Renukaswamy Case: ʻಬಾಸ್ʼ ಸಿನಿಮಾ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದ ನಟ ದರ್ಶನ್; ಸಿಟಿ ಸಿವಿಲ್ ಕೋರ್ಟ್ ಹೇಳಿದ್ದೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎನ್ನಲಾದ ನಟ ತನುಷ್ ಶಿವಣ್ಣ ಅಭಿನಯದ ‘ಬಾಸ್’ ಸಿನಿಮಾ ಬಿಡುಗಡೆಗೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ಗೌರವಕ್ಕೆ ಧಕ್ಕೆ ಮತ್ತು ವಿಚಾರಣೆಗೆ ಅಡ್ಡಿಯಾಗಲಿದೆ ಎಂದು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ದಾವೆಯನ್ನು ಪುರಸ್ಕರಿಸಿದ ಕೋರ್ಟ್ ಈ ಆದೇಶ ನೀಡಿದೆ.
-
ಸ್ಯಾಂಡಲ್‌ವುಡ್ ನಟ ತನುಷ್ ಶಿವಣ್ಣ ಅಭಿನಯದ ʻಬಾಸ್ʼ ಸಿನಿಮಾವು ಆರಂಭದಿಂದಲೂ ಸದ್ದು ಮಾಡುತ್ತಲೇ ಇದೆ. ಇದು ನಟ ದರ್ಶನ್ ತೂಗುದೀಪ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆಧಾರಿತ ಸಿನಿಮಾ ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬಂದಿದ್ದವು. ಆದರೆ ಚಿತ್ರತಂಡದ ಅದನ್ನು ಅಲ್ಲಗಳೆದಿತ್ತು. ಸದ್ಯ ತೆರೆಗೆ ಸಜ್ಜಾಗಿದ್ದ ಈ ಚಿತ್ರಕ್ಕೀಗ ನಟ ದರ್ಶನ್ ಅವರ ಕುಟುಂಬದ ಶಾಕ್ ಸಿಕ್ಕಿದೆ. 'ಬಾಸ್' ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದ ದರ್ಶನ್
ʻಬಾಸ್ʼ ಸಿನಿಮಾವನ್ನು ರಿಲೀಸ್ ಮಾಡದಂತೆ ಅದರ ನಿರ್ಮಾಪಕರು, ನಿರ್ದೇಶಕರು, ವಿತರಕರು ಮತ್ತು ಪ್ರದರ್ಶಕರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಲ್ಲಿಸಿದ್ದ ಮೂಲ ದಾವೆ ವಿಚಾರಣೆ ನಡೆಸಿದ ನಗರದ 16ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿದೆ.
ನ್ಯಾಯಾಲಯ ನೀಡಿದ ನಿರ್ದೇಶನವೇನು?
ನಗರದ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಧರಿಸಿದ ಅಥವಾ ದಾವೆದಾರರ ಜೀವನ ಉಲ್ಲೇಖಿಸುವಂತಹ ಅಥವಾ ಅವರ ಜೀವನಕ್ಕೆ ಸಂಬಂಧಿಸಿದ, ಅವರ ಕುಟುಂಬ ಮತ್ತು ಗೌರವಕ್ಕೆ ತೇಜೋವಧೆ ಉಂಟು ಮಾಡುವಂತಹ ವಿವಾದಿತ ಬಾಸ್ ಚಿತ್ರವನ್ನು ಚಿತ್ರಮಂದಿರ ಅಥವಾ ಒಟಿಟಿ ಮೂಲಕ ಬಿಡುಗಡೆ ಮಾಡಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ನಂತರ ಬಾಸ್ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಸಮನ್ಸ್ ಜಾರಿಗೊಳಿಸಿ ದಾವೆಯ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತು.
Kannada New Movie: ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ತನುಷ್ ಶಿವಣ್ಣ ಅಭಿನಯದ ʼಬಾಸ್ʼ ಚಿತ್ರದ ಮುಹೂರ್ತ
ಏ.14ರಂದು ಬಿಡುಗಡೆ ಆಗಬೇಕಿದ್ದ ʻಬಾಸ್ʼ
ತನುಷ್ ಶಿವಣ್ಣ, ಪಾಯಲ್ ಚೆಂಗಪ್ಪ ನಟನೆಯ ʻಬಾಸ್ʼ ಚಿತ್ರವು ಏ.14 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿತ್ತು. "ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ. ಚಿತ್ರ ಬಿಡುಗಡೆಯಾದರೆ ತಮ್ಮ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಲಿದೆ. ಮೇಲಾಗಿ ಪ್ರಕರಣಕ್ಕೆ ಸಂಬಂಧಿಸಿದ ಸೆಷನ್ಸ್ ನ್ಯಾಯಾಯದಲ್ಲಿ ವಿಚಾರಣೆಗೆ ಅಡ್ಡಿ ಉಂಟಾಗಲಿದೆ. ಇದರಿಂದ ಬಾಸ್ ಚಿತ್ರವನ್ನು ಬಿಡುಗಡೆ ಮಾಡದಂತೆ ಆದೇಶಿಸಬೇಕು" ಎಂದು ಕೋರಿ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದಾರೆ.
ಬಾಸ್ ಸಿನಿಮಾ ಡೈರೆಕ್ಟರ್ ಹೇಳಿದ್ದೇನು?
ಈ ಹಿಂದೆಯೇ ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದ ಬಾಸ್ ಸಿನಿಮಾ ನಿರ್ದೇಶಕ ಲವ, "ನಾನು ವಕೀಲ, ನನಗೆ ಈ ಬೆದರಿಕೆ ಕರೆಗಳು ಹೊಸದೇನಲ್ಲ. ಅಲ್ಲದೆ, ಇನ್ನು ಟ್ರಯಲ್‌ನಲ್ಲಿ ಕೇಸ್ ಬಗ್ಗೆ ಸಿನಿಮಾ ಮಾಡಬಾರದು ಅನ್ನೋದು ನನಗೂ ಗೊತ್ತು. ಆ ಥರ ಮಾಡಿದರೆ, ಅದು ನ್ಯಾಯಾಂಗ ನಿಂದನೆಯೂ ಆಗುತ್ತದೆ. ನಮ್ಮ ಸಿನಿಮಾವನ್ನು ನೋಡಿ ಮಾತನಾಡಲಿ. ನಾವು ಅನೇಕ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಿದ್ದೇವೆ. ಇದು ದರ್ಶನ್ ಅವರ ಕೇಸ್‌ಗೆ ಸಂಬಂಧಿಸಿದ ಸಿನಿಮಾ ಅಲ್ಲ. ಇದು ಯಾವುದೇ ಗಿಮಿಕ್ ಅಲ್ಲ. ಮಾತನಾಡಿಕೊಳ್ಳುವವರಿಗೆ ನಾವು ಉತ್ತರ ಕೋಡೋದಿಲ್ಲ" ಎಂದು ಹೇಳಿದ್ದರು.