ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ; ಬೆಂಗಳೂರಿನಲ್ಲಿ ಅಂತ್ಯಕ್ರಿಯೆ
ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ (85) ಅವರು ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಅವರು, ಪ್ರಕಾಶ್ ರಾಜ್ ಅವರ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಅಗಲಿಕೆಯಿಂದ ನಟ ಪ್ರಕಾಶ್ ರಾಜ್ ತೀವ್ರ ದುಃಖದಲ್ಲಿದ್ದಾರೆ.
-
ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ರಾಜ್ (85) ಅವರು ಸೋಮವಾರ (ಮಾ.30) ಬೆಳಿಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯಿಯೊಂದಿಗೆ ಅಪಾರ ಒಡನಾಟ ಹೊಂದಿದ್ದ ಪ್ರಕಾಶ್ ರಾಜ್, ಚಿತ್ರೀಕರಣದಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಆಗಾಗ ಬೆಂಗಳೂರಿಗೆ ಬಂದು ತಮ್ಮ ತಾಯಿಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದರು.
ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಕಾಶ್ ರಾಜ್ ಬೆಂಗಳೂರಿಗೆ ಆಗಮಿಸಿದ್ದಾರೆ. ಸ್ವರ್ಣಲತಾ ಅವರ ಅಂತ್ಯಕ್ರಿಯೆಯು ಸೋಮವಾರ ಸಂಜೆ ಬೆಂಗಳೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಸ್ವರ್ಣಲತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಕಾಶ್ ರಾಜ್ ವೈಯಕ್ತಿಕ ಬದುಕು
ನಟ ಪ್ರಕಾಶ್ ರಾಜ್ ಅವರ ವೈಯಕ್ತಿಕ ಜೀವನವು ಅನೇಕ ಏರಿಳಿತಗಳಿಂದ ಕೂಡಿದೆ. 1994ರಲ್ಲಿ ನಟಿ ಲಲಿತಾ ಕುಮಾರಿ (ಡಿಸ್ಕೋ ಶಾಂತಿ ಅವರ ತಂಗಿ) ಅವರನ್ನು ಪ್ರಕಾಶ್ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರಿಯರು (ಮೇಘನಾ, ಪೂಜಾ) ಹಾಗೂ ಒಬ್ಬ ಪುತ್ರ (ಸಿದ್ಧು) ಜನಿಸಿದ್ದರು. ಆದರೆ, 2004ರಲ್ಲಿ ಐದು ವರ್ಷದ ಮಗ ಸಿದ್ಧು ಗಾಳಿಪಟ ಹಾರಿಸುವಾಗ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟಿದ್ದು ಪ್ರಕಾಶ್ ರಾಜ್ ಅವರನ್ನು ಅಕ್ಷರಶಃ ಕುಗ್ಗಿಸಿತ್ತು. ಈ ಘಟನೆಯು ಅವರ ವೈವಾಹಿಕ ಜೀವನದ ಮೇಲೂ ಪ್ರಭಾವ ಬೀರಿತು. ನಂತರದ ಮನಸ್ತಾಪಗಳಿಂದಾಗಿ 2009ರಲ್ಲಿ ದಂಪತಿ ವಿಚ್ಛೇದನ ಪಡೆದುಕೊಂಡರು.
ಜನವರಿ 29ರಿಂದ ಬೆಂಗಳೂರು ಚಲನಚಿತ್ರೋತ್ಸವ; ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ
2010ರ ಆಗಸ್ಟ್ 24ರಂದು ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ಪ್ರಕಾಶ್ ರಾಜ್ ಎರಡನೇ ವಿವಾಹವಾದರು. ಈ ದಂಪತಿಗೆ 2015ರಲ್ಲಿ ವೇದಾಂತ್ ಎಂಬ ಪುತ್ರ ಜನಿಸಿದನು. ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ ತಮ್ಮ ವೃತ್ತಿಜೀವನ ಮತ್ತು ಕುಟುಂಬದ ಜವಾಬ್ದಾರಿಯನ್ನು ಸರಿದೂಗಿಸುತ್ತಾ ಪ್ರಕಾಶ್ ರಾಜ್ ಅವರಿಗೆ ಈಗ ತಾಯಿಯ ಅಗಲಿಕೆ ಆಗಾಧವಾದ ನೋವು ನೀಡಿದೆ.
ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸ್ವರ್ಣಲತಾ ಅವರಿಗೆ ಪ್ರಕಾಶ್ ರಾಜ್ ಸೇರಿ ಮೂವರು ಮಕ್ಕಳು. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಪ್ರಕಾಶ್ ರಾಜ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ ಎಂದರೆ ಅದರ ಹಿಂದೆ ಅವರ ತಾಯಿ ಸ್ವರ್ಣಲತಾ ಅವರ ಶ್ರಮ ಹಾಗೂ ತ್ಯಾಗ ಅಪಾರವಾಗಿದೆ.
ಪ್ರಕಾಶ್ ರಾಜ್ ತಾಯಿ ನಿಧನಕ್ಕೆ ಸಂತಾಪ
I was deeply saddened to hear the news of the passing of Suvarna Latha ji , mother of prominent actor Sri,Prakash Raj. I pray for her soul to rest in peace. I extend my heartfelt condolences to Prakash Raj and his family members during this difficult time. 🙏 @prakashraaj
— Vishnu Vardhan Reddy (@SVishnuReddy) March 30, 2026
ತಾಯಿಯ ಮರೆಗುಳಿತನದ ಬಗ್ಗೆ ಮಾತನಾಡಿದ್ದ ಪ್ರಕಾಶ್
ಕೆಲ ವರ್ಷಗಳ ಹಿಂದೆ ಮರೆಗುಳಿತನ ಕುರಿತಾದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್, "ನನ್ನ ಜೀವನದಲ್ಲೂ ಇಂತಹುದೇ ಘಟನೆ ನನ್ನ ತಾಯಿಯ ವಿಷಯದಲ್ಲಿ ನಡೆದಿತ್ತು. ಅವರಿಗೆ ಆಲ್ಝೈಮರ್ ಇರಲಿಲ್ಲ, ಆದರೆ ಮೆದುಳಿನಲ್ಲಿ ಸಣ್ಣ ಗಡ್ಡೆಯಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ಮೂರು ದಿನಗಳ ನಂತರ ಅವರು ತಮ್ಮ ಸಹೋದರಿ ಮತ್ತು ಮಗನನ್ನೇ ಮರೆತುಬಿಟ್ಟಿದ್ದರು. ನನ್ನ ತಾಯಿ ಎಲ್ಲವನ್ನೂ ಮರೆಯುತ್ತಿದ್ದಾರೆ ಎಂಬ ಆಲೋಚನೆಯೇ ನನ್ನಲ್ಲಿ ನಡುಕ ಹುಟ್ಟಿಸಿತ್ತು. ನಂತರ ಅವರ ಹಳೆಯ ಶಾಲಾ ಸ್ನೇಹಿತರನ್ನು ಕರೆಸಿ ಅವರೊಂದಿಗೆ ಮಾತನಾಡಿಸುತ್ತಿದ್ದೆ" ಎಂದು ಹೇಳಿಕೊಂಡಿದ್ದರು.