ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡ ನಟಿ ಶರ್ಮಿಳಾ ಮಾಂಡ್ರೆ: ಜೈಪುರದಲ್ಲಿ ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ಅದ್ಧೂರಿ ಕಲ್ಯಾಣ

ಕನ್ನಡ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ತಮಿಳಿನ ಹೆಸರಾಂತ 'ಪ್ಯಾಷನ್ ಸ್ಟುಡಿಯೋಸ್' ಮಾಲೀಕ, ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಜೈಪುರದ ಐತಿಹಾಸಿಕ ಸಮೋಡೆ ಪ್ಯಾಲೇಸ್‌ನಲ್ಲಿ ಜುಲೈ 12ರಂದು ದಕ್ಷಿಣ ಭಾರತದ ವೈದಿಕ ಆಚರಣೆಗಳ ಪ್ರಕಾರ ಇವರ ವಿವಾಹ ಮಹೋತ್ಸವ ಜರುಗಿದೆ.

ಜೈಪುರದಲ್ಲಿ ಅದ್ದೂರಿಯಾಗಿ ನಡೆಯಿತು ನಟಿ ಶರ್ಮಿಳಾ ಮಾಂಡ್ರೆ ಮದುವೆ

-

Avinash GR
Avinash GR Jul 13, 2026 6:09 PM

ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ರಾಜಸ್ಥಾನದ ಜೈಪುರದಲ್ಲಿರುವ ಐತಿಹಾಸಿಕ ಸಮೋಡೆ ಪ್ಯಾಲೇಸ್‌ನಲ್ಲಿ ಶರ್ಮಿಳಾ ಅವರ ವಿವಾಹ ಮಹೋತ್ಸವ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ನಟಿ ರಮ್ಯಾ, ಧನ್ಯಾ ರಾಮ್‌ಕುಮಾರ್ ಅವರು ಈ ಮದುವೆಗೆ ಹಾಜರಾಗಿದ್ದರು. ಈ ನವಜೋಡಿಯ ಮದುವೆಯ ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಶರ್ಮಿಳಾಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಜೈಪುರದಲ್ಲಿ ಜರುಗಿದ ರಾಜವೈಭವಿ ಮದುವೆ

ನಟಿ ಶರ್ಮಿಳಾ ಮಾಂಡ್ರೆ ಅವರು ತಮ್ಮ ಮದುವೆ ಕಾರ್ಯಕ್ರಮಗಳಿಗಾಗಿ ಜುಲೈ 9ರ ಗುರುವಾರವೇ ಕುಟುಂಬಸ್ಥರೊಂದಿಗೆ ಜೈಪುರ ತಲುಪಿದ್ದರು. ಜುಲೈ 11ರಂದು ಸಾಂಪ್ರದಾಯಿಕ ಹಳದಿ, ಮೆಹಂದಿ ಹಾಗೂ ಸಂಗೀತ ಸಮಾರಂಭಗಳು ಅತ್ಯಂತ ವೈಭವದಿಂದ ಜರುಗಿದವು. ಈ ಮದುವೆಯ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಪ್ರಮುಖ ಗಣ್ಯರು ಸಾಕ್ಷಿಯಾಗಿದ್ದಾರೆ.

ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಶರ್ಮಿಳಾ ಮಾಂಡ್ರೆ; ಇಲ್ಲಿವೆ ಈ ಜೋಡಿಯ ಎಂಗೇಜ್‌ಮೆಂಟ್‌ ಫೋಟೋಗಳು

ಜುಲೈ 12 ರ ಭಾನುವಾರದಂದು ಮುಂಜಾನೆ ದಕ್ಷಿಣ ಭಾರತದ ವೈದಿಕ ಆಚರಣೆಗಳ ಪ್ರಕಾರ ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಸುಂದರಂ ಅವರ ಕಲ್ಯಾಣ ಮಹೋತ್ಸವ ನೆರವೇರಿತು. ಅದೇ ದಿನ ಸಂಜೆ ಸಿನಿಮಾ ತಾರೆಯರ ಉಪಸ್ಥಿತಿಯಲ್ಲಿ ಭವ್ಯ ರಿಸೆಪ್ಷನ್ ಕಾರ್ಯಕ್ರಮವೂ ಜರುಗಿದೆ. ರಾಜಸ್ಥಾನದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ದಕ್ಷಿಣ ಭಾರತದ ಸಾಂಪ್ರದಾಯಿಕ ಆಚರಣೆಗಳ ಸಮ್ಮಿಲನದಂತಿದ್ದ ಈ ವಿವಾಹವು ಈ ವರ್ಷದ ಅತ್ಯಂತ ವೈಭವಯುತ ಸೆಲೆಬ್ರಿಟಿ ವೆಡ್ಡಿಂಗ್‌ಗಳಲ್ಲಿ ಒಂದಾಗಿದೆ.

ಜೂನ್‌ 25ರಂದು ನಡೆದಿತ್ತು ನಿಶ್ಚಿತಾರ್ಥ

ಮದುವೆಗೂ ಮುನ್ನ, ಜೂನ್ 25ರಂದು ಬೆಂಗಳೂರಿನ ತಾರಾ ಹೋಟೆಲ್‌ನಲ್ಲಿ ಉಭಯ ಕುಟುಂಬಗಳ ಸಮ್ಮತಿಯೊಂದಿಗೆ ಶರ್ಮಿಳಾ ಹಾಗೂ ಸುಧನ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಸರಳವಾಗಿ ನಡೆದಿತ್ತು. ಕೇವಲ ಆಪ್ತರು ಮಾತ್ರ ಭಾಗವಹಿಸಿದ್ದ ಈ ಸಮಾರಂಭದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಈ ಜೋಡಿಯು ಉಂಗುರ ಬದಲಾಯಿಸಿಕೊಂಡಿತ್ತು. ಮದುವೆಗಾಗಿ ಜೈಪುರಕ್ಕೆ ತೆರಳುವ ಮುನ್ನ ಬೆಂಗಳೂರಿನ ಶರ್ಮಿಳಾ ನಿವಾಸದಲ್ಲೂ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು.

ಮದುವೆಯ ಪ್ರಸ್ತಾಪದ ಕುರಿತು ಈ ಹಿಂದೆ ಮಾತನಾಡಿದ್ದ ಶರ್ಮಿಳಾ, "ಸುಧನ್ ಅವರು ತಮಗೆ ಮಾಡಿದ ಪ್ರಪೋಸಲ್ ಯಾವುದೇ ಸಿನಿಮಾ ಶೈಲಿಯಲ್ಲಿ ಇರದೆ ಅತ್ಯಂತ ಸರಳ ಮತ್ತು ಹೃದಯಸ್ಪರ್ಶಿಯಾಗಿತ್ತು. ಅವರ ವಿನಮ್ರತೆ ಮತ್ತು ಸರಳ ವ್ಯಕ್ತಿತ್ವವೇ ನನ್ನ ಮನಸ್ಸನ್ನು ಗೆದ್ದಿತು. ನಮ್ಮ ನಡುವಿನ ಗಟ್ಟಿಯಾದ ಸ್ನೇಹವೇ ಈ ಸುಂದರ ಸಂಬಂಧಕ್ಕೆ ಬುನಾದಿಯಾಗಿದೆ" ಎಂದು ಹೇಳಿಕೊಂಡಿದ್ದರು.

ನಿರ್ಮಾಪಕ ಸುಧನ್ ಸುಂದರಂ ಯಾರು?

ಶರ್ಮಿಳಾ ಮಾಂಡ್ರೆ ಅವರ ಕೈಹಿಡಿದಿರುವ ಸುಧನ್ ಸುಂದರಂ ಅವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆಯಾದ 'ಪ್ಯಾಷನ್ ಸ್ಟುಡಿಯೋಸ್' ಮಾಲೀಕರಾಗಿರುವ ಇವರು, ಇತ್ತೀಚೆಗೆ ವಿಜಯ್ ಸೇತುಪತಿ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ 'ಮಹಾರಾಜ' ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ 'ಪಾರ್ಕಿಂಗ್' ಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.

ಹಸೆಮಣೆ ಏರಲು ಶರ್ಮಿಳಾ ಮಾಂಡ್ರೆ ಸಜ್ಜು; ತಮಿಳು ನಿರ್ಮಾಪಕನ ಜತೆ ʼನವಗ್ರಹʼ ನಟಿ ಕಲ್ಯಾಣ?

ಶರ್ಮಿಳಾ ಮಾಂಡ್ರೆ ಕರಿಯರ್‌ ಹೇಗಿದೆ?

2007ರಲ್ಲಿ ತೆರೆಕಂಡ ಕನ್ನಡದ 'ಸಜನಿ' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಶರ್ಮಿಳಾ ಮಾಂಡ್ರೆ, ನಂತರ 'ಕೃಷ್ಣ', 'ನವಗ್ರಹ', 'ಗಾಳಿಪಟ 2' ಮತ್ತು ಇತ್ತೀಚಿನ ಬಹುನಿರೀಕ್ಷಿತ 'ದಿ ಡೆವಿಲ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು ಸಿನಿಮಾಗಳಲ್ಲೂ ಗುರುತಿಸಿಕೊಂಡಿರುವ ಅವರು ಪ್ರಸ್ತುತ ತಮಿಳಿನ ‘ಅದೃಷ್ಟಶಾಲಿ’ ಹಾಗೂ ಕನ್ನಡದ ‘ದಸರಾ’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ನಟನೆ ಮಾತ್ರವಲ್ಲದೆ ತಮಿಳಿನಲ್ಲಿ 4 ಚಿತ್ರಗಳನ್ನು ನಿರ್ಮಿಸಿ ಯಶಸ್ವಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶರ್ಮಿಳಾ, ಕನ್ನಡದ 'ದಸರಾ' ಮತ್ತು ತಮಿಳಿನ 'ಕಾದಲ್ ಕೊಂಜಂ ತೂಕಲಾ' ಚಿತ್ರಗಳಿಗೆ ಸಹ-ನಿರ್ಮಾಪಕಿಯಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ.