Vishwavani Editorial: ಕಾನೂನು ಮೇಲ್ಮಟ್ಟದಿಂದ ಜಾರಿಯಾಗಲಿ
ಚುನಾಯಿತ ಕಾರ್ಪೊರೇಟರ್‌ಗಳು ನಿಯಮಗಳ ಪ್ರಕಾರ ತಮ್ಮ ಆಸ್ತಿ ವಿವರ ಘೋಷಿಸಲು ವಿಫಲವಾದ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ 35 ಕಾರ್ಪೊರೇಟರ್ ಗಳ ನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ

ವಿಜಯಪುರ ಮಹಾನಗರ ಪಾಲಿಕೆ

ಚುನಾಯಿತ ಕಾರ್ಪೊರೇಟರ್‌ಗಳು ನಿಯಮಗಳ ಪ್ರಕಾರ ತಮ್ಮ ಆಸ್ತಿ ವಿವರ ಘೋಷಿಸಲು ವಿಫಲವಾದ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ 35 ಕಾರ್ಪೊರೇಟರ್ ಗಳನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಗ್ರಾಮಪಂಚಾಯಿತಿ ಸದಸ್ಯ ರಿಂದ ಹಿಡಿದು ಶಾಸಕ, ಸಂಸದರ ತನಕ ಚುನಾವಣೆಗೆ ಮುನ್ನ ಮತ್ತು ಚುನಾವಣೆಯ ನಂತರ ಅಧಿಕಾರವಧಿ ಮುಗಿಯುವ ತನಕ ಪ್ರತೀ ವರ್ಷ ಜನಪ್ರತಿ ನಿಧಿಗಳು ತಮ್ಮ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ. ಆದರೆ ಜನಪ್ರತಿನಿಧಿಗಳು ಈ ಆದೇಶ ವನ್ನು ಇದುವರೆಗೆ ಗಂಭೀರ ವಾಗಿ ಪರಿಗಣಿಸಿಲ್ಲ.
ಇದನ್ನೂ ಓದಿ: Vishwavani Editorial: ಅಪರಾಧ ಕೃತ್ಯಗಳಿಗೆ ಲಗಾಮು ಹಾಕಿ
ರಾಜ್ಯದ ಎಲ್ಲ ಶಾಸಕರು ಪ್ರತೀ ವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ನೀಡಬೇಕು. ಆದರೆ ಆಸ್ತಿ ವಿವರ ನೀಡದ ಹಿನ್ನೆಲೆಯಲ್ಲಿ ಈ ತನಕ ಯಾವುದೇ ಶಾಸಕರ ಸದಸ್ಯತ್ವ ರದ್ದಾ ಗಿಲ್ಲ. ಆದರೆ ಆಸ್ತಿ ವಿವರ ಸಲ್ಲಿಸದ ಕಾರಣಕ್ಕೆ ರಾಜ್ಯ ಚುನಾವಣೆ ಆಯೋಗ ಕಳೆದ ಜನವರಿ ಯಲ್ಲಿ ಆರೇಳು ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಿತ್ತು. ಇದೇ ಕಾರಣ ಮುಂದಿಟ್ಟು ಮಹಾನಗರಪಾಲಿಕೆಯೊಂದರ ಬಹುತೇಕ ಎಲ್ಲ ಸದಸ್ಯರು ಅನರ್ಹ ಗೊಂಡಿರುವುದು ಇದೇ ಮೊದಲು.
ಪ್ರಾದೇಶಿಕ ಆಯುಕ್ತರ ಈ ಆದೇಶವನ್ನು ಸದಸ್ಯರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ 9 ವರ್ಷಗಳ ಹಿಂದೆ ಜಾರಿಗೆ ಬಂದ ಕಾಯಿದೆಯೊಂದರ ಬಗ್ಗೆ ಸದಸ್ಯರಲ್ಲಿ ಈಗಲೂ ಸ್ಪಷ್ಟತೆ ಇಲ್ಲದಿರುವುದು ಅಚ್ಚರಿಯ ಸಂಗತಿ. 2016ರಲ್ಲಿ ಅಂಗೀಕರಿಸಲಾದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಪಂ, ತಾಪಂ, ಜಿಪಂ ಸದಸ್ಯರ ಆಸ್ತಿ ಘೋಷಣೆ)ನಿಯಮಗಳ ಪ್ರಕಾರ ಚುನಾಯಿತ ಸದಸ್ಯರು ತಾವು ಅಧಿಕಾರ ಸ್ವೀಕರಿಸಿದ ಮೂರು ತಿಂಗಳೊಳಗೆ ಮತ್ತು ಪ್ರತೀ ಆರ್ಥಿಕ ವರ್ಷ ಮುಕ್ತಾಯವಾದ ಮರು ತಿಂಗಳಲ್ಲಿ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ.
ವಿಜಯಪುರ ಪಾಲಿಕೆಯ ಇಬ್ಬರು ಮಾಜಿ ಸದಸ್ಯರು ಕಾರ್ಪೋರೇಟರುಗಳು ಆಸ್ತಿ ವಿವರ ಸಲ್ಲಿಸದಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ಮೆಟ್ಟಿಲೇರಿ ದ್ದರು. ಕಾನೂನು ಜಿಜ್ಞಾಸೆ ಏನೇ ಇರಲಿ, ಕಾನೂನಿನ ಗುರಾಣಿಯನ್ನು ಕೆಳಮಟ್ಟದಲ್ಲಿ ಪ್ರಯೋಗಿಸುವ ಮೊದಲು ಮೇಲ್ಮಟ್ಟದಲ್ಲಿ ಪ್ರಯೋಗಿಸಬೇಕು. ಆಸ್ತಿ ವಿವರ ಸಲ್ಲಿಸದ ಶಾಸಕರು, ಸಂಸದರ ಸದಸ್ಯತ್ವವೂ ರದ್ದಾಗಬೇಕು.