ ಒಂದು ರಾತ್ರಿಗೆ ಇಡೀ ದೇಶವನ್ನು ಬಾಡಿಗೆಗೆ ಪಡೆಯಲು ಎಷ್ಟು ವೆಚ್ಚವಾಗುತ್ತದೆ ಎಂದು ಕೆಲವರಿಗೆ ಕುತೂಹಲ ಉಂಟಾಗಬಹುದು. ಇದಕ್ಕೆ ಉತ್ತರ 70,000 ಡಾಲರ್ (ಅಂದಾಜು 60 ಲಕ್ಷ ರೂ.).
View this post on Instagram A post shared by Geo All Day (@geoallday)
ಲಿಚ್ಟೆನ್‌ಸ್ಟೈನ್ ಅನ್ನು ಜನಪ್ರಿಯ ವಸತಿ ವೇದಿಕೆ ಏರ್‌ಬಿಎನ್‌ಬಿ (AirBNB)ಯಲ್ಲಿ ಪಟ್ಟಿ ಮಾಡಲಾಗಿದೆ. ಈ ಸೇವೆಯನ್ನು ಮಾರ್ಕೆಟಿಂಗ್ ಮತ್ತು ಉತ್ಪಾದನಾ ಕಂಪನಿಯ ನಡುವಿನ ಸಹಯೋಗದಿಂದ ನೀಡಲಾಯಿತು. ಇದನ್ನು ಬಾಡಿಗೆ ವ್ಯವಹಾರದ ಪ್ರಚಾರ ಅಭಿಯಾನವಾಗಿ ಪ್ರಾರಂಭಿಸಲಾಯಿತು. ಲಿಚ್ಟೆನ್‌ಸ್ಟೈನ್ ಅನ್ನು ಬಾಡಿಗೆಗೆ ಪಡೆಯುವುದು ಸಾಮಾನ್ಯ ವ್ಯವಹಾರವಾಗಿರಲಿಲ್ಲ. ಯಾರಾದರೂ ದೇಶವನ್ನು ಬುಕ್ ಮಾಡಿದಾಗ, ಅವರ ಈವೆಂಟ್ ವಿವರಗಳನ್ನು ಬೀದಿ ಬೀದಿಗಳಲ್ಲಿ ಮತ್ತು ಪ್ರದೇಶದಾದ್ಯಂತ ಪ್ರದರ್ಶಿಸಬೇಕಾಗಿತ್ತು. ಐತಿಹಾಸಿಕ ಕೋಟೆಗಳು ಸೇರಿದಂತೆ ದೇಶದ ಕೆಲವು ಅಪ್ರತಿಮ ಹೆಗ್ಗುರುತುಗಳಿಗೆ ಅತಿಥಿಗಳಿಗೆ ಅನಿರ್ಬಂಧಿತ ಪ್ರವೇಶವನ್ನು ನೀಡಬೇಕಾಗಿತ್ತು. ಲಿಚ್ಟೆನ್‌ಸ್ಟೈನ್ ಆಳುತ್ತಿದ್ದ ರಾಜನು ವೈಯಕ್ತಿಕವಾಗಿ ದೇಶದ ಕೀಲಿಗಳನ್ನು ಬಾಡಿಗೆದಾರರಿಗೆ ಹಸ್ತಾಂತರಿಸುತ್ತಿದ್ದನಂತೆ. ದುರದೃಷ್ಟವಶಾತ್ ಈ ಸೇವೆ 2011ರಿಂದ ಲಭ್ಯವಿಲ್ಲ.
ಇತ್ತೀಚೆಗೆ @geoallday ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೈರಲ್ ವಿಡಿಯೊ ಮೂಲಕ ಈ ಕಥೆಯನ್ನು ಮತ್ತೆ ಬೆಳಕಿಗೆ ತರಲಾಗಿದೆ. ಇದರಿಂದ ದೇಶದ ಇತಿಹಾಸದಲ್ಲಿ ಈ ಅಸಾಮಾನ್ಯ ಅಧ್ಯಾಯದ ಬಗ್ಗೆ ಅನೇಕ ಜನರು ಈಗ ತಿಳಿದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಎಲಾನ್ ಮಸ್ಕ್ʼಗೆ ಟಕ್ಕರ್ ಕೊಡಲು ಚೀನಾದಲ್ಲಿ 1000 ರೊಬೊ ತಯಾರಿ
ಈ ವಿಡಿಯೊ ಬಾಡಿಗೆ ಅನುಭವದ ಬಗ್ಗೆ ಹೆಚ್ಚಿನ ವಿವರಗಳನ್ನು ಸಹ ಒದಗಿಸಿದೆ. ಅತಿಥಿಗಳು ವಿಶೇಷ ಖಾಸಗಿ ಕಾರ್ಯಕ್ರಮಗಳಿಗೆ ಹಾಜರಾಗಬಹುದು ಮತ್ತು ದೇಶದ ರಮಣೀಯ ಸೌಂದರ್ಯವನ್ನು ಆನಂದಿಸಬಹುದು. ಆದರೆ ಆ ವೇಳೆ ರಾಜನು ಸ್ವತಃ ಉತ್ಸವಗಳಲ್ಲಿ ಭಾಗವಹಿಸುತ್ತಾನೆ ಎಂಬುದಾಗಿ ತಿಳಿಸಿದೆ. ಈ ಸೇವೆಯು ಇನ್ನು ಮುಂದೆ ಲಭ್ಯವಿಲ್ಲದಿದ್ದರೂ, ಈ ಬಾಡಿಗೆಯ ವಿಚಾರಕ್ಕೆ ಸಂಬಂಧಿಸಿದಂತೆ ಲಿಚ್ಟೆನ್‌ಸ್ಟೈನ್ ಬಗ್ಗೆ ಅನೇಕರಲ್ಲಿ ಕುತೂಹಲ ಮೂಡಿದ್ದಂತೂ ನಿಜ.