ನಟ ವಿಜಯ್ ಸಹೋದರಿ ವಿದ್ಯಾ ಸಾವನ್ನಪ್ಪಿದ್ದು ಹೇಗೆ? ʻದಳಪತಿʼ ಬದುಕನ್ನೇ ಬದಲಿಸಿತು ತಂಗಿಯ ನಿಧನ!
ತಮಿಳುನಾಡು ಸಿಎಂ ಆಗಲು ಸಜ್ಜಾಗಿರುವ ನಟ ವಿಜಯ್ ಅವರ ಯಶಸ್ಸಿನ ಹಿಂದೆ ಮರೆಯಲಾಗದ ನೋವಿನ ಕಥೆಯಿದೆ. 1984ರಲ್ಲಿ ತಮ್ಮ ಮುದ್ದಿನ ತಂಗಿ ವಿದ್ಯಾ ಅವರನ್ನು ಅಕಾಲಿಕವಾಗಿ ಕಳೆದುಕೊಂಡ ವಿಜಯ್, ಅತ್ಯಂತ ಚಟುವಟಿಕೆಯ ಹುಡುಗನಿಂದ ಮೌನಿಯಾಗಿ, ಅಂತರ್ಮುಖಿಯಾಗಿ ಬದಲಾದರು.
-
ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. ಅವರ ನೇತೃತ್ವದ ಟಿವಿಕೆ ಪಕ್ಷವು ಭರ್ಜರಿ ಗೆಲುವು ಸಾಧಿಸಿದ್ದು, ಇನ್ನೇನು ವಿಜಯ್ ಮುಖ್ಯಮಂತ್ರಿ ಆಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಸದ್ಯ ತಮಿಳುನಾಡಿನಾದ್ಯಂತ ಜನರ ಹೃದಯದಲ್ಲಿ ವಿಜಯ್ ನೆಲೆಸಿದ್ದಾರೆ. ಇದೀಗ ವಿಜಯ್ ಹೆಸರು ಟ್ರೆಂಡ್ ಅಗುತ್ತಿದ್ದಂತೆಯೇ ಅಭಿಮಾನಿಗಳು ಅವರ ಕುಟುಂಬದ ಬಗ್ಗೆ, ವಿಶೇಷವಾಗಿ ವಿಜಯ್ ಅವರ ತಂಗಿಯ ಬಗ್ಗೆ ತಿಳಿಯಲು ಆಸಕ್ತಿ ತೋರಿಸುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ನಿಧನರಾದ ವಿಜಯ್ ಸಹೋದರಿ
ನಟ ವಿಜಯ್ ಅವರಿಗೆ ವಿದ್ಯಾ ಎಂಬ ತಂಗಿ ಇದ್ದರು. ಆದರೆ, ಅವರು ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಹೌದು, 1984ರ ಮೇ ತಿಂಗಳಲ್ಲಿ ಹಠಾತ್ ಅನಾರೋಗ್ಯದಿಂದ ಅತೀ ಚಿಕ್ಕ ವಯಸ್ಸಿನಲ್ಲೇ ವಿದ್ಯಾ ಮೃತಪಟ್ಟರು. ವಿಜಯ್ ಅವರ ತಂದೆ ಎಸ್. ಎ. ಚಂದ್ರಶೇಖರ್ ಅವರು 'ಎನಕ್ಕುಳ್ ನಾನೇ ನೀಧಿಪತಿ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಗ ಈ ದುರಂತ ಸಂಭವಿಸಿತ್ತು. ವಿದ್ಯಾ ಅವರು ವಿಜಯ್ ಅವರ ಕೈಯಲ್ಲೇ ಕೊನೆಯುಸಿರೆಳೆದರು ಎಂದು ಅನೇಕ ವರದಿಗಳು ಹೇಳುತ್ತವೆ, ಇದು ವಿಜಯ್ ಅವರಿಗೆ ದೊಡ್ಡ ಆಘಾತವನ್ನು ನೀಡಿತ್ತು.
TVK: ಮೊದಲ ಸಿನಿಮಾದಲ್ಲೇ ನಟ ವಿಜಯ್ ಭವಿಷ್ಯ ನಿರ್ಧಾರವಾಗಿತ್ತಾ? ʻದಳಪತಿʼ ಲೆಕ್ಕಾಚಾರದ ಮುಂದೆ ಎಲ್ಲವೂ ಉಲ್ಟಾಪಲ್ಟಾ!
ವಿಜಯ್ ಮನಸ್ಸಿನ ಮೇಲೆ ಭಾರಿ ಪರಿಣಾಮ
ತಂಗಿಯನ್ನು ಕಳೆದುಕೊಳ್ಳುವ ಮೊದಲು, ವಿಜಯ್ ಅತ್ಯಂತ ಚಟುವಟಿಕೆಯಿಂದ ಕೂಡಿದ್ದ, ಹೆಚ್ಚು ಮಾತನಾಡುವ ಮತ್ತು ತುಂಟ ಮಗುವಾಗಿದ್ದರು. ವಿದ್ಯಾ ಅವರ ಮರಣದ ನಂತರ ಅವರು ಬಹಳ ಮೌನಿಯಾಗಿ ಮತ್ತು ಅಂತರ್ಮುಖಿಯಾಗಿ ಬದಲಾದರು. ತಂಗಿಯ ಅಗಲಿಕೆಯಿಂದ ವಿಜಯ್ ತೀವ್ರ ಮನೋವೇದನೆಗೆ ಒಳಗಾಗಿ ಕೆಲಕಾಲ ಖಿನ್ನತೆಗೆ ಜಾರಿದ್ದರು ಎಂದು ಅವರ ತಾಯಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
TVK Vijay: ಜನರಿಗೆ ಮೋಸ ಮಾಡುವುದೇ ಡಿಎಂಕೆ ಕೆಲಸ; ಪುದುಚೇರಿಯಲ್ಲಿ ವಿಜಯ್ ವಾಗ್ದಾಳಿ
ವಿಜಯ್ ಮಗಳ ಹೆಸರಿನಲ್ಲಿ ತಂಗಿ ನೆನಪು
ಶಾಲೆಯಿಂದ ಬಂದ ನಂತರ ತಂಗಿಯ ಜೊತೆಗೇ ವಿಜಯ್ ಹೆಚ್ಚಿನ ಸಮಯ ಕಳೆಯುತ್ತಿದ್ದರು, ಅವಳಿಗೆ ಸ್ನಾನ ಮಾಡಿಸುವುದು ಮತ್ತು ಊಟ ಮಾಡಿಸುವುದನ್ನು ಕೂಡ ವಿಜಯ್ ಅವರೇ ನೋಡಿಕೊಳ್ಳುತ್ತಿದ್ದರು ಎಂದು ಕುಟುಂಬಸ್ಥರು ನೆನಪಿಸಿಕೊಳ್ಳುತ್ತಾರೆ. ತಂಗಿಯ ಸಾವು ವಿಜಯ್ ಅವರ ಜೀವನದ ಮೇಲೆ ತೀವ್ರ ಪ್ರಭಾವ ಬೀರಿತು. ಸಹೋದರಿಯ ನೆನಪಿಗಾಗಿ ವಿಜಯ್ ತಮ್ಮ ಮಗಳಿಗೆ 'ದಿವ್ಯಾ' ಎಂದು ಹೆಸರಿಟ್ಟಿದ್ದಾರೆ ಮತ್ತು ತಮ್ಮ ಪ್ರೊಡಕ್ಷನ್ ಹೌಸ್‌ಗೆ 'ವಿದ್ಯಾ-ವಿಜಯ್ ಪ್ರೊಡಕ್ಷನ್ಸ್' ಎಂದು ನಾಮಕರಣ ಮಾಡಿದ್ದಾರೆ. ದಳಪತಿ ವಿಜಯ್ ಅವರ ಬಳಿ '0277' ಸಂಖ್ಯೆಯ ಎಂಬ ವಿಶೇಷ ಕಾರು ಇದೆ. ಈ ಸಂಖ್ಯೆಯು ಅವರ ತಂಗಿ ವಿದ್ಯಾ ಚಂದ್ರಶೇಖರ್ ಜನ್ಮದಿನಾಂಕವನ್ನು (14-02-77) ಸೂಚಿಸುತ್ತದೆ.
ಅಂದಹಾಗೆ, ವಿಜಯ್ ಸಹೋದರಿಯ ಸಾವಿಗೆ ಕಾರಣವಾದ ಆ ಕಾಯಿಲೆ ಏನು ಎಂಬುದು ಈವರೆಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಕೆಲವು ಮೂಲಗಳು ರಕ್ತ ಕ್ಯಾನ್ಸರ್‌ನಿಂದ ಸಾವು ಸಂಭವಿಸಿತು ಎಂದು ಕೂಡ ಹೇಳುತ್ತವೆ.