‘ರಾಯನ್’ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಸಿಕ್ಕಿದ್ದಕ್ಕೆ ಟೀಕೆ; ವಿರೋಧಿಗಳಿಗೆ ಸಖತ್ ಆಗಿಯೇ ಟಾಂಗ್ ಕೊಟ್ಟ ನಟ ಧನುಷ್
'ರಾಯನ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಕುಹಕಗಳಿಗೆ ನಟ ಧನುಷ್ ಖಡಕ್ ಉತ್ತರ ನೀಡಿದ್ದಾರೆ. ಆ ವರ್ಷ 'ಮೆಯ್ಯಳಗನ್' ಹಾಗೂ 'ಮಹಾರಾಜ'ಗಳಂತಹ ಉತ್ತಮ ಸಿನಿಮಾಗಳಿದ್ದರೂ, 'ರಾಯನ್' ಚಿತ್ರಕ್ಕಾಗಿ ತಾವು ಪಟ್ಟ ಪ್ರಾಮಾಣಿಕ ಶ್ರಮವನ್ನು ಯಾರೂ ಕಡೆಗಣಿಸಬಾರದು ಎಂದಿದ್ದಾರೆ.
-
ತಮಿಳು ನಟ ಧನುಷ್ ಅಭಿನಯಿಸಿ, ನಿರ್ದೇಶಿಸಿದ್ದ ‘ರಾಯನ್’ ಚಿತ್ರಕ್ಕೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದಿದ್ದವು. ಅದೇ ವರ್ಷ ತಮಿಳಿನಲ್ಲಿ ‘ಮೆಯ್ಯಳಗನ್’ ಹಾಗೂ ‘ಮಹಾರಾಜ’ದಂತಹ ಅತ್ಯುತ್ತಮ ಸಿನಿಮಾಗಳು ತೆರೆಕಂಡಿದ್ದವು. ರಾಯನ್‌ಗಿಂತಲೂ ಈ ಚಿತ್ರಗಳು ಪ್ರಶಸ್ತಿಗೆ ಹೆಚ್ಚು ಅರ್ಹವಾಗಿದ್ದವು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ಆ ಎಲ್ಲಾ ಟೀಕೆಗಳಿಗೆ ಸ್ವತಃ ನಟ ಧನುಷ್ ಅವರೇ ನೇರವಾಗಿ ಉತ್ತರಿಸಿದ್ದಾರೆ.
ಶ್ರಮವನ್ನು ಯಾರೂ ಕಡೆಗಣಿಸಬೇಡಿ
ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟ ಧನುಷ್, "ಆ ವರ್ಷ ಬಿಡುಗಡೆಯಾದ ತಮಿಳು ಸಿನಿಮಾಗಳಲ್ಲಿ ರಾಯನ್‌ಗಿಂತಲೂ ಉತ್ತಮ ಸಿನಿಮಾಗಳಿದ್ದವು ಎಂಬುದು ನಿಜ. ಆ ಸಿನಿಮಾಗಳ ಅಭಿಮಾನಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ, ನಾನು ಅದನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ಹಾಗಂತ, ನನ್ನ ಸಾಧನೆಯನ್ನು ಅಥವಾ ರಾಯನ್ ಸಿನಿಮಾಕ್ಕಾಗಿ ನಾನು ಪಟ್ಟ ಶ್ರಮವನ್ನು ಯಾರೂ ಕಡೆಗಣಿಸಬೇಡಿ" ಎಂದು ಯಾವುದೇ ಸಿನಿಮಾದ ಹೆಸರು ಹೇಳದೆ ಪ್ರತಿಕ್ರಿಯಿಸಿದ್ದಾರೆ.
Dhanush: ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ಠಾಕೂರ್?
ತುಂಬಾ ಸಿನಿಮಾಗಳಿಗೆ ಪ್ರಶಸ್ತಿ ಸಿಕ್ಕಿಲ್ಲ
ಮಂದುವರಿದು ಮಾತನಾಡಿದ ಅವರು, "ತುಂಬಾ ವರ್ಷಗಳ ಹಿಂದೆ ನನ್ನ 'ಅದು ಒರು ಕನಾ ಕಾಲಮ್' ಸಿನಿಮಾ ಬಿಡುಗಡೆಯಾಗಿತ್ತು. ಆ ಚಿತ್ರಕ್ಕೆ ನನಗೆ ಖಂಡಿತವಾಗಿಯೂ ಪ್ರಶಸ್ತಿ ಸಿಗುತ್ತದೆ ಎಂದು ಎಲ್ಲರೂ ಹೇಳಿದ್ದರು. ಆ ಸಮಯದಲ್ಲಿ ನಾನು ಎಷ್ಟು ಚಿಕ್ಕವನಾಗಿದ್ದೆ ಎಂದರೆ, ನಾನೂ ಕೂಡ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದೆ. ಆದರೆ ನನಗೆ ಸಿಗಲಿಲ್ಲ. ಆಮೇಲೆ 'ಪುದುಪೆಟ್ಟೈ' ಸಿನಿಮಾ ಬಂತು. '3', 'ಮಯಕ್ಕಮ್ ಎನ್ನ', 'ವಡ ಚೆನ್ನೈ', 'ಕರ್ಣನ್', 'ಮರಿಯಾನ್' ಮತ್ತು 'ರಾಂಝಣಾ' ಸೇರಿದಂತೆ ಹಲವು ಚಿತ್ರಗಳು ಬಂದಾಗಲೂ ನೀವೆಲ್ಲರೂ ನನಗೆ ಪ್ರಶಸ್ತಿ ಸಿಗುತ್ತದೆ ಎಂದು ಹೇಳಿದ್ದಿರಿ, ಆದರೆ ಸಿಗಲಿಲ್ಲ" ಎಂದು ಧನುಷ್ ನೆನಪಿಸಿಕೊಂಡಿದ್ದಾರೆ.
Kriti Sanon: ಧನುಷ್-ಕೃತಿ ನಟನೆಯ ʻತೇರೆ ಇಷ್ಕ್ ಮೇʼ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್ ಎಲ್ಲಿ?
ಪ್ರಶಸ್ತಿಗಳನ್ನು ಕಡೆಗಣಿಸಬೇಡಿ, ಸಂಭ್ರಮಿಸಿ
"ನಾವು ಎಷ್ಟೇ ಪ್ರಯತ್ನಿಸಿದರೂ ಕೆಲವು ವಿಷಯಗಳು ತಾವಾಗಿಯೇ ಒಲಿದುಬರುತ್ತವೆ. ನನ್ನ ವಿಷಯದಲ್ಲೂ ಆಗಿದ್ದು ಅದೇ. ನನಗೆ ಆ ಅವಕಾಶ ಸಿಕ್ಕಿತು. ಸಿನಿಮಾ ಹೇಗೆ ಮೂಡಿಬಂತು ಎಂಬುದನ್ನು ಬದಿಗಿಟ್ಟರೆ, ನಾನು ಅದಕ್ಕಾಗಿ ಪಟ್ಟ ಶ್ರಮ ಪ್ರಾಮಾಣಿಕವಾಗಿತ್ತು. ಒಬ್ಬ ತಮಿಳನಾಗಿ ನನಗೆ ಮತ್ತೆರಡು ರಾಷ್ಟ್ರಪ್ರಶಸ್ತಿಗಳು ಸಿಕ್ಕಿವೆ. ಇದನ್ನು ಕಡೆಗಣಿಸಬೇಡಿ, ಸಂಭ್ರಮಿಸಿ" ಎಂದು ಕರೆ ನೀಡಿದ್ದಾರೆ.
ನಾನು ನಿಮಗಿಂತ ಕೆಟ್ಟವನು
ಇದೇ ವೇಳೆ ನಟ ಅಜಿತ್ ಕುಮಾರ್ ಅವರ ಮಾತೊಂದನ್ನು ಉಲ್ಲೇಖಿಸಿದ ಧನುಷ್, "ನಮ್ಮ 'ತಲಾ' ಅಜಿತ್ ಸರ್ ಹೇಳಿದಂತೆ, ನೀವು ಸೋಲನ್ನು ಒಪ್ಪಿಕೊಳ್ಳುವವರೆಗೂ ನಿಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಏನಂತೀರಾ ಬೇಬಿ? 'ಇಫ್ ಯು ಆರ್ ಬ್ಯಾಡ್, ಐ ಆಮ್ ಯುವರ್ ಡ್ಯಾಡ್' (ನೀವು ಕೆಟ್ಟವರಾಗಿದ್ದರೆ, ನಾನು ನಿಮಗಿಂತ ಕೆಟ್ಟವನು)" ಎಂದು ಮಾಸ್ ಶೈಲಿಯಲ್ಲಿ ಪಂಚ್ ಡೈಲಾಗ್ ಹೊಡೆದಿದ್ದಾರೆ.