ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಈಯಮ್ಮ ವಿಲನ್‌ ಆಂಟಿ, ಡುಮ್ಮಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆʼ; ʻಬಿಗ್‌ ಬಾಸ್ʼ‌ ಶೋನಿಂದ ಒಂದೇ ವಾರಕ್ಕೆ ಹೊರಬಂದ ನಟಿ ಪ್ರಥಮಾ ಪ್ರಸಾದ್‌ ಖಡಕ್‌ ರಿಯಾಕ್ಷನ್

ನಟಿ ಪ್ರಥಮಾ ಪ್ರಸಾದ್‌ ಅವರು ಬಿಗ್‌ ಬಾಸ್‌ ರಿಯಾಲಿಟಿ ಶೋನ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವ ಬಾಡಿ ಶೇಮಿಂಗ್ ಹಾಗೂ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ. ಟಿವಿ ಸಂಚಿಕೆಗಳಲ್ಲಿ ಕೇವಲ ಜಗಳವನ್ನಷ್ಟೇ ತೋರಿಸಿ, ತಮ್ಮ ಮಾನವೀಯ ಕಾಳಜಿಯನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಗಟ್ಟಿದನಿಯ ಮಹಿಳೆಯರ ಆತ್ಮಗೌರವವನ್ನು ಸಮಾಜ ದುರಹಂಕಾರವೆಂದು ತಪ್ಪಾಗಿ ಗ್ರಹಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ʻಬಿಗ್ ಬಾಸ್‌ʼ ಶೋನಿಂದ ಹೊರಬರುತ್ತಿದ್ದಂತೆಯೇ ನಟಿ ಪ್ರಥಮಾ ಪ್ರಸಾದ್ ಆಕ್ರೋಶ!

-

Avinash GR
Avinash GR Sep 15, 2026 9:00 PM

‘ಬಿಗ್ ಬಾಸ್’ ಮನೆಯಿಂದ ಮೊದಲ ವಾರದಲ್ಲೇ ಹೊರಬಿದ್ದಿರುವ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ನಟಿ ಪ್ರಥಮಾ ಪ್ರಸಾದ್ ಎಲಿಮಿನೇಷನ್ ನಂತರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕನಿಷ್ಠ ಎರಡು ತಿಂಗಳ ಕಾಲ ಮನೆಯಲ್ಲಿದ್ದು ಉತ್ತಮ ಆಟ ಪ್ರದರ್ಶಿಸಬೇಕು ಎಂಬ ಗುರಿಯೊಂದಿಗೆ ಹೋದ ನನಗೆ ಈ ದಿಢೀರ್ ನಿರ್ಗಮನ ಅನಿರೀಕ್ಷಿತ ಎಂದಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಕಟು ಟೀಕೆಗಳು, ಟ್ರೋಲ್‌ಗಳು ಹಾಗೂ ಬಾಡಿ ಶೇಮಿಂಗ್‌ಗೆ ನೇರ ಮತ್ತು ದಿಟ್ಟ ಉತ್ತರ ನೀಡಿದ್ದಾರೆ. ಬಿಗ್ ಬಾಸ್ ಮನೆಯೊಳಗಿನ ಯುದ್ಧಕ್ಕಿಂತ ಮುಂಚಿತವಾಗಿ ಫ್ಲೈಟ್‌ನಲ್ಲೇ ವಾರ್ ಶುರುವಾಗಿತ್ತು ಎಂದಿರುವ ಅವರು, ಕೇವಲ ಒಂದೇ ವಾರದಲ್ಲಿ ಇಡೀ ಪ್ರಪಂಚವನ್ನೇ ಸುತ್ತಿ ಬಂದ ಅನುಭವವಾಯಿತು ಎಂದು ಹೇಳಿಕೊಂಡಿದ್ದಾರೆ.

ವಿನಯಾ ಪ್ರಸಾದ್ ಪುತ್ರಿ ಎಂಬುದು ನನಗೆ ಹೆಮ್ಮೆ

ತಮ್ಮ ತಾಯಿಯ ಹೆಸರನ್ನು ಬಳಸಿಕೊಂಡು ತಾನು ಬೆಳೆಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಪ್ರಥಮಾ, ವಿನಯಾ ಪ್ರಸಾದ್ ಅವರ ಪುತ್ರಿ ಎಂಬುದು ನನ್ನ ಹೆಮ್ಮೆ ಮತ್ತು ಅಸ್ಮಿತೆಯಾದರೂ, ವೃತ್ತಿಬದುಕಿನಲ್ಲಿ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯ ಮೂಲಕವೇ ಇಲ್ಲಿಯವರೆಗೆ ಬಂದಿದ್ದೇನೆ ಎಂದಿದ್ದಾರೆ. ಯಾವುದೇ ಪೂರ್ವಗ್ರಹವಿಲ್ಲದೆ, ಅಹಂ ಇಲ್ಲದೆ ಸ್ನೇಹಪರತೆಯಿಂದ ಎಲ್ಲರೊಂದಿಗೆ ಬೆರೆಯಲು ಮನೆ ಪ್ರವೇಶಿಸಿದ್ದೆ. ಆದರೆ ಅದೇ ಸ್ನೇಹಪರತೆ ತಮಗೆ ಪೂರಕವೂ ಆಯಿತು, ಮಾರಕವೂ ಆಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

‌ಇರಿಟೇಟಿಂಗ್ ಆಂಟಿ ಎಂದು ಕರೆಯುತ್ತಿದ್ದಾರೆ

"ನನಗೂ ಶಾಸ್ತ್ರಿ ಅವರಿಗೂ ನಡೆದ ವಾಗ್ವಾದವಷ್ಟೇ ಟಿವಿಯಲ್ಲಿ ಪ್ರಮುಖವಾಗಿ ಬಿಂಬಿತವಾಯಿತು. ಆದರೆ ಅವರಿಗೆ ಹುಷಾರಿಲ್ಲದಿದ್ದಾಗ ನಾನು ತೋರಿದ ಕಾಳಜಿ, ಊಟ ಬಡಿಸಿದ್ದು, ಜ್ವರ ಪರೀಕ್ಷಿಸಿದ್ದು ಹಾಗೂ ಮಾನವೀಯತೆಯಿಂದ ಉಪಚರಿಸಿದ ಅಂಶಗಳು ಮುಖ್ಯ ಸಂಚಿಕೆಗಳಲ್ಲಿ ಪ್ರಸಾರವಾಗಲೇ ಇಲ್ಲ. ಇದು 24/7 ಲೈವ್‌ನಲ್ಲಿ ಮಾತ್ರ ಬಂದಿದ್ದರಿಂದ ಹೆಚ್ಚಿನ ಜನ ಗಮನಿಸಿಲ್ಲ. ಹಾಗಾಗಿ ಬರೀ ನಕಾರಾತ್ಮಕ ಅಂಶಗಳನ್ನೇ ಹಿಡಿದುಕೊಂಡು ನನ್ನನ್ನು ವಿಲನ್, ಆಂಟಿ, ಇರಿಟೇಟಿಂಗ್ ಆಂಟಿ ಎಂದು ಕರೆಯುತ್ತಿದ್ದಾರೆ" ಎಂದು ಪ್ರಥಮಾ ಪ್ರಸಾದ್ ಬೇಸರ ಹೊರಹಾಕಿದ್ದಾರೆ.

Bigg Boss Kannada 13: ‘ಬಿಗ್‌ ಬಾಸ್‌ ಅಗ್ನಿಪರೀಕ್ಷೆಗೆ’ ಸೆಲೆಕ್ಟ್‌ ಆದವರು ಇವರೇ; ಕನಸುಗಳಿಗೆ ಇಲ್ಲಿ age limit ಇಲ್ಲಪ್ಪೋ!

ಸಮಾಜದಲ್ಲಿ ಗಟ್ಟಿದನಿಯ, ಸ್ಪಷ್ಟ ನಿಲುವುಳ್ಳ ಪ್ರಬಲ ಮಹಿಳೆಯರನ್ನು ಒಪ್ಪಿಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ಜನರಿಗೆ ಕಷ್ಟ ಎಂದು ಹೇಳಿರುವ ಅವರು, ತಮ್ಮ ಆತ್ಮಗೌರವವನ್ನು ಕಾಪಾಡಿಕೊಳ್ಳುವುದನ್ನು ‘ದುರಹಂಕಾರ’ ಎಂದು ಕರೆಯುವವರ ಮನಸ್ಥಿತಿಯನ್ನೇ ಇದು ತೋರಿಸುತ್ತದೆ ಎಂದಿದ್ದಾರೆ. ತನ್ನನ್ನು ಪ್ರೀತಿಸುವ ಲಕ್ಷಾಂತರ ಜನರ ನಡುವೆ ದ್ವೇಷಿಸುವ ಕೆಲವರು ‘ಸಾಮಾನ್ಯ ಹಿನ್ನೆಲೆಯಿಂದ ಬಂದವರ ಮೇಲೆ ಕಿರುಚಾಡುವ ದುರಹಂಕಾರಿ’ ಎಂದು ಬಿಂಬಿಸಿರಬಹುದು ಎಂದು ಅವರು ಹೇಳಿದ್ದಾರೆ.

ಸಹಾನುಭೂತಿ ಗಿಟ್ಟಿಸಿಕೊಳ್ಳುವುದು ಇಷ್ಟವಿಲ್ಲ

ತಮ್ಮ ಜೀವನದಲ್ಲಿ ಎದುರಿಸಿದ ಬಾಡಿ ಶೇಮಿಂಗ್ ಕುರಿತು ಆಕ್ರೋಶ ಹೊರಹಾಕಿದ ಪ್ರಥಮಾ, ಹಿಂದೆ ತಮ್ಮ ಸಹೋದ್ಯೋಗಿಯೊಬ್ಬರು ಬಾಡಿ ಶೇಮಿಂಗ್‌ಗೆ ತುತ್ತಾಗಿ, ನಾಯಕಿಯಾಗುವ ಹಠದಲ್ಲಿ ಮಾಡಿಸಿಕೊಂಡ ಚಿಕಿತ್ಸೆ ವಿಕೋಪಕ್ಕೆ ಹೋಗಿ ಪ್ರಾಣ ಕಳೆದುಕೊಂಡ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಪ್ರಥಮಾ ಪ್ರಸಾದ್‌ ಸಂದರ್ಶನ



"ತಾಯಿಯ ಜೊತೆ ಹೋಲಿಸಿ ನನ್ನನ್ನು ಡ್ರಮ್, ಡುಮ್ಮಿ, ಅಜ್ಜಿ ಎಂದೆಲ್ಲ ಕರೆಯುತ್ತಾರೆ. ಆದರೆ ಕೇವಲ ದೇಹದ ಆಕಾರವನ್ನು ನೋಡಿ ವ್ಯಕ್ತಿಯ ಸಾಮರ್ಥ್ಯವನ್ನು ಅಳೆಯುವುದು ತಪ್ಪು. ಬಿಗ್ ಬಾಸ್ ಟಾಸ್ಕ್ ಇರಲಿ, ನೃತ್ಯವಿರಲಿ, ನಟನೆಯಿರಲಿ ಅಥವಾ ಗಂಟೆಗಟ್ಟಲೆ ಸಮುದ್ರದಲ್ಲಿ ಈಜುವುದೇ ಇರಲಿ ನನ್ನ ಸಾಮರ್ಥ್ಯ ಸಾಬೀತಾಗಿದೆ. ಮಾಧ್ಯಮಗಳ ಮುಂದೆ ಕಷ್ಟ ಹೇಳಿಕೊಂಡು ಸಹಾನುಭೂತಿ ಗಿಟ್ಟಿಸಿಕೊಳ್ಳುವುದು ನನಗೆ ಇಷ್ಟವಿಲ್ಲ" ಎಂದು ಟ್ರೋಲಿಗರಿಗೆ ತಕ್ಕ ತಿರುಗೇಟು ನೀಡಿದ್ದಾರೆ.