ʻನನಗೆ ಮದುವೆಯಾಗಿ ನಾಲ್ಕು ಮಕ್ಕಳಿವೆ..ʼ; ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಟಿ ತ್ರಿಷಾ ಕೃಷ್ಣನ್ ಮಸ್ತ್ ಕೌಂಟರ್!
Trisha Krishnan Marriage: ನಟಿ ತ್ರಿಷಾ ಕೃಷ್ಣನ್ ತಮ್ಮ ಮದುವೆ ಮತ್ತು ಚಿತ್ರರಂಗದಿಂದ ನಿವೃತ್ತಿಯಾಗುವ ಸುಳ್ಳು ಸುದ್ದಿಗಳ ವಿರುದ್ಧ ಗುಡುಗಿದ್ದಾರೆ. "ನನಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ, ನಿಮ್ಮ ಕಲ್ಪನೆಗೆ ಈ ಉತ್ತರ ಸಾಕೇ?" ಎಂದು ವ್ಯಂಗ್ಯವಾಗಿ ಪ್ರಶ್ನಿಸುವ ಮೂಲಕ ವದಂತಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದಾರೆ.
-
ನಟಿ ತ್ರಿಷಾ ಕೃಷ್ಣನ್ ಅವರು ಕಳೆದ ಕೆಲವು ದಿನಗಳಿಂದ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಈಚೆಗೆ ಒಂದು ವಿವಾಹ ಸಮಾರಂಭಕ್ಕೆ ನಟ ವಿಜಯ್ ಅವರ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಇದರ ನಡುವೆ ಅವರು ಸಿನಿಮಾರಂಗಕ್ಕೆ ವಿದಾಯ ಹೇಳುತ್ತಿದ್ದಾರೆ ಎಂಬ ವದಂತಿಯಂತು ಜೋರಾಗಿ ಹಬ್ಬಿದೆ. ಇದೀಗ ಇಂತಹ ಗಾಸಿಪ್‌ಗಳಿಗೆ ತಮ್ಮದೇ ಶೈಲಿಯಲ್ಲಿ ತ್ರಿಷಾ ಕೌಂಟರ್ ಕೊಟ್ಟಿದ್ದಾರೆ.
ತ್ರಿಷಾ ಬಗ್ಗೆ ಹಬ್ಬಿದ್ದ ಲೇಟೆಸ್ಟ್ ವದಂತಿ ಏನು?
ತ್ರಿಷಾ ಅವರು ಇನ್ನುಮುಂದೆ ಸಿನಿಮಾಗಳಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ. ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಸದ್ಯ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ನಟಿಸುತ್ತಿರುವ ‘ವಿಶ್ವಂಭರ’ ಮತ್ತು ಸೂರ್ಯ ಜೊತೆಗಿನ ʻಕರುಪ್ಪುʼ ಸಿನಿಮಾಗಳು ತೆರೆಕಂಡ ಬಳಿಕ ಚಿತ್ರರಂಗಕ್ಕೆ ತ್ರಿಷಾ ಗುಡ್ ಬೈ ಹೇಳಲಿದ್ದಾರೆ. ಇನ್ನು, ನಟ, ಟಿವಿಕೆ ಮುಖ್ಯಸ್ಥ ವಿಜಯ್ ಜೊತೆಗೆ ತ್ರಿಷಾ ರಿಲೇಶನ್‌ಶಿಪ್‌ನಲ್ಲಿದ್ದಾರೆ, ಅದಕ್ಕಾಗಿಯೇ ವೃತ್ತಿಜೀವನಕ್ಕೆ ವಿದಾಯ ಹೇಳಲು ತ್ರಿಷಾ ಬಯಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು.
ಖಡಕ್ ಕೌಂಟರ್ ನೀಡಿದ ತ್ರಿಷಾ
ಇದೀಗ ಇಂತಹ ತಲೆಬುಡವಿಲ್ಲದ ವದಂತಿಗಳಿಗೆ ಕೌಂಟರ್ ಕೊಟ್ಟಿರುವ ತ್ರಿಷಾ, "ಹೌದು.. ನಾನು ಸಿನಿಮಾಗಳನ್ನು ಬಿಟ್ಟುಬಿಟ್ಟಿದ್ದೇನೆ. ಒಬ್ಬ ದೊಡ್ಡ ಉದ್ಯಮಿಯನ್ನು ಮದುವೆಯಾಗಿ, ಈಗಾಗಲೇ ನಾಲ್ಕು ಮಕ್ಕಳನ್ನು ಕೂಡ ಪಡೆದಿದ್ದೇನೆ. ನಿಮ್ಮ ಕಲ್ಪನೆಗಳಿಗೆ ಈ ಉತ್ತರ ಸಾಕೇ? ಅಥವಾ ಇಂದು ನೀವು ಸುದ್ದಿ ಬರೆಯಲು ಇನ್ನು ಯಾವುದಾದರೂ ಮಸಾಲೆಯುಕ್ತ ವಿಷಯವನ್ನು ಸೇರಿಸಬೇಕೆ" ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಈ ಮೂಲಕ ಸಿನಿಮಾರಂಗಕ್ಕೆ ಗುಡ್ ಬೈ ಹೇಳುವುದೆಲ್ಲಾ ಕಟ್ಟುಕಥೆ ಎಂಬುದು ಸ್ಪಷ್ಟವಾಗಿದೆ.
ಈ ಹಿಂದೆಯೂ ಕೆಲವು ಪೋಸ್ಟ್ ಹಂಚಿಕೊಂಡಿದ್ದ ತ್ರಿಷಾ
ಕೆಲವೇ ದಿನಗಳ ಹಿಂದೆ, ಪ್ರೀತಿ, ಶಾಂತಿ ಮತ್ತು ಸ್ವಾಭಿಮಾನದ ಕುರಿತು ತ್ರಿಷಾ ಹಂಚಿಕೊಂಡಿದ್ದ ಕೆಲವು ಪೋಸ್ಟ್‌ಗಳು ಭಾರಿ ಚರ್ಚೆಗೆ ಕಾರಣವಾಗಿದ್ದವು. "ನಾನು ಈಗ ಜೀವನದ ಯಾವ ಹಂತದಲ್ಲಿದ್ದೇನೆಂದರೆ, ಇಲ್ಲಿ ನಾನು ಯಾರೊಂದಿಗೂ ವಾದ ಮಾಡುವುದಿಲ್ಲ. ಒಂದು ವೇಳೆ ನೀವು 'ಆನೆ ಹಾರಬಲ್ಲದು' ಎಂದು ಹೇಳಿದರೂ ಸಹ, 'ಹೌದು, ನೀವು ಹೇಳುತ್ತಿರುವುದು ನೂರಕ್ಕೆ ನೂರು ಸರಿ' ಎನ್ನುತ್ತೇನೆ. ಅದು ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದಲ್ಲ, ಬದಲಾಗಿ ನಿಮ್ಮನ್ನು ಒಪ್ಪಿಸುವಷ್ಟು ಆಸಕ್ತಿ ನನಗಿಲ್ಲ ಎಂದರ್ಥ" ಎಂದು ಬರೆದುಕೊಂಡಿದ್ದರು.
ತ್ರಿಷಾ ಹಂಚಿಕೊಂಡಿರುವ ಪೋಸ್ಟ್
Trisha's latest Instagram story 😶 #Trisha pic.twitter.com/LMGgp3BzN9
— BINGED (@Binged_) April 7, 2026
"ನಾನು ಒಂದು ಪ್ರಮುಖ ವಿಷಯವನ್ನು ಕಲಿತಿದ್ದೇನೆ, ಸರಿಯಾಗಿ ಇರುವುದಕ್ಕಿಂತ ಶಾಂತಿಯಿಂದಿರುವುದು ಹೆಚ್ಚು ಮೌಲ್ಯಯುತವಾದುದು. ವಿವರಣೆ ನೀಡುವುದಕ್ಕಿಂತ ಮೌನವಾಗಿರುವುದು ಸುಲಭ, ಮತ್ತು ನಿಮ್ಮ ಶಕ್ತಿಯನ್ನು ವ್ಯಯಿಸಲು ಪ್ರತಿಯೊಬ್ಬರೂ ಅರ್ಹರಲ್ಲ. ಕೆಲವು ವಾದಗಳು ಕೇವಲ ತಪ್ಪು ತಿಳುವಳಿಕೆಯಲ್ಲ, ಅವು ನಮ್ಮ ಶಕ್ತಿಯನ್ನು ಕುಂದಿಸಲು ಬರುವ ಆಹ್ವಾನಗಳಿದ್ದಂತೆ. ಆದ್ದರಿಂದ ನಾನು ಅಂತಹ ವಾದಗಳನ್ನು ತಿರಸ್ಕರಿಸುತ್ತೇನೆ, ಮುಗುಳ್ನಗುತ್ತೇನೆ, ನನ್ನ ಶಾಂತಿಯನ್ನು ಕಾಪಾಡಿಕೊಳ್ಳುತ್ತೇನೆ" ಎಂದು ಮತ್ತೊಂದು ಪೋಸ್ಟ್‌ನಲ್ಲಿ ತ್ರಿಷಾ ಬರೆದುಕೊಂಡಿದ್ದರು.