ರೆಡಿಮೇಡ್ ದೋಸೆ ಹಿಟ್ಟು ತಿಂದು ಇಬ್ಬರು ಮಕ್ಕಳು ಸಾವು; ಪೋಷಕರ ಸ್ಥಿತಿ ಚಿಂತಾಜನಕ!
ಗುಜರಾತ್‌ನ ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ದಂಪತಿಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಹಾರ ಇಲಾಖೆಯು ಮಾದರಿಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದೆ.
ಮೃತ ದುರ್ದೈವಿಗಳು -
ಗಾಂಧಿನಗರ: ಅಹಮದಾಬಾದ್ (Ahmedabad) ನಗರದ ಹೋಟೆಲ್‌ಗಳಲ್ಲಿ ಕಲಬೆರಕೆ ಆಹಾರದ ಬಗ್ಗೆ ಸರಣಿ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಗುಜರಾತ್ (Gujarat)ನ ಅಹಮದಾಬಾದ್‌ನ ಚಾಂದ್‌ಖೇಡಾ (chandkheda) ಪ್ರದೇಶದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಮಾರುಕಟ್ಟೆಯಿಂದ ತಂದಿದ್ದ ರೆಡಿಮೇಡ್ ದೋಸೆ ಹಿಟ್ಟಿ (Readymade Dosa Powder) ನಿಂದ ತಯಾರಿಸಿದ ಆಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಕಂದಮ್ಮಗಳು ಸಾವನ್ನಪ್ಪಿದ್ದು, ದಂಪತಿಗಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಏನಿದು ಪ್ರಕರಣ?
ಚಾಂದ್‌ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ಎಂಬ ದಂಪತಿಗಳು ಸ್ಥಳೀಯ 'ಘನಶ್ಯಾಮ್ ಡೈರಿ'ಯಿಂದ ದೋಸೆ ಹಿಟ್ಟನ್ನು ಖರೀದಿಸಿ ತಂದಿದ್ದರು. ಈ ಹಿಟ್ಟಿನಿಂದ ತಯಾರಿಸಿದ ದೋಸೆಯನ್ನು ಸೇವಿಸಿದ ಇಡೀ ಕುಟುಂಬಕ್ಕೆ ತೀವ್ರವಾಗಿ ವಾಂತಿ-ಭೇದಿಯಾಗಿ ಅದು 'ಫುಡ್ ಪಾಯ್ಸನ್' (ವಿಷಾಹಾರ) ಆಗಿ ಪರಿಣಮಿಸಿದೆ. ಈ ದುರಂತದಲ್ಲಿ ಮೂರು ತಿಂಗಳ ಹಸುಗೂಸು ರಾಹಾ ಮತ್ತು ನಾಲ್ಕು ವರ್ಷದ ಬಾಲಕಿ ಮಿಶ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿ ಭಾವನಾ ಮತ್ತು ತಂದೆ ವಿಮಲ್ ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸ್ತನ್ಯಪಾನದ ಮೂಲಕ ಮಗುವಿಗೆ ಹರಡಿದೆಯೇ ವಿಷ?
ಸಾಮಾನ್ಯವಾಗಿ ಮೂರು ತಿಂಗಳ ಶಿಶುವಿಗೆ ದೋಸೆಯಂತಹ ಘನ ಆಹಾರವನ್ನು ನೀಡುವುದಿಲ್ಲ. ಹಾಗಿದ್ದರೂ ಆ ಮಗು ಸಾವನ್ನಪ್ಪಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ತಾಯಿ ಭಾವನಾ ಅವರು ದೋಸೆ ಸೇವಿಸಿ ವಿಷಾಹಾರದ ಸಮಸ್ಯೆಗೆ ತುತ್ತಾದ ನಂತರ, ಅದೇ ಸ್ಥಿತಿಯಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸಿರಬಹುದು. ಇದರಿಂದ ವಿಷದ ಅಂಶವು ಹಾಲಿನ ಮೂಲಕ ಮಗುವಿನ ದೇಹ ಸೇರಿ ಪ್ರಾಣಹಾನಿಯಾಗಿರಬಹುದು ಎಂಬ ಸಂಶಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
Assault Case: ಮಠದಿಂದ ಎಳೆದೊಯ್ದು ದಲಿತ ಸ್ವಾಮೀಜಿ ಮೇಲೆ ಮಾರಕ ಹಲ್ಲೆ; ಆರೋಪ ಏನು?
ಡೈರಿ ಮಾಲೀಕನ ಸಮರ್ಥನೆ
ವಿಮಲ್ ಅವರ ತಂದೆ ಗೌರಿಶಂಕರ್ ಪ್ರಜಾಪತಿ ಅವರು ಘನಶ್ಯಾಮ್ ಡೈರಿಯ ವಿರುದ್ಧ ಗಂಭೀರ ಆರೋಪ ಮಾಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಡೈರಿ ಮಾಲೀಕ ಕೇತನ್ ಪಟೇಲ್, "ನಾವು ದಿನಕ್ಕೆ ನೂರಾರು ಕೆಜಿ ಹಿಟ್ಟು ಮಾರಾಟ ಮಾಡುತ್ತೇವೆ. ಅದೇ ಬ್ಯಾಚ್‌ನ ಹಿಟ್ಟನ್ನು ಅನೇಕ ಗ್ರಾಹಕರು ಬಳಸಿದ್ದಾರೆ, ಯಾರಿಗೂ ತೊಂದರೆಯಾಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆ ಕುಟುಂಬದ ಮೊದಲು ಮತ್ತು ನಂತರ ಹಿಟ್ಟು ತಂದವರು ಸುರಕ್ಷಿತವಾಗಿದ್ದಾರೆ," ಎಂದು ವಾದಿಸಿದ್ದಾರೆ.
ತನಿಖೆ ಚುರುಕು
ಚಾಂದ್‌ಖೇಡಾ ಪೊಲೀಸರು ಮತ್ತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನ ಆಹಾರ ಇಲಾಖೆ ಅಧಿಕಾರಿಗಳು ಈಗಾಗಲೇ ಡೈರಿಗೆ ಭೇಟಿ ನೀಡಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಸಾವುಗಳಿಗೆ ನಿಖರ ಕಾರಣ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಕಲಬೆರಕೆಯೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬುದು ಸ್ಪಷ್ಟವಾಗಲಿದೆ. ಈ ಘಟನೆಯು ಸಾರ್ವಜನಿಕರಲ್ಲಿ ರೆಡಿಮೇಡ್ ಆಹಾರ ಪದಾರ್ಥಗಳ ಬಳಕೆಯ ಬಗ್ಗೆ ಆತಂಕ ಮೂಡಿಸಿದೆ.