ಶ್ರೀಮುರಳಿ ನಟನೆಯ ‘ಪರಾಕ್’ ಚಿತ್ರದ ಟೀಸರ್ ರಿಲೀಸ್; ಹೊಸಬರ ಡಿಫರೆಂಟ್ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ʻರೋರಿಂಗ್ ಸ್ಟಾರ್ʼ
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ, ಹಾಲೇಶ್ ಕೋಗುಂಡಿ ಚೊಚ್ಚಲ ನಿರ್ದೇಶನದ ‘ಪರಾಕ್’ ಚಿತ್ರದ ಖಡಕ್ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮೂರೂವರೆ ವರ್ಷಗಳ ಕಥೆಯ ಶ್ರಮ ಹಾಗೂ ಭಾರಿ ಪೂರ್ವಸಿದ್ಧತೆಯೊಂದಿಗೆ ಮೂಡಿಬರುತ್ತಿರುವ ಈ ಆ್ಯಕ್ಷನ್ ಚಿತ್ರದಲ್ಲಿ ಶ್ರೀಮುರಳಿ ಸಿಕ್ಸ್ ಪ್ಯಾಕ್ ಅವತಾರದಲ್ಲಿ ಅಬ್ಬರಿಸಿದ್ದಾರೆ.
-
‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪರಾಕ್’ ಸಿನಿಮಾದ ಅಫಿಷಿಯಲ್ ಟೀಸರ್ ಬಿಡುಗಡೆಯಾಗಿದೆ. ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಯುವ ನಿರ್ದೇಶಕ ಹಾಲೇಶ್ ಕೋಗುಂಡಿ ಮತ್ತು ಉತ್ಸಾಹಿ ತಂಡ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಟೀಸರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ಚಿತ್ರತಂಡವು ಅದ್ಧೂರಿಯಾಗಿ ಟೀಸರ್ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹಾಲೇಶ್ ಕೋಗುಂಡಿ, "ಇದು ಕೇವಲ ಜಸ್ಟ್ ಟೀಸರ್ ಅಷ್ಟೇ. ಸಿನಿಮಾದಲ್ಲಿ ಇನ್ನು ಸಾಕಷ್ಟು ರೋಮಾಂಚನಕಾರಿ ವಿಷಯಗಳನ್ನು ಹೇಳಿದ್ದೇವೆ. ಶ್ರೀಮುರಳಿ ಸರ್ ಅವರಂತಹ ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದು ಅತ್ಯಂತ ಖುಷಿ ಕೊಟ್ಟಿದೆ" ಎಂದು ತಮ್ಮ ಅನುಭವ ಹಂಚಿಕೊಂಡರು.
Sri Murali Parak Movie: ಸೆಟ್ಟೇರಿತು ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಸಿನಿಮಾ ಪರಾಕ್!
ಖುಷಿ ಹಂಚಿಕೊಂಡ ಶ್ರೀಮುರಳಿ
ಬಳಿಕ ಮಾತನಾಡಿದ ನಾಯಕ ನಟ ಶ್ರೀಮುರಳಿ, "ಪರಾಕ್ ಟೀಸರ್ ನೋಡಿದರೆ ಇದು ಸುಲಭವಾಗಿ ಆದ ಕೆಲಸ ಅಲ್ಲ ಎಂಬುದು ಅರ್ಥವಾಗುತ್ತದೆ. ಇದರ ಹಿಂದೆ ಇಡೀ ತಂಡದ ಶ್ರಮವಿದೆ. ಕಥೆಗಾಗಿ ಮೂರೂವರೆ ವರ್ಷ ಸಮಯ ಕೊಟ್ಟಿದ್ದು, ಇದನ್ನು ಚಿತ್ರೀಕರಿಸಲು ಎರಡೂವರೆ ವರ್ಷಗಳ ಕಾಲ ಸಾಕಷ್ಟು ಮೀಟಿಂಗ್‌ಗಳನ್ನು ಮಾಡಿದ್ದೇವೆ" ಎಂದರು.
ಹಠ ಮತ್ತು ಕಾಳಜಿ ನಮ್ಮದಾಗಿದೆ
ಹೊಸಬರೊಂದಿಗೆ ಕೆಲಸ ಮಾಡುವ ಕುರಿತು ಮಾತನಾಡುತ್ತಾ, "ಹೊಸಬರು ಮತ್ತು ಅವರ ವಿಶಿಷ್ಟ ಆಲೋಚನೆಗಳನ್ನು ನಾನು ತುಂಬಾ ನಂಬುತ್ತೇನೆ, ಇಷ್ಟಪಡುತ್ತೇನೆ. ಅವರ ಜೊತೆ ಕೆಲಸ ಮಾಡುವುದೇ ನನಗೊಂದು ಕಿಕ್ ನೀಡುತ್ತದೆ. ಪರಾಕ್ ಚಿತ್ರವನ್ನು ಒಂದು ಅದ್ಭುತ ಪ್ರಯತ್ನವಾಗಿ ಪ್ರೇಕ್ಷಕರಿಗೆ ತಲುಪಿಸಬೇಕು ಎಂಬ ಹಠ ಮತ್ತು ಕಾಳಜಿ ನಮ್ಮದಾಗಿದೆ. ಈ ಹೊಸ ತಂಡ ನಮ್ಮ ಚಿತ್ರರಂಗದ ಆಸ್ತಿ" ಎಂದು ಶ್ರೀಮುರಳಿ ತಂಡವನ್ನು ಶ್ಲಾಘಿಸಿದರು.
ಚರಣ್ ರಾಜ್ ಸಂಗೀತ ಹೈಲೈಟ್
ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಶ್ರೀಮುರಳಿ ಅವರು ರಗಡ್ ಆಗಿ ಸಿಕ್ಸ್ ಪ್ಯಾಕ್ ಗೆಟಪ್‌ನಲ್ಲಿ ಅಬ್ಬರಿಸಿದ್ದು, ಮಾಸ್ ಆಕ್ಷನ್ ಸನ್ನಿವೇಶಗಳು ಹೈಲೈಟ್ ಆಗಿವೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಎಂ.ಆರ್ ಸಂಗೀತ ನಿರ್ದೇಶನ ಹಾಗೂ ಸಂದೀಪ್ ವಲ್ಲೂರಿ ಛಾಯಾಗ್ರಹಣವಿದೆ.
ರಕ್ಷಿತ್ ಕಾಪ್ ಸಂಕಲನ ಜವಾಬ್ದಾರಿ ಹೊತ್ತಿದ್ದು, ಹೆಸರಾಂತ ಫೈಟ್ ಮಾಸ್ಟರ್ ಡಾ. ಕೆ. ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮಂಜುನಾಥ್ ಟಿ, ಮೋಹನ್ ಕೆ. ಓ. ಮತ್ತು ಹಾಲೇಶ್ ಕೋಗುಂಡಿ ಜಂಟಿಯಾಗಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಚಿತ್ರದ ಶೇಕಡಾ 35ರಷ್ಟು ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬಾಕಿ ಶೂಟಿಂಗ್ ಶೀಘ್ರದಲ್ಲೇ ಮುಂದುವರಿಯಲಿದೆ.