ಕನ್ನಡ ನಿರ್ಮಾಪಕರ ಬಿಗ್ ಬಜೆಟ್ ಸಿನಿಮಾದಲ್ಲಿ ʻಧುರಂಧರ್ʼ ಚೆಲುವೆ ಸಾರಾ ಅರ್ಜುನ್; ಏನ್ ರೋಲ್ ಗೊತ್ತಾ?
Sara Arjun in Chiranjeevi Movie: ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ, ಬಾಬಿ ಕೊಲ್ಲಿ ನಿರ್ದೇಶನದ ಚಿರಂಜೀವಿ ಅವರ ಹೊಸ ಸಿನಿಮಾದಲ್ಲಿ ಸಾರಾ ಅರ್ಜುನ್ ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವು ತಂದೆ-ಮಗಳ ಭಾವನಾತ್ಮಕ ಕಥೆಯನ್ನು ಹೊಂದಿದ್ದು, ಚಿರು ಮಗಳಾಗಿ ಸಾರಾ ಕಾಣಿಸಿಕೊಳ್ಳಲಿದ್ದಾರಂತೆ.
-
ಬಾಲ ನಟಿಯಾಗಿ ಗುರುತಿಸಿಕೊಂಡು, ʻಧುರಂಧರ್ʼ ಚಿತ್ರದ ಮೂಲಕ ನಾಯಕಿಯಾಗಿ ದೊಡ್ಡ ಗೆಲುವನ್ನು ಪಡೆದುಕೊಂಡಿರುವ ನಟಿ ಸಾರಾ ಅರ್ಜುನ್. ಸದ್ಯ ಅವರಿಗೆ ಹೊಸ ಹೊಸ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಈ ನಡುವೆ ಕನ್ನಡ ನಿರ್ಮಾಪಕರ ಬಿಗ್ ಬಜೆಟ್ ಸಿನಿಮಾದಲ್ಲೂ ಸಾರಾ ಅರ್ಜುನ್ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಚಿರು ಸಿನಿಮಾದಲ್ಲಿ ಸಾರಾ
ಸ್ಯಾಂಡಲ್‌ವುಡ್ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಈಗ ಮೆಗಾಸ್ಟಾರ್ ಚಿರಂಜೀವಿ ಅವರು ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾವೊಂದನ್ನು ಘೋಷಿಸಿದೆ. 'ಮೆಗಾ 158' ಮತ್ತು 'ಚಿರು-ಬಾಬಿ 2' ಎಂಬ ವರ್ಕಿಂಗ್ ಟೈಟಲ್‌ಗಳಿಂದ ಕರೆಯಲ್ಪಡುತ್ತಿರುವ ಈ ಪ್ರಾಜೆಕ್ಟ್‌ನ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದೀಗ ಈ ಚಿತ್ರದಲ್ಲಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ಟಾಕ್ ಜೋರಾಗಿ ಕೇಳಿಬಂದಿದೆ.
Star Fashion Review 2026: ಸಿಂಪಲ್ ಸಾದಾ ಸೀರೆಯಲ್ಲಿ ಧುರಂಧರ್ ನಟಿ ಸಾರಾ ಅರ್ಜುನ್
ಚಿರು ಮಗಳ ಪಾತ್ರದಲ್ಲಿ ಸಾರಾ ನಟನೆ?
ಅಂದಹಾಗೆ, ಈ ಸಿನಿಮಾವು ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧದ ಸುತ್ತ ಸಾಗುವ ಕಥೆಯನ್ನು ಹೊಂದಿದೆಯಂತೆ. ಹಾಗಾಗಿ, ಪ್ರಮುಖವಾದ ಆ ಮಗಳ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ಕುತೂಹಲ ಮೂಡಿತ್ತು. ಈ ಹಿನ್ನೆಲೆಯಲ್ಲಿ ಅನಸ್ವರ ರಾಜನ್, ಕೃತಿ ಶೆಟ್ಟಿ ಸೇರಿದಂತೆ ಹಲವು ಯುವ ನಟಿಯರ ಹೆಸರುಗಳು ಕೇಳಿಬಂದಿದ್ದವು. ಈಗ ಹೊಸದಾಗಿ ಸಾರಾ ಅರ್ಜುನ್ ಹೆಸರು ಮುಂಚೂಣಿಗೆ ಬಂದಿದ್ದು, ಚಿರಂಜೀವಿ ಅವರ ಮಗಳಾಗಿ ಸಾರಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಚಿರುಗೆ ಪ್ರಿಯಾಮಣಿ ಜೋಡಿ
ಮೂಲಗಳ ಪ್ರಕಾರ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿಯಿದ್ದು, ಇದರಲ್ಲಿ ಚಿರಂಜೀವಿ ಪತ್ನಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಕೂಡ ಈ ಪ್ರಾಜೆಕ್ಟ್‌ನ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ. ಅವರಿಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ, ವಿಲನ್ ಪಾತ್ರಕ್ಕಾಗಿ ಅನುರಾಗ್ ಕಶ್ಯಪ್ ಅವರನ್ನು ಆಯ್ಕೆ ಮಾಡಲಾಗಿದೆಯಂತೆ.
ಬೇಡಿಕೆಯ ನಟಿಯಾಗಿರುವ ಸಾರಾ
ದೈವ ತಿರುಮಗಳ್ ಸಿನಿಮಾದಲ್ಲಿ ಬಾಲನಟಿಯಾಗಿ ಗಮನ ಸೆಳೆದಿದ್ದ ಸಾರಾ ಅರ್ಜುನ್, ಇತ್ತೀಚೆಗೆ 'ಧುರಂಧರ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಬ್ಲಾಕ್ ಬಸ್ಟರ್ ಯಶಸ್ಸು ಪಡೆದುಕೊಂಡರು. ಇದರಿಂದ ಅವರು ಏಕಾಏಕಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಾರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಯುಫೋರಿಯಾ' ಚಿತ್ರ ಫೆಬ್ರವರಿ 6 ರಂದು ಬಿಡುಗಡೆಯಾಗಲಿದೆ. ಹಾಗೆಯೇ 'ಧುರಂಧರ್ 2' ಮಾರ್ಚ್ 19 ರಂದು ಪ್ರೇಕ್ಷಕರ ಮುಂದೆ ಬರಲಿದೆ.