ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thalapathy Vijay: ಚೆನ್ನೈನ ಮಾಲ್‌ನಲ್ಲಿ ʻಜನ ನಾಯಗನ್‌ʼ ಸಿನಿಮಾ ಪ್ರದರ್ಶನ ಅರ್ಧಕ್ಕೆ ಸ್ಥಗಿತ; ಪೊಲೀಸರ ಎಂಟ್ರಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ಬೆಳಗಿನ ಶೋ ಚೆನ್ನೈನ ಅಂಪಾ ಮಾಲ್‌ನ ಪಿವಿಆರ್‌ನಲ್ಲಿ ಗಂಟೆಗಟ್ಟಲೆ ಸ್ಥಗಿತಗೊಂಡಿತು. 'ಎ' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ಪಡೆದಿರುವ ಈ ಚಿತ್ರಕ್ಕೆ ಪೋಷಕರು ಮಕ್ಕಳನ್ನು ಕರೆತಂದಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ, ಸಿನಿಮಾವನ್ನು ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ.

ಚೆನ್ನೈ ಮಾಲ್‌ನಲ್ಲಿ 'ಜನ ನಾಯಗನ್' ಅರ್ಧಕ್ಕೆ ಸ್ಥಗಿತ; ಪೊಲೀಸರ ಎಂಟ್ರಿ!

-

Avinash GR
Avinash GR Jul 27, 2026 5:58 PM

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್‌ ಅಭಿನಯದ 'ಜನ ನಾಯಗನ್' ಸಿನಿಮಾಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ, ಚೆನ್ನೈನ ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‌ʻಜನ ನಾಯಗನ್ʼ ಸಿನಿಮಾವನ್ನು ಅರ್ಧಕ್ಕೇ ನಿಲ್ಲಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಈ ರೀತಿ ಆಗಿದ್ದೇಕೆ?

ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ (ವಯಸ್ಕರ ಸಿನಿಮಾ) ಪ್ರಮಾಣಪತ್ರ ನೀಡಿದೆ. ಚಿತ್ರದಲ್ಲಿ ಲೈಂಗಿಕ ದೌರ್ಜನ್ಯ, ಅಪ್ರಾಪ್ತ ಮಗುವಿನ ಮೇಲಿನ ಶೋಷಣೆಯ ದೃಶ್ಯಗಳು ಹಾಗೂ ಅತಿಯಾದ ಹಿಂಸಾಚಾರದ ಸನ್ನಿವೇಶಗಳಿರುವುದರಿಂದ, ಮಕ್ಕಳು ಈ ಸಿನಿಮಾವನ್ನು ನೋಡುವಂತಿಲ್ಲ. ಆದರೆ, ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ನಿಯಮ ಮೀರಿ ಮಕ್ಕಳು ಸಿನಿಮಾ ವೀಕ್ಷಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರದರ್ಶನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.

ಸಿನಿಮಾ ಪ್ರದರ್ಶನದ ವೇಳೆ ಪೊಲೀಸರ ಎಂಟ್ರಿ

ಇಂತಹುದೇ ಒಂದು ಘಟನೆ ಚೆನ್ನೈನ ಅಂಪಾ ಮಾಲ್‌ನಲ್ಲಿರುವ ಪಿವಿಆರ್‌ ಸಿನಿಮಾಸ್‌ನ ಬೆಳಗಿನ 9:25 ರ ಶೋನಲ್ಲಿ ನಡೆದಿದೆ. ವಯಸ್ಕರಿಗೆ ಮಾತ್ರ ಸೀಮಿತವಾದ ಈ ಸಿನಿಮಾದ ಪ್ರದರ್ಶನಕ್ಕೆ ಹಲವು ಕುಟುಂಬಗಳು ಮಕ್ಕಳನ್ನು ಕರೆತಂದಿದ್ದಾರೆ. ಈ ಮಾಹಿತಿ ತಿಳಿದು ಪೊಲೀಸರು ಚಿತ್ರಮಂದಿರದ ಹಾಲ್‌ಗೆ ಭೇಟಿ ನೀಡಿದ್ದಾರೆ. ಪ್ರೇಕ್ಷಕರೊಬ್ಬರು ಹಂಚಿಕೊಂಡ ವಿಡಿಯೋ ಪ್ರಕಾರ, ಮಕ್ಕಳೊಂದಿಗೆ ಬಂದಿದ್ದ ಪೋಷಕರನ್ನು ಹೊರಗೆ ಕಳುಹಿಸುವವರೆಗೆ ಸುಮಾರು ಒಂದು ಗಂಟೆ ಕಾಲ ಚಿತ್ರದ ಪ್ರದರ್ಶನವನ್ನು ತಡೆಹಿಡಿಯಲಾಗಿತ್ತು.

ಈ ಗೊಂದಲದ ಸಮಯದಲ್ಲಿ ಚಿತ್ರಮಂದಿರದ ಸಿಬ್ಬಂದಿಯಿಂದ ಸರಿಯಾದ ಮಾಹಿತಿ ಸಿಗದೆ ಪ್ರೇಕ್ಷಕರು ಪರದಾಡುವಂತಾಯಿತು. ತದನಂತರ ಥಿಯೇಟರ್ ಆಡಳಿತ ಮಂಡಳಿಯು ಟಿಕೆಟ್ ಹಣವನ್ನು ರಿಫಂಡ್ ಮಾಡುವುದಾಗಿ ಘೋಷಿಸಿತು. ಮಕ್ಕಳೊಂದಿಗೆ ಬಂದಿದ್ದ ಕುಟುಂಬಗಳು ಹೊರಹೋದ ನಂತರವಷ್ಟೇ ಸಿನಿಮಾ ಪ್ರದರ್ಶನ ಪುನರಾರಂಭಗೊಂಡಿತು. ಚಿತ್ರಮಂದಿರದ ಸಿಬ್ಬಂದಿ ಜನಸಂದಣಿಯನ್ನು ಸೂಕ್ತವಾಗಿ ನಿರ್ವಹಿಸಿದ್ದರೆ ಈ ಗೊಂದಲವನ್ನು ತಡೆಯಬಹುದಿತ್ತು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ʻಜನ ನಾಯಗನ್ʼ‌ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ ಪೊಲೀಸರು

'ಎ' ರೇಟಿಂಗ್‌ಗೆ ಚಿತ್ರತಂಡದ ಅಸಮಾಧಾನ?

ಹಲವು ಬದಲಾವಣೆಗಳನ್ನು ಮಾಡಿದ ನಂತರವಷ್ಟೇ 'ಜನ ನಾಯಗನ್' ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡಲಾಗಿತ್ತು. ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಉಲ್ಲೇಖವನ್ನು ತೆಗೆದುಹಾಕಲು ನಿರ್ಮಾಪಕರಿಗೆ ಸೂಚಿಸಲಾಗಿತ್ತು. ಜೊತೆಗೆ ಸಂಭಾಷಣೆಗಳನ್ನು ಬದಲಾಯಿಸಿ, ಹಿಂಸಾತ್ಮಕ ದೃಶ್ಯಗಳನ್ನು ಕತ್ತರಿಸಲಾಗಿತ್ತು. ಆದರೆ, ಸೆನ್ಸಾರ್ ಮಂಡಳಿಯ ಈ ನಿರ್ಧಾರದ ಬಗ್ಗೆ ಚಿತ್ರತಂಡವು ಅಸಮಾಧಾನ ವ್ಯಕ್ತಪಡಿಸಿತ್ತು ಎಂಬ ಮಾಹಿತಿ ಇದೆ. "ಹೆಣ್ಣು ಮಗುವಿನ ಸಬಲೀಕರಣದ ಕುರಿತಾದ ಚಿತ್ರದ ಮುಖ್ಯ ಸಂದೇಶವು ಪ್ರತಿಯೊಂದು ಕುಟುಂಬವನ್ನು ತಲುಪಬೇಕಿತ್ತು" ಎಂದು ವಾದಿಸಿತ್ತು ಎನ್ನಲಾಗಿದೆ.

Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್‌ ʻನೀರಸʼ ಮೆರವಣಿಗೆ!

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ನಿಯಮದಂತೆ 'ಎ' ರೇಟಿಂಗ್ ಎಂದರೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ವೀಕ್ಷಣೆಗೆ ಅವಕಾಶವಿರುತ್ತದೆ. ಸಣ್ಣ ಪಟ್ಟಣಗಳ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಈ ನಿಯಮದಲ್ಲಿ ಕೊಂಚ ಸಡಿಲಿಕೆ ಕಂಡುಬಂದರೂ, ಚೆನ್ನೈನ ಮಲ್ಟಿಪ್ಲೆಕ್ಸ್‌ಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ. ಆದರೂ, ಇಂತಹದ್ದೊಂದು ಘಟನೆ ನಡೆದಿದ್ದೇಕೆ ಎಂಬುದು ಎಲ್ಲರ ಪ್ರಶ್ನೆ ಆಗಿದೆ.