ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: ʻಸಿಲ್ಲಿ ಪ್ರಶ್ನೆ ಕೇಳಬೇಡಿʼ-ಪತ್ರಕರ್ತನಿಗೆ ಬೆವರಿಳಿಸಿದ ಸ್ಟೀಫನ್‌ ಫ್ಲೆಮಿಂಗ್‌!

RCB vs CSK: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 50 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ಹೆಡ್‌ ಕೋಚ್‌ ಸ್ಟಿಫನ್‌ ಫ್ಲೆಮಿಂಗ್‌ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಿಎಸ್‌ಕೆ ಕೋಚ್‌ ಗರಂ ಆದ ಘಟನೆ ನಡೆದಿದೆ. ನೀವು ನಮಗೆ ಮೂರ್ಖ ಪ್ರಶ್ನೆಯನ್ನು ಕೇಳಬೇಡಿ ಎಂದು ಹೇಳಿದ್ದಾರೆ.

ಪತ್ರಕರ್ತನಿಗೆ ಬೆವರಿಳಿಸಿದ ಸಿಎಸ್‌ಕೆ ಕೋಚ್‌ ಸ್ಟಿಫನ್‌ ಫ್ಲೆಮಿಂಗ್‌!

ಪರ್ತಕರ್ತನ ವಿರುದ್ದ ದೂರಿದ ಸ್ಟಿಫನ್‌ ಫ್ಲೆಮಿಂಗ್

Profile Ramesh Kote Mar 29, 2025 3:20 PM

ಚೆನ್ನೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ಶುಕ್ರವಾರ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 ) ಟೂರ್ನಿಯ 8ನೇ ಪಂದ್ಯದಲ್ಲಿ 50 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ 17 ವರ್ಷಗಳ ಬಳಿಕ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ಇದು ಮೊದಲ ಗೆಲುವಾಗಿದೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಚೆನ್ನೈ ತಂಡದ ಹೆಡ್‌ ಕೋಚ್‌ ಸ್ಟಿಫನ್‌ ಫ್ಲೆಮಿಂಗ್‌ ಅವರು ತಾಳ್ಮೆ ಕಳೆದುಕೊಂಡು ಘಟನೆ ನಡೆದಿದೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೆರಳಿದ ಸಿಎಸ್‌ಕೆ, ನೀವು ಮೂರ್ಖ ಪ್ರಶ್ನೆಗಳನ್ನು ಕೇಳಬೇಡಿ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟಿಫನ್‌ ಫ್ಲೆಮಿಂಗ್‌ಗೆ ಪತ್ರಕರ್ತರೊಬ್ಬರು,"ಮೊದಲನೇ ಪಂದ್ಯದಲ್ಲಿ 156 ರನ್‌ಗಳನ್ನು ಚೇಸ್‌ ಮಾಡಲು ನೀವು ಬಹುತೇಕ 20 ಓವರ್‌ಗಳನ್ನು ತೆಗೆದುಕೊಂಡಿದೀರಿ. ಇಂದು (ಶುಕ್ರವಾರ) ನೀವು 146 ರನ್‌ಗಳಿಗೆ ಸೀಮಿತರಾಗಿದ್ದೀರಿ. ಇದು ನಿಮ್ಮ ಕ್ರಿಕೆಟ್ ಆಡುವ ವಿಧಾನ ಎಂದು ನನಗೆ ತಿಳಿದಿದೆ, ಆದರೆ ಇದು ಒಂದು ರೀತಿಯಲ್ಲಿ ಹಳೆಯದಾಗುತ್ತಿದೆ ಎಂದು ನೀವು ಭಾವಿಸುತ್ತೀರಾ?" ಎಂದು ಪ್ರಶ್ನೆಯನ್ನು ಕೇಳಿದರು.

RCB vs CSK: ಸೋತರೂ ಖುಷಿ ಇದೆ; ದರ್ಪದ ಮಾತುಗಳನ್ನಾಡಿದ ಗಾಯಕ್ವಾಡ್‌

ಇದಕ್ಕೆ ಪ್ರತಿಕ್ರಿಯಿಸಿದ ಸಿಎಸ್‌ಕೆ ಹೆಡ್‌ ಕೋಚ್‌, "ನಮ್ಮ ಆಟದ ವಿಧಾನದ ಬಗ್ಗೆ ನಿಮ್ಮ ಅರ್ಥವೇನು? ನೀವು ಸ್ಪೋಟಕವಾಗಿ ಆಡಬೇಕೆಂದು ನೀವು ಹೇಳುತ್ತೀರಾ? ಎಲ್ಲಾ ಹಾದಿಯಲ್ಲಿ ಸ್ಪೋಟಕವಾಗಿ ಬ್ಯಾಟ್‌ ಮಾಡಬಲ್ಲ ಸಾಮರ್ಥ್ಯ ನಮ್ಮಲ್ಲಿದೆ. ನಿಮ್ಮ ಪ್ರಶ್ನೆ ನನಗೆ ಅರ್ಥವಾಗಲಿಲ್ಲ. ಅಂದರೆ, ನಾವು ಮೊದಲನೇ ಎಸೆತದಿಂದಲೇ ಬ್ಯಾಟ್‌ ಬೀಸಲಿಲ್ಲ ಹಾಗೂ ನಮ್ಮ ಕಡೆ ಅದೃಷ್ಟ ಇರಲಿಲ್ಲ. ಯಾರು ಗೆಲ್ಲಬಹುದೆಂದು ಕೊನೆಯಲ್ಲಿ ನೀವು ನೋಡಬಹುದು. ಇದು ಸಕಾರಾತ್ಮವಾಗಿ ಆಡುವ ಕ್ರಿಕೆಟ್‌ ಆಗಿದೆ. ನಮ್ಮನ್ನು ಕಡಿಮೆ ಅಂದಾಜಿಸಬೇಡಿ," ಎಂದು ಖಾರವಾಗಿ ಹೇಳಿದರು.

ಪತ್ರಕರ್ತ: "ನಾನು ನಿಮ್ಮನ್ನು ಕಡಿಮೆಯಾಗಿ ಅಂದಾಜಿಸುತ್ತಿಲ್ಲ."

ಫ್ಲೆಮಿಂಗ್‌: ಮೂರ್ಖ ಪ್ರಶ್ನೆಯನ್ನು ನೀವು ಕೇಳಿದ್ದೀರಿ,"

ತವರು ಅಂಗಣದ ಲಾಭದ ಬಗ್ಗೆ ಮಾತನಾಡಿದ ಸಿಎಸ್‌ಕೆ ಹೆಡ್‌ ಕೋಚ್‌,"ಚೆಪಾಕ್‌ನಲ್ಲಿ ನಮಗೆ ತವರು ಅಂಗಣದ ಲಾಭವಿಲ್ಲವೆಂದು ಕಳೆದ ಹಲವು ವರ್ಷಗಳಿಂದ ನಾವು ಹೇಳಿಕೊಂಡು ಬರುತ್ತಿದ್ದೇವೆ. ಹೊರಗಡೆ ಪಂದ್ಯಗಳನ್ನು ನಾವು ಹೆಚ್ಚು ಬಾರಿ ಗೆದ್ದಿದ್ದೇವೆ. ಇಲ್ಲಿನ ಪಿಚ್‌ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಾವು ನಿಮ್ಮ ಬಳಿ ಪ್ರಾಮಾಣಿಕವಾಗಿ ಉತ್ತರವನ್ನು ನೀಡಿದ್ದೇವೆ," ಎಂದು ತಿಳಿಸಿದ್ದಾರೆ.

RCB vs CSK: 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!

"ಕಳೆದ ಕೆಲ ವರ್ಷಗಳಿಂದ ಚೆಪಾಕ್‌ ಅಂಗಣದ ಪಿಚ್‌ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದು ನಮಗೆ ಹೊಸತೇನಲ್ಲ. ಪ್ರತಿಯೊಂದು ದಿನವೂ ನಾವು ಇಲ್ಲಿಗೆ ಬಂದು ಏನು ಮಾಡಬೇಕೆಂದು ನೋಡುತ್ತೇವೆ. ಈಗ ಚೆಪಾಕ್‌ ಸಂಪೂರ್ಣ ಬದಲಾಗಿದೆ. ಆದರೆ, ಹಳೆ ಚೆಪಾಕ್‌ನಲ್ಲಿ ನಾವು ನೇರವಾಗಿ ಮೈದಾನಕ್ಕೆ ತೆರಳಿ ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸಬಹುದಿತ್ತು. ಈ ಪಿಚ್‌ ಯಾವ ರೀತಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಸಾಕಷ್ಟು ಪ್ರಯತ್ನವನ್ನು ನಡೆಸುತ್ತಿದ್ದೇವೆ ಹಾಗೂ ಇದು ಸಂಪೂರ್ಣ ವಿಭಿನ್ನವಾಗಿದೆ," ಎಂದು ಸ್ಟಿಫನ್‌ ಫ್ಲೆಮಿಂಗ್‌ ಹೇಳಿದ್ದಾರೆ.



ಆರ್‌ಸಿಬಿ ಎದುರು ಸೋತಿದ್ದ ಸಿಎಸ್‌ಕೆ

ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ರಜತ್‌ ಪಾಟಿದಾರ್‌ ಸೇರದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ಸಹಾಯದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 196 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 197 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಬಾಲಿಸಿದ್ದ ಸಿಎಸ್‌ಕೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಇದರೊಂದಿಗೆ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 146 ರನ್‌ಗಳಿಗೆ ಸೀಮಿತವಾಗಿತ್ತು.