ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮರದ ಉಪಕರಣಗಳ ಸ್ವಚ್ಛತೆಗೆ ಇಲ್ಲಿದೆ ಸುಲಭದ ಟಿಪ್ಸ್‌

ತರಕಾರಿ ಕತ್ತರಿಸುವ ಹಲಗೆಗಳು ಅಥವಾ ಚಾಪಿಂಗ್‌ ಬೋರ್ಡ್‌ಗಳಿಂದ ಹಿಡಿದು ಲಟ್ಟಣಿಗೆ, ಚಮಚೆಗಳು, ಸೌಟು ಗಳವರೆಗೆ ಹಲವು ರೀತಿಯ ಮರದ ಉಪಕರಣಗಳು ಅಡುಗೆ ಮನೆಯಲ್ಲಿ ಬಳಕೆಯಾಗುತ್ತವೆ. ಅನುಕೂಲವೂ ಹೌದು ಅಲಂಕಾರವೂ ಹೌದು ಎಂಬಂಥ ವಸ್ತುಗಳು ಇವೆಲ್ಲ. ಆದರೆ ಇವುಗಳ ಸ್ವಚ್ಛತೆ ಯಲ್ಲಿ ಕೊಂಚ ನಿರ್ಲಕ್ಷ್ಯ ವಹಿಸಿದರೂ ಸೂಕ್ಷ್ಮಾಣುಗಳ ಆಡುಂಬೊಲವಾಗುತ್ತವೆ ಈ ವಸ್ತುಗಳು. ಹಾಗಾದರೆ ಇವುಗಳ ಸ್ವಚ್ಛತೆಯಲ್ಲಿ ಲೋಪವಾಗದಂತೆ ನಿರ್ವಹಿಸುವುದು ಹೇಗೆ?

ಮರದ ಉಪಕರಣಗಳನ್ನು ಹೇಗೆ ರಕ್ಷಣೆ ಮಾಡಬೇಕು?

ಸಂಗ್ರಹ ಚಿತ್ರ -

Profile
Pushpa Kumari Jan 3, 2026 7:00 AM

ನವದೆಹಲಿ,ಡಿ.2: ಅಡುಗೆಮನೆಯಲ್ಲಿ ಮರದ ಉಪಕರಣಗಳನ್ನು (Wooden Material) ಉಪಯೋಗಿಸುವ ಖಯಾಲಿ, ಅಗತ್ಯ ಬಹಳಷ್ಟು ಜನರಿಗೆ ಇರುತ್ತದೆ. ತರಕಾರಿ ಕತ್ತರಿಸುವ ಹಲಗೆಗಳು ಅಥವಾ ಚಾಪಿಂಗ್‌ ಬೋರ್ಡ್‌ಗಳಿಂದ ಹಿಡಿದು ಲಟ್ಟಣಿಗೆ, ಚಮಚೆಗಳು, ಸೌಟು ಗಳವರೆಗೆ ಹಲವು ರೀತಿಯ ಮರದ ಉಪಕರಣಗಳು ಅಡುಗೆ ಮನೆಯಲ್ಲಿ ಬಳಕೆಯಾಗುತ್ತವೆ. ಅನುಕೂಲವೂ ಹೌದು ಅಲಂಕಾರವೂ ಹೌದು ಎಂಬಂಥ ವಸ್ತುಗಳು ಇವೆಲ್ಲ. ಆದರೆ ಇವುಗಳ ಸ್ವಚ್ಛತೆಯಲ್ಲಿ ಕೊಂಚ ನಿರ್ಲಕ್ಷ್ಯ ವಹಿಸಿದರೂ ಸೂಕ್ಷ್ಮಾಣುಗಳ ಆಡುಂಬೊಲವಾಗುತ್ತವೆ ಈ ವಸ್ತುಗಳು. ಹಾಗಾದರೆ ಇವುಗಳ ಸ್ವಚ್ಛತೆಯಲ್ಲಿ ಲೋಪವಾಗದಂತೆ ನಿರ್ವಹಿಸುವುದು ಹೇಗೆ?

ತೊಂದರೆಯೇನು?:

ಅಡುಗೆಯಮನೆಯಲ್ಲಿರುವ ಎಲ್ಲ ವಸ್ತುಗಳ ಸ್ವಚ್ಛತೆಯನ್ನು ನಿರ್ವಹಿಸುವ ನಮಗೆ ಈ ಮರದ ವಸ್ತುಗಳ ನಿರ್ವಹಣೆಯಲ್ಲಿರುವ ತೊಂದರೆಯೇನು? ಮರದ ಹಲಗೆಗಳ ಮೇಲ್ಮೈಯಲ್ಲಿ ಅಗಣಿತ ಸೂಕ್ಷ್ಮ ರಂಧ್ರಗಳಿರುತ್ತವೆ. ಟೊಮೇಟೊ, ಬೀಟ್‌ರೂಟ್‌, ಪಾಲಕ್‌ ಮುಂತಾದ ಗಾಢವರ್ಣಗಳ ಸೊಪ್ಪು, ತರಕಾರಿಗಳನ್ನು ಮರದ ಹಲಗೆಗಳ ಮೇಲೆ ಕತ್ತರಿಸಿದಾಗ, ಇವುಗಳ ರಸವನ್ನು ಈ ರಂಧ್ರಗಳು ಹೀರಿಕೊಳ್ಳುತ್ತವೆ. ಮಾತ್ರವಲ್ಲ, ಯಾವುದೇ ಮೀನು, ಮಾಂಸ ವನ್ನು ಇವುಗಳ ಮೇಲೆ ಕತ್ತರಿಸಿದಾಗಲೂ ಅದರ ವಾಸನೆ ದೀರ್ಘಕಾಲದವರೆಗೆ ಈ ಚಾಪಿಂಗ್‌ ಬೋರ್ಡ್‌ಗಳ ಮೇಲೆ ಉಳಿಯಲು ಸಾಧ್ಯವಿದೆ. ಚಮಚೆ, ಸೌಟುಗಳನ್ನು ಚಟ್ಣಿ, ಸಾಂಬಾರ್‌, ಗ್ರೇವಿ, ಗೊಜ್ಜುಗಳು ಅಥವಾ ಯಾವುದೇ ಪರಿಮಳಯುಕ್ತ ಮಸಾಲೆಯುಕ್ತ ಆಹಾರಗಳ ಜೊತೆ ಬಳಸಿದಾಗಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೆಂದು ಸ್ವಚ್ಛ ಮಾಡಲೆಂದು ದೀರ್ಘಕಾಲ ನೀರಿನಲ್ಲಿ ಮುಳುಗಿಸಿಟ್ಟರೆ ಇನ್ನೂ ಅಧ್ವಾನ. ತೇವ ಹೆಚ್ಚಿದಂತೆಲ್ಲಾ ಫಂಗಸ್‌ ಕಾಟ, ಬ್ಯಾಕ್ಟೀರಿಯಗಳ ಉಪಟಳ ಹೆಚ್ಚುತ್ತದೆ. ಈ ಎಲ್ಲ ಕಾರಣಗಳಿಂದ ಮರದ ಪಾಕೋಪಕರಣಗಳ ಸ್ವಚ್ಛತೆ ಸವಾಲೆನಿಸುತ್ತದೆ. ಇವುಗಳ ಸ್ವಚ್ಛತೆಯನ್ನು ನಿರ್ವಹಿಸಲು ಇಲ್ಲಿವೆ ಒಂದಿಷ್ಟು ಉಪಯುಕ್ತ ಸಲಹೆಗಳು.

ಸೌಟು, ಚಮಚೆಗಳು:

ಇವು ಅತಿ ಹೆಚ್ಚು, ಮಸಾಲೆ, ಎಣ್ಣೆ, ಬಣ್ಣ ಮತ್ತು ಪರಿಮಳಗಳನ್ನು ಹೀರಿ ಕೊಳ್ಳುವಂಥವು. ಮರದ ಸೌಟುಗಳು ಉಪಯೋಗಿಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ತಮ್ಮ ಮೂಲ ಬಣ್ಣವನ್ನೇ ಕಳೆದುಕೊಳ್ಳುವಷ್ಟು ಬದಲಾಗಿಹೋಗುತ್ತವೆ. ಪ್ರತಿಬಾರಿ ಉಪಯೋಗಿಸಿದ ಮೇಲೆ, ಸೌಮ್ಯವಾದ ಸೋಪಿನಿಂದ ಉಜ್ಜಿ, ಮರೆಯದೇ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಚೆನ್ನಾಗಿ ಒರೆಸಿ, ಒಣಗಿಸಿ. ಇವುಗಳನ್ನು ಎಂದಿಗೂ ಹತ್ತಾರು ನಿಮಿಷಗಳಿಗಿಂತ ಹೆಚ್ಚು ನೆನೆಸಿಡಬೇಡಿ. ಇದರಿಂದ ಈ ವಸ್ತುಗಳು ಬೇಗನೇ ಹಾಳಾಗುತ್ತವೆ.

ಅಪರೂಪಕ್ಕೊಮ್ಮೆ, ಅಂದರೆ ನಾಲ್ಕಾರು ತಿಂಗಳಿಗೊಮ್ಮೆ ಇವುಗಳನ್ನು ಡೀಪ್‌ ಕ್ಲೀನ್‌ ಮಾಡಿ. ಇದಕ್ಕಾಗಿ ದೊಡ್ಡದೊಂದು ಕಡಾಯಿಯಲ್ಲಿ ನೀರು ಕುದಿಸಿ, ಈ ಕುದಿಯುವ ನೀರಿಗೆ ಚಮಚೆ, ಸೌಟು, ಲಟ್ಟಣಿಗೆಯಂಥವನ್ನು ಹಾಕಿ, ಕೆಲವು ನಿಮಿಷಗಳ ಕಾಲ ಕುದಿಸಿ. ಇವು ತಮ್ಮಲ್ಲಿರುವ ಎಣ್ಣೆ, ಕೊಳೆಯನ್ನೆಲ್ಲಾ ಸಂಪೂರ್ಣ ಬಿಟ್ಟುಕೊಳ್ಳುತ್ತವೆ. ನಂತರ ಅಲ್ಲಿಂದ ತೆಗೆದು ಸ್ವಚ್ಛವಾದ ನೀರಿನಲ್ಲಿ ತೊಳೆದು ಒರೆಸಿ, ಗಾಳಿಯಲ್ಲಿ ಒಣಗಿಸಿ.

Astro Tips: ನಿಮ್ಮ ಮನೆಯಲ್ಲಿ ತುಳಸಿ ಇದ್ಯಾ, ಹಾಗಾದ್ರೆ ಪ್ರತಿದಿನ ಹೀಗೆ ಮಾಡಿ; ಮನೆಯ ಸಂಪತ್ತು ವೃದ್ಧಿಯಾಗಲು ಶುರುವಾಗುತ್ತೆ!

ಇವು ಪೂರ್ತಿಯಾಗಿ ಒಣಗಿದ ಮೇಲೆಯೇ ಡ್ರಾಗಳಲ್ಲಿ ಇರಿಸಿ. ಒದ್ದೆಯಾಗಿರುವ ಅಥವಾ ತೇವ ಉಳಿದಿರುವ ಸೌಟು, ಚಮಚಗಳನ್ನು ಎಂದಿಗೂ ಕಪಾಟು, ಡ್ರಾಗಳಲ್ಲಿ ಅಥವಾ ಯಾವುದೇ ಜಾಗದಲ್ಲಿ ಮುಚ್ಚಿ ಇರಿಸಬೇಡಿ. ಇದರಿಂದ ಬೇಗನೇ ಸೂಕ್ಷ್ಮಾಣುಗಳು ಬೆಳೆಯುತ್ತವೆ. ಸಂಪೂರ್ಣವಾಗಿ ಒಣಗಿದ ಮೇಲೆಯೇ ತೆಗೆದಿರಿಸಿಕೊಳ್ಳಿ.

ಚಾಪಿಂಗ್‌ ಬೋರ್ಡ್‌:

ತರಕಾರಿ, ಹಣ್ಣುಗಳಿಗೆ ಪ್ರತ್ಯೇಕ ಮತ್ತು ಮೀನು, ಮಾಂಸಗಳಿಗೆ ಪ್ರತ್ಯೇಕ ಬೋರ್ಡ್‌ ಇರಿಸಿಕೊಂಡರೆ ಯಾವತ್ತಿಗೂ ಕ್ಷೇಮ. ಇವುಗಳನ್ನು ಪ್ರತಿ ಉಪಯೋಗದ ನಂತರ ಮರೆಯದೇ ಸ್ವಚ್ಛ ಮಾಡಿ. ಬೆಳಗ್ಗೆ ಬಳಸಿದ್ದನ್ನು ಸಂಜೆಯವರೆಗೆ ಇಟ್ಟು ಒಣಗಿಸಬೇಡಿ. ಇವುಗಳ ಸ್ವಚ್ಛತೆಗೆ ಪ್ರತ್ಯೇಕ ಸ್ಪಾಂಜ್‌ ಇರಿಸುವುದು ಉತ್ತಮ.

ಇವುಗಳನ್ನು ತಿಂಗಳಿಗೊಮ್ಮೆಯಾದರೂ ಕೀಟಾಣುಮುಕ್ತಗೊಳಿಸುವುದು ಅತ್ಯಗತ್ಯ. ಇದಕ್ಕಾಗಿ ಉಪ್ಪು ಮತ್ತು ಬೇಕಿಂಗ್‌ ಸೋಡಾವನ್ನು ಹಲಗೆಯ ಮೇಲೆಲ್ಲ ಉದುರಿಸಿ, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ತಿಕ್ಕಿ ತೊಳೆಯಿರಿ. ಇದರಿಂದ ಹಲಗೆಯ ಮೇಲಿರುವ ಬಣ್ಣ, ವಾಸನೆ ಮತ್ತು ಕೀಟಾಣುಗಳನ್ನು ಪರಿಣಾಮಕಾರಿಯಾಗಿ ತೆಗೆಯಬಹುದು.

ಈ ಹಲಗೆಗಳು ಒಣಗಿ ಬಿರುಕು ಬಿಡದಂತೆ ಕಾಪಾಡಿಕೊಳ್ಳುವುದು ಸಹ ಮುಖ್ಯ. ಇದಕ್ಕಾಗಿ ತಿಂಗಳಿ ಗೊಮ್ಮೆ ಕೊಬ್ಬರಿ ಎಣ್ಣೆಯನ್ನು ಇಡೀ ಹಲಗೆಯ ಮೇಲೆಲ್ಲೆ ಧಾರಾಳವಾಗಿ ಲೇಪಿಸಿ, ಹೆಚ್ಚುವರಿ ಎಣ್ಣೆಯನ್ನು ಸ್ವಚ್ಛ ಬಟ್ಟೆಯಿಂದ ಒರೆಸಿ ತೆಗೆಯಿರಿ. ಇದರಿಂದ ಚಾಪಿಂಗ್‌ ಬೋರ್ಡ್‌ ಒಣಗಿದಂತಾಗಿ ಬಿರುಕು ಬಿಡುವುದನ್ನು ತಡೆಯಬಹುದು.