ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಿಗ್‌ ಬಾಸ್‌ʼ ವಿನ್ನರ್‌ ಹನುಮಂತ ಲಮಾಣಿಗೂ ಬಂದಿತ್ತು ಸಿನಿಮಾ ಹೀರೋ ಆಫರ್! ʻನಟನೆ ನನಗಲ್ಲʼ ಅಂದಿದ್ದೇಕೆ ಗಾಯಕ?

ಬಿಗ್‌ ಬಾಸ್‌ ವಿನ್ನರ್ ಆಗಿದ್ದರೂ ಹನುಮಂತ ಲಮಾಣಿ ಸರಳತೆ ಬಿಟ್ಟಿಲ್ಲ. ಬಿಗ್‌ಬಾಸ್ ಗೆದ್ದ ಬಳಿಕ ಬಂದ 2-3 ಹೀರೋ ಆಫರ್‌ಗಳನ್ನು ಅವರು ನಯವಾಗಿ ತಿರಸ್ಕರಿಸಿದ್ದಾರೆ. ದೊಡ್ಡ ಸ್ಟಾರ್‌ಗಳ ಚಿತ್ರಗಳೇ ಓಡದ ಈ ಕಾಲದಲ್ಲಿ, ಕೇವಲ ತಮ್ಮ ಹೆಸರಿನಿಂದ ನಿರ್ಮಾಪಕರಿಗೆ ನಷ್ಟವಾಗಬಾರದು ಎಂಬುದು ಅವರ ಕಾಳಜಿ.

ʻಬಿಗ್‌ ಬಾಸ್‌ʼ ವಿನ್ನರ್ ಹನುಮಂತ ಹೀರೋ ಆಗಲ್ಲ ಅಂದಿದ್ದೇಕೆ? ಇಲ್ಲಿದೆ ಕಾರಣ!

-

Avinash GR
Avinash GR Jun 17, 2026 3:18 PM

ಜೀ ಕನ್ನಡದ ‘ಸರಿಗಮಪ’ ರಿಯಾಲಿಟಿ ಶೋ ಮೂಲಕ ಕರುನಾಡಿನ ಮನೆಮಾತಾಗಿ, ಆನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟ್ರೋಫಿ ಗೆದ್ದ ಉತ್ತರ ಕರ್ನಾಟಕದ ಜವಾರಿ ಗಾಯಕ ಹನುಮಂತ ಲಮಾಣಿ ಸದ್ಯ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಮತ್ತೋರ್ವ ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ನಟ ಸಿನಿಮಾ ಹೀರೋ ಆಗಿದ್ದಾರೆ. ಹಾಗಿದ್ದರೆ, ಹನುಮಂತಗೂ ಸಿನಿಮಾಗೆ ಹೀರೋ ಆಗುವ ಆಫರ್‌ ಬಂದಿತ್ತೇ? ಹೌದು ಎನ್ನುತ್ತಾರೆ ಹನುಮಂತ ಲಮಾಣಿ. ಬಿಗ್ ಬಾಸ್ ಶೋನಲ್ಲಿ ಗೆದ್ದ ಬಳಿಕ ಸ್ಯಾಂಡಲ್‌ವುಡ್‌ನಿಂದ ಸಾಲು ಸಾಲು ಸಿನಿಮಾಗಳ ಆಫರ್ ಹರಿದುಬಂದಿದ್ದರೂ, ಹನುಮಂತ ಮಾತ್ರ ನಟನೆಯಿಂದ ದೂರ ಉಳಿದ್ದಿದ್ದಾರೆ.

Bigg Boss Kannada 12: ಈ ಸ್ಪರ್ಧಿಗೆ ಹನುಮಂತ ಲಮಾಣಿ ಫುಲ್‌ ಸಪೋರ್ಟ್‌! ಮತ ಹಾಕುವಂತೆ ಮನವಿ ಮಾಡಿದ ಜವಾರಿ ಹುಡುಗ

ದೊಡ್ಡ ಹೀರೊಗಳ ಸಿನಿಮಾಗಳೇ ಥಿಯೇಟರ್‌ನಲ್ಲಿ ಓಡ್ತಿಲ್ಲ!

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಹನುಮಂತ, "ಬಿಗ್ ಬಾಸ್ ಮುಗಿದ ತಕ್ಷಣ 2-3‌ ನಿರ್ಮಾಪಕರು ಸಿನಿಮಾ ಮಾಡೋಣ ಅಂತ ಬಂದಿದ್ದರು. ಆದರೆ ನನಗೆ ನಟನೆ ಬರಲ್ಲ, ಅದರ ಮೇಲೆ ಆಸಕ್ತಿಯೂ ಇಲ್ಲ ಎಂದು ನೇರವಾಗಿ ಹೇಳಿಬಿಟ್ಟೆ. ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳೇ ಚಿತ್ರಮಂದಿರದಲ್ಲಿ ಓಡುತ್ತಿಲ್ಲ. ನಾನು ಬಿಗ್ ಬಾಸ್ ಗೆದ್ದಿದ್ದೇನೆ ಅಂತ ನಾಲ್ಕು ದಿನ ನನ್ನ ಹೆಸರಿರುತ್ತದೆ, ಅದನ್ನೇ ನಂಬಿಕೊಂಡು ಪಾಪ ಅವರು ಹಣ ಹಾಕುತ್ತಾರೆ" ಎಂದು ಹೇಳಿದ್ದಾರೆ.

"ನಮ್ಮಿಂದ ಆ ನಿರ್ಮಾಪಕರಿಗೆ ತೊಂದರೆ ಆಗಬಾರದು ಅಲ್ವಾ? ಸಿನಿಮಾ ಓಡದೇ ಇದ್ದರೆ ಅವರ ದುಡ್ಡು ನಷ್ಟ ಆಗುತ್ತದೆ. ಸುಮ್ಮನೆ ಆ ರಿಸ್ಕ್ ಯಾಕೆ ಬೇಕು ಅಂತ ಬಂದ ಎಲ್ಲಾ ಆಫರ್‌ಗಳನ್ನೂ ಬೇಡ ಎಂದೆ" ಎಂದು ಹನುಮಂತ ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.

Hanumantha Marriage: ಹನುಮಂತ ಲಮಾಣಿ ಮದುವೆ ಯಾವಾಗ? ಹುಡುಗಿ ಬಗ್ಗೆ ಗುಟ್ಟು ಬಿಚ್ಚಿಟ್ಟ ಗೋಲ್ಡ್ ಸುರೇಶ್

ಮನೆ ಕಟ್ಟುತ್ತಿರುವ ಹನುಮಂತ ಲಮಾಣಿ

ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಹನುಮಂತ ಅವರು ಹಾಡುವುದನ್ನು ನಿಲ್ಲಿಸಿಲ್ಲ. "ನಟನೆ ಬೇಡವೆಂದರೂ ಈಗಾಗಲೇ ಎರಡು-ಮೂರು ಸಿನಿಮಾಗಳಿಗೆ ಹಾಡಿದ್ದೇನೆ. ಆ ಹಾಡುಗಳು ಯಾವಾಗ ರಿಲೀಸ್ ಆಗುತ್ತವೆಯೋ ಗೊತ್ತಿಲ್ಲ, ಜನರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ. ಇನ್ನು ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣದ ಬಗ್ಗೆ ಕೇಳಿದಾಗ, "ಟ್ಯಾಕ್ಸ್ ಎಲ್ಲಾ ಕಟ್‌ ಆಗಿ ನನ್ನ ಕೈಗೆ ಬಂದಿದ್ದು 35 ಲಕ್ಷ ರೂಪಾಯಿ ಮಾತ್ರ. ಹಿರಿಯರು ಹೇಳಿದ ಹಾಗೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸ. ಈಗ ಅದೇ ದುಡ್ಡಿನಲ್ಲಿ ನಮ್ಮ ಸ್ವಂತ ಊರಿನಲ್ಲಿ ಮನೆ ಕಟ್ಟಿಸುತ್ತಿದ್ದೇನೆ, ತುಂಬಾ ಕಷ್ಟವಿದೆ" ಎಂದು ಹೇಳಿದ್ದಾರೆ ಹನುಮಂತ ಲಮಾಣಿ.

ದೊಡ್ಡ ಜನಪ್ರಿಯತೆ ಸಿಕ್ಕರೂ ಹನುಮಂತ ಅವರ ಸರಳತೆ ಮಾತ್ರ ಬದಲಾಗಿಲ್ಲ. ಪ್ರಸ್ತುತ ಅವರು ಕಲರ್ಸ್ ಕನ್ನಡ ವಾಹಿನಿಯ 'ಕ್ವಾಟ್ಲೆ ಕಿಚನ್ ಸೀಸನ್ 2' ಅಡುಗೆ ಶೋನಲ್ಲಿ ಭಾಗವಹಿಸುತ್ತಿದ್ದು, ತಮ್ಮ ಮುಗ್ಧ ಮಾತು ಹಾಗೂ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.