ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಮದುವೆ ಆಗ್ತಿನಿʼ ಅಂತ್ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ್ರಾ ನಟಿ ಅಶು ರೆಡ್ಡಿ? ತಮ್ಮ ಮೇಲಿನ ಆರೋಪಕ್ಕೆ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಹೇಳಿದ್ದೇನು?

ತೆಲುಗು ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಅಶು ರೆಡ್ಡಿ ವಿರುದ್ಧ ಹೈದರಾಬಾದ್‌ನ ಸಿಸಿಎಸ್ ಪೊಲೀಸರಿಗೆ ವಂಚನೆಯ ದೂರು ಸಲ್ಲಿಕೆಯಾಗಿದೆ ಎಂದು ವರದಿ ಆಗಿದೆ. ಲಂಡನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಧರ್ಮೇಂದ್ರ ಎಂಬುವವರನ್ನು ಮದುವೆಯಾಗುವುದಾಗಿ ನಂಬಿಸಿ ಸುಮಾರು 9.35 ಕೋಟಿ ರೂಪಾಯಿ ನಗದು, 5 ಕೆಜಿ ಚಿನ್ನ ಹಾಗೂ ಆಸ್ತಿಗಳನ್ನು ಅಶು ರೆಡ್ಡಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆಯಂತೆ.

ಕೋಟ್ಯಂತರ ರೂಪಾಯಿ ವಂಚನೆ ಆರೋಪ; ನಟಿ ಅಶು ರೆಡ್ಡಿ ಹೇಳಿದ್ದೇನು?

-

Avinash GR
Avinash GR Apr 26, 2026 5:19 PM

ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಅಶು ರೆಡ್ಡಿ ವಿರುದ್ಧ ದೂರು ದಾಖಲಾಗಿದೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಲಂಡನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ತೆಲಂಗಾಣದ ಯುವಕನಿಗೆ ಮದುವೆಯಾಗುವುದಾಗಿ ನಂಬಿಸಿ, ಸುಮಾರು 9.35 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಅಶು ರೆಡ್ಡಿ ಮೇಲೆ ಕೇಳಿಬಂದಿದೆ. ಈ ಸಂಬಂಧ ಅಶು ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹೈದರಾಬಾದ್‌ನ ಸಿಟಿ ಸೆಂಟ್ರಲ್ ಕ್ರೈಮ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ ಎಂಬ ಮಾಹಿತಿ ಇದೆ.

ಏನಿದು ಘಟನೆ?

ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಯೆನುಮುಲ ಸತ್ಯನಾರಾಯಣ ಅವರ ಪುತ್ರ ವೈ. ವಿ. ಧರ್ಮೇಂದ್ರ ಲಂಡನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. 8 ವರ್ಷಗಳ ಭಾರತಕ್ಕೆ ಬಂದಿದ್ದ ಸಮಯದಲ್ಲಿ ಅಶು ರೆಡ್ಡಿ ಅಲಿಯಾಸ್ ವೆಂಕಟ ಅಶ್ವಿನಿ ರೆಡ್ಡಿ ಕೊಯ್ಯ ಅವರ ಪರಿಚಯ ಧರ್ಮೇಂದ್ರಗೆ ಆಗಿದೆ. ತಾನು ಅಮೆರಿಕಾದಲ್ಲಿ ಓದು ಮುಗಿಸಿ ಸಿನಿಮಾ ಅವಕಾಶಗಳಿಗಾಗಿ ಹೈದರಾಬಾದ್‌ಗೆ ಬಂದಿರುವುದಾಗಿ ಹೇಳಿ ಧರ್ಮೇಂದ್ರ ಅವರೊಂದಿಗೆ ಸ್ನೇಹ ಬೆಳೆಸಿದ್ದರಂತೆ ಅಶು ರೆಡ್ಡಿ. ನಂತರ ಈ ಸ್ನೇಹವು ಪ್ರೇಮಕ್ಕೆ ತಿರುಗಿದೆ. ಆನಂತರ ಅಶು ರೆಡ್ಡಿ ಮದುವೆ ಆಗುತ್ತೇನೆ ಎಂದು ನಂಬಿಸಿ ಹಲವು ಬಾರಿ ಹಣ ಪಡೆದಿದ್ದಾರೆ ಎಂದು ಧರ್ಮೇಂದ್ರ ಅವರು ಕುಟುಂಬಸ್ಥರು ಆರೋಪಿಸಿದ್ದಾರೆ.

Shilpa Shetty: ಉದ್ಯಮಿಗೆ 60 ಕೋಟಿ ರೂಪಾಯಿ ವಂಚನೆ; ನಟಿ ಶಿಲ್ಪಾ ಶೆಟ್ಟಿ ದಂಪತಿಯ ವಿರುದ್ಧ ಪ್ರಕರಣ ದಾಖಲು

ಧರ್ಮೇಂದ್ರ ನೀಡಿದ ದುಡ್ಡಿನಿಂದಲೇ ಅಶು ರೆಡ್ಡಿ ಕಾರು, ಬಂಗಾರ ಮತ್ತು ಹಲವು ಆಸ್ತಿಗಳನ್ನು ಖರೀದಿಸಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮದುವೆ ನಿಶ್ಚಯ ಮಾಡುವುದಾಗಿ ಹೇಳಿ ಅಶು ರೆಡ್ಡಿ ಕುಟುಂಬದವರು ಪುರೋಹಿತರನ್ನು ಕರೆಸಿ ಸಿದ್ಧತೆ ನಡೆಸಿದ್ದರು. ಆದರೆ ನಂತರ ಮದುವೆಯನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ ಎಂದು ಧರ್ಮೇಂದ್ರ ಅವರ ತಂದೆ ಸತ್ಯನಾರಾಯಣ ತಿಳಿಸಿದ್ದಾರೆ.

2018 ರಿಂದ 2025 ರವರೆಗೆ ತಮ್ಮ ಮಗನಿಂದ ಅಶು ರೆಡ್ಡಿ ಸುಮಾರು 9.35 ಕೋಟಿ ರೂ. ನಗದು, ಸುಮಾರು 5 ಕೆಜಿ ಚಿನ್ನ, ಫ್ಲ್ಯಾಟ್‌ಗಳು ಮತ್ತು ವಾಹನಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆಯಂತೆ. ಈ ಬಗ್ಗೆ ಹೈದರಾಬಾದ್ ಸಿಸಿಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಆರೋಪಕ್ಕೆ ಖಡಕ್‌ ಪ್ರತಿಕ್ರಿಯೆ ನೀಡಿದ ಅಶು ರೆಡ್ಡಿ

ಆದರೆ, ತಮ್ಮ ಮೇಲಿನ ಆರೋಪಗಳಿಗೆ ಅಶು ರೆಡ್ಡಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಎಲ್ಲಿಯೂ ಪ್ರಕರಣದ ಬಗ್ಗೆ ನೇರವಾಗಿ ಪ್ರಸ್ತಾಪಿಸದೆ ಎಚ್ಚರಿಕೆ ನೀಡಿದ್ದಾರೆ. "ನನ್ನ ಅನುಮತಿಯಿಲ್ಲದೆ ನನ್ನ ಬಗ್ಗೆ ಸುಳ್ಳು ಮಾಹಿತಿ ಪ್ರಚಾರ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಜೂನಿಯರ್ ಸಮಂತಾ ಎಂದೇ ಪರಿಚಿತರಾಗಿರುವ ಅಶು ರೆಡ್ಡಿ, ಡಬ್‌ಸ್ಮ್ಯಾಶ್ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. 2018ರಲ್ಲಿ ತೆರೆಕಂಡ 'ಚಲ್ ಮೋಹನ್ ರಂಗ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಿಗ್ ಬಾಸ್ ತೆಲುಗು ಸೀಸನ್ 3ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಮನೆಮಾತಾಗಿದ್ದ ಅಶು ರೆಡ್ಡಿ, ನಂತರ ಬಿಗ್ ಬಾಸ್ ಒಟಿಟಿಯಲ್ಲೂ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ.