ಕಳೆದ ವಾರ ʻಅಖಂಡ 2ʼ, ಈ ವಾರ ʻವಾ ವಾಥಿಯಾರ್ʼ; ಛೇ, ಸ್ಟಾರ್ ನಟರ ಸಿನಿಮಾಗಳಿಗೆ ಇದೆಂಥಾ ಅಗ್ನಿಪರೀಕ್ಷೆ? ಹುಸಿಯಾಗುತ್ತಿದೆ ಫ್ಯಾನ್ಸ್ ನಿರೀಕ್ಷೆ!
Vaa Vaathiyaar Movie: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು ಪೋಸ್ಟ್‌ಪೋನ್ ಆಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಳೆದ ವಾರ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಚಿತ್ರದ ಬಿಡುಗಡೆ ತಡೆಯಾಜ್ಞೆ ನೀಡಿತ್ತು. ಇದೀಗ ಕಾರ್ತಿ ನಟನೆಯ 'ವಾ ವಾಥಿಯಾರ್' ಚಿತ್ರದ ಬಿಡುಗಡೆಗೂ ತಡೆಬಿದ್ದಿದೆ.
-
ಈಚೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಡೆದ ಎರಡು ಘಟನೆಗಳು ಅಚ್ಚರಿಯನ್ನು ಉಂಟು ಮಾಡಿವೆ. ಇನ್ನೇನು ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇವೆ ಎಂದಾಗ, ಸಿನಿಮಾಗಳ ಪೋಸ್ಟ್‌ಪೋನ್ ಆಗಿದೆ. ಅದು ಕೂಡ ದೊಡ್ಡ ದೊಡ್ಡ ಕಲಾವಿದರ ಬಿಗ್ ಬಜೆಟ್ ಸಿನಿಮಾಗಳು ಎಂಬುದು ಅಚ್ಚರಿಯ ವಿಚಾರ. ಕಳೆದ ವಾರ ನಂದಮೂರಿ ಬಾಲಕೃಷ್ಣ ಅವರ ʻಅಖಂಡ 2ʼ ಚಿತ್ರಕ್ಕೆ ಈ ಸಮಸ್ಯೆ ಎದುರಾಗಿದ್ದರೆ, ಈ ವಾರ ತಮಿಳಿನ ಕಾರ್ತಿ ನಟನೆಯ ʻವಾ ವಾಥಿಯಾರ್ʼ ಚಿತ್ರಕ್ಕೆ ಈ ಸಮಸ್ಯೆ ಎದುರಾಗಿದೆ. ಅಷ್ಟಕ್ಕೂ ಆಗಿದ್ದೇನು? ಮುಂದೆ ಓದಿ.
ಅಖಂಡ 2 ಚಿತ್ರಕ್ಕೆ ವಿಘ್ನ ಎದುರಾಗಿತ್ತು
ಬಾಲಯ್ಯ ನಟನೆಯ ʻಅಖಂಡ 2ʼ ಸಿನಿಮಾವು ಡಿಸೆಂಬರ್ 5ರಂದು ರಿಲೀಸ್ ಆಗಬೇಕಿತ್ತು. ಆದರೆ ಆ ಚಿತ್ರದ ನಿರ್ಮಾಪಕರಾದ 14 ರೀಲ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಈ ಹಿಂದೆ ಒಂದು ಹಣಕಾಸಿನ ವ್ಯವಹಾರಗಳನ್ನು ಬಾಕಿ ಉಳಿಸಿಕೊಂಡಿತ್ತು. ಆಗಾಗಿ ಅವರ ವಿರುದ್ಧ ನಿರ್ಮಾಣ ಸಂಸ್ಥೆಯೊಂದು ಕೋರ್ಟ್‌ವರೆಗೆ ಹೋಗಿತ್ತು. ಅಲ್ಲಿ 14 ರೀಲ್ಸ್ ಸಂಸ್ಥೆಯು ಬಾಕಿ ಹಣವನ್ನು (ಬಡ್ಡಿ ಸೇರಿ ಸುಮಾರು ₹28 ಕೋಟಿ ಎಂದು ವರದಿಯಾಗಿದೆ) ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಆದರೆ ಆನಂತರ ಮದ್ರಾಸ್ ಹೈಕೋರ್ಟ್ ಮೂಲಕ ಡಿಸೆಂಬರ್ 5 ರಂದು ಬಿಡುಗಡೆಯಾಗಬೇಕಿದ್ದ 'ಅಖಂಡ 2' ಚಿತ್ರದ ಬಿಡುಗಡೆ, ವಿತರಣೆ ಮತ್ತು ವಾಣಿಜ್ಯ ಪ್ರದರ್ಶನವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಈ ತಡೆಯಾಜ್ಞೆಯಿಂದಾಗಿ, ಬಿಡುಗಡೆಗೆ ಕೇವಲ ಕೆಲವೇ ಗಂಟೆಗಳ ಮೊದಲು 'ಅಖಂಡ 2' ಚಿತ್ರವು ಡಿಸೆಂಬರ್ 5 ರಂದು ಬಿಡುಗಡೆ ಆಗಲಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಈ ಹಣಕಾಸಿನ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಬಗೆಹರಿಸಲಾಗಿದ್ದು, ಮದ್ರಾಸ್ ಹೈಕೋರ್ಟ್ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಹಾಗಾಗಿ, ಆ ಚಿತ್ರವು ಡಿಸೆಂಬರ್ 12 ಬಿಡುಗಡೆಯಾಗುವ ಸಾಧ್ಯತೆ ಇದೆ.
ಈಗ ಕಾರ್ತಿ ಸಿನಿಮಾದ ಸರದಿ!
ಹೌದು, ಕಾರ್ತಿ ನಟನೆಯ 'ವಾ ವಾಥಿಯಾರ್' (Vaa Vaathiyaar) ಚಿತ್ರದ ಬಿಡುಗಡೆಯು ಕೂಡ ನಿರ್ಮಾಪಕರ ಹಳೆಯ ಸಾಲವನ್ನು ತೀರಿಸದ ಕಾರಣದಿಂದಾಗಿ ತಡೆಹಿಡಿಯಲ್ಪಟ್ಟಿದೆ. 'ವಾ ವಾಥಿಯಾರ್' ಚಿತ್ರದ ನಿರ್ಮಾಪಕ ಜ್ಞಾನವೇಲ್ ರಾಜಾ ಅವರು ಅರ್ಜುನ್‌ಲಾಲ್ ಸುಂದರ್‌ದಾಸ್ ಅವರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ತೀರಿಸದ ಕಾರಣ ಬಿಡುಗಡೆಗೆ ತಡೆಬಿದ್ದಿದೆ. ಮೂಲಗಳ ಪ್ರಕಾರ, ಜ್ಞಾನವೇಲ್ ರಾಜಾ ಅವರ ಸ್ಟುಡಿಯೋ ಗ್ರೀನ್ ಸಂಸ್ಥೆಯು 2014 ರಲ್ಲಿ ಅರ್ಜುನ್‌ಲಾಲ್ ಅವರಿಂದ 10.35 ಕೋಟಿ ರೂ. ಸಾಲ ಪಡೆದಿತ್ತು. ಇದೀಗ ಅದು ಬಡ್ಡಿ ಸಮೇತ, 21.78 ಕೋಟಿ ರೂ.ಗಳಿಗೆ ಏರಿದೆಯಂತೆ. ಸದ್ಯ ಈ ಬಾಕಿ ಹಣವನ್ನು ತೀರಿಸುವವರೆಗೆ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಾಗಾಗಿ, 'ವಾ ವಾಥಿಯಾರ್' ಸಿನಿಮಾವು ಯಾವಾಗ ರಿಲೀಸ್ ಆಗಲಿದೆ ಎಂಬುದು ಸ್ವತಃ ನಿರ್ಮಾಪಕರಿಗೇ ಗೊತ್ತಿಲ್ಲ!
ದೊಡ್ಡ ಸಿನಿಮಾಗಳಿಗೆ ಹೀಗಾದರೆ ಹೇಗೆ?
ಹೌದು, 14 ರೀಲ್ಸ್, ಸ್ಟುಡಿಯೋ ಗ್ರೀನ್ ಸಂಸ್ಥೆಗಳು ಈ ಹಿಂದೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿವೆ. ಬಿಗ್ ಬಜೆಟ್ ಸಿನಿಂಆಗಳನ್ನು ನಿರ್ಮಾಣ ಮಾಡಿವೆ. ಹೀಗಿರುವಾಗ ಇಂತಹ ನಿರ್ಮಾಪಕರ ಸಿನಿಮಾಗಳು ಮತ್ತು ಸ್ಟಾರ್ ನಟರು ಅಭಿನಯಿಸಿರುವ ಸಿನಿಮಾಗಳು ಹೀಗೆ ಕೊನೇ ಕ್ಷಣದಲ್ಲಿ ರಿಲೀಸ್ ಮುಂದೂಡಿದಾಗ ಫ್ಯಾನ್ಸ್‌ಗೆ ನಿರಾಸೆ ಆಗುತ್ತಿದೆ. ವಿತರಕರಿಗೂ ಇದು ದೊಡ್ಡ ಹೊಡೆತ. ಇನ್ನಾದರೂ ನಿರ್ಮಾಪಕರು ಬಿಡುಗಡೆಗೂ ಮುನ್ನ ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿ.