2 ವರ್ಷ ಪೂರೈಸಿದ ‘ಬ್ರಹ್ಮಗಂಟು’ ಸೀರಿಯಲ್; ನಟ ದಿಲೀಪ್ ರಾಜ್‌ರನ್ನು ನೆನದು ಭಾವುಕರಾದ ನಟಿ ದಿಯಾ ಪಾಲಕ್ಕಲ್
ಜೀ ಕನ್ನಡ ವಾಹಿನಿಯ ಜನಪ್ರಿಯ ‘ಬ್ರಹ್ಮಗಂಟು’ ಧಾರಾವಾಹಿಯು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ಮೈಬಣ್ಣದ ತಾರತಮ್ಯದ ವಿರುದ್ಧದ ಸೂಕ್ಷ್ಮ ಕಥಾಹಂದರ ಹೊಂದಿರುವ ಈ ಸೀರಿಯಲ್‌ನ ನಾಯಕಿ ದಿಯಾ ಪಾಲಕ್ಕಲ್ (ದೀಪಾ) ಈ ಸಂದರ್ಭದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
-
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ‘ಬ್ರಹ್ಮಗಂಟು’ ಕೂಡ ಒಂದು. ಈ ಹಿಂದೆ ನಟಿ ಗೀತಾ ಭಾರತಿ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ, ಶ್ರುತಿ ನಾಯ್ಡು ನಿರ್ಮಿಸಿದ್ದ 'ಬ್ರಹ್ಮಗಂಟು' ಧಾರಾವಾಹಿಯು ಯಶಸ್ವಿಯಾಗಿ ಮೂಡಿಬಂದಿತ್ತು. ಆ ಸೂಪರ್ ಹಿಟ್ ಸೀರಿಯಲ್ ಮುಕ್ತಾಯವಾದ ಹಲವು ವರ್ಷಗಳ ನಂತರ, ಅದೇ ಹೆಸರಿನೊಂದಿಗೆ ಸಂಪೂರ್ಣ ಹೊಸ ಕಥೆಯನ್ನೊಳಗೊಂಡ ಮತ್ತೊಂದು ಸೀರಿಯಲ್ ಅನ್ನು 2024ರ ಜೂನ್ 17 ರಂದು ಶುರುವಾಗಿತ್ತು.
ಪ್ರಸ್ತುತ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯ ಕಥೆಯಲ್ಲಿ ಹೆಣ್ಣುಮಕ್ಕಳು ಎದುರಿಸುವ ಮೈಬಣ್ಣದ ತಾರತಮ್ಯ ಹಾಗೂ ಸಮಾಜದ ಚುಚ್ಚುಮಾತುಗಳ ಸೂಕ್ಷ್ಮ ಎಳೆಯನ್ನು ಸೊಗಸಾಗಿ ತೋರಿಸಲಾಗುತ್ತಿದೆ. ಅಂದಹಾಗೆ, ಈ ಹೊಸ ‘ಬ್ರಹ್ಮಗಂಟು’ ಧಾರಾವಾಹಿಯನ್ನು ದಿಲೀಪ್ ರಾಜ್ ಅವರು ನಿರ್ಮಾಣ ಮಾಡುತ್ತಿದ್ದರು. ಆದರೆ ಅವರ ಹಠಾತ್ ನಿಧನ ಇಡೀ ತಂಡಕ್ಕೆ ದೊಡ್ಡ ನೋವು ನೀಡಿದೆ.
ಸದ್ಯ ಈ ಧಾರಾವಾಹಿಯು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಟಿ ದಿಯಾ ಪಾಲಕ್ಕಲ್ ಅವರು ಒಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಬ್ರಹ್ಮಗಂಟು' ಧಾರಾವಾಹಿಯ 2 ಅದ್ಭುತ ವರ್ಷಗಳು.. ಈ 2 ವರ್ಷಗಳ ಪಯಣ ನಿಜಕ್ಕೂ ನಂಬಲಸಾಧ್ಯವಾದದ್ದು! ಈ ಹಾದಿಯಲ್ಲಿ ಸಿಕ್ಕ ಪ್ರತಿಯೊಂದು ಕ್ಷಣಕ್ಕೂ, ಕಲಿತ ಪ್ರತಿಯೊಂದು ಪಾಠಕ್ಕೂ ಮತ್ತು ನಾವು ಸೃಷ್ಟಿಸಿದ ಪ್ರತಿಯೊಂದು ನೆನಪಿಗೂ ನಾನು ಸದಾ ಕೃತಜ್ಞಳಾಗಿದ್ದೇನೆ" ಎಂದು ದಿಯಾ ಬರೆದುಕೊಂಡಿದ್ದಾರೆ.
ʻಹಸಿದವರ ಅನ್ನದಾತ, ಹುಡುಕಿದರು ಸಿಗದ ಗುಣವಂತʼ; ಅಗಲಿದ ಸ್ನೇಹಿತ ದಿಲೀಪ್ ರಾಜ್‌ಗಾಗಿ ಹಾಡು ಬರೆದ ನಟ ನವೀನ್ ಕೃಷ್ಣ
ನಾನು ಬೆಳೆಯಲು ಪ್ರೇರಕ ಶಕ್ತಿಯಾಗಿದ್ದೀರಿ
"ನನ್ನ ಮೇಲೆ ನಂಬಿಕೆಯಿಟ್ಟು ಈ ಅದ್ಭುತ ಅವಕಾಶವನ್ನು ನೀಡಿದ ಜೀ ಕನ್ನಡ ವಾಹಿನಿ ಹಾಗೂ ಶ್ರೀವಿದ್ಯಾ ಮ್ಯಾಮ್‌ಗೆ ನನ್ನ ಹೃದಯಾಳದ ಧನ್ಯವಾದಗಳು. ದಿಲೀಪ್ ಸರ್ ಅವರಿಗೆ ಒಂದು ವಿಶೇಷ ಧನ್ಯವಾದ. ನನ್ನ ಈ ಪಯಣದಲ್ಲಿ ನೀವು ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದೀರಿ. ಕೇವಲ ಒಬ್ಬ ಮಾರ್ಗದರ್ಶಕರಾಗಿ ಅಷ್ಟೇ ಅಲ್ಲದೆ, ಸದಾ ನನ್ನನ್ನು ನಂಬಿ, ಪ್ರೋತ್ಸಾಹಿಸಿ, ಪ್ರತಿ ಹೆಜ್ಜೆಯಲ್ಲೂ ನಾನು ಬೆಳೆಯಲು ಒಂದು ಪ್ರೇರಕ ಶಕ್ತಿಯಾಗಿದ್ದೀರಿ" ಎಂದು ದಿಯಾ ಹೇಳಿಕೊಂಡಿದ್ದಾರೆ.
ಆ ಕ್ಷಣಗಳು ನನ್ನ ಹೃದಯಕ್ಕೆ ಹತ್ತಿರವಾಗಿರುತ್ತವೆ
"ದೀಪಾ ಪಾತ್ರದ ಮೂಲಕ ನಾನು ಸಾಧಿಸುವ ಪ್ರತಿಯೊಂದು ಮೈಲಿಗಲ್ಲು ಕೂಡ ಸದಾ ನಿಮ್ಮ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನೀವು ನನ್ನಲ್ಲಿ ತುಂಬಿದ ಆತ್ಮವಿಶ್ವಾಸವನ್ನು ನೆನಪಿಸುತ್ತದೆ. ಈ ಸುಂದರವಾದ ಪಾತ್ರವನ್ನು ನನಗೆ ನಂಬಿ ನೀಡಿದ್ದಕ್ಕಾಗಿ ಮತ್ತು ನನ್ನ ಜೀವನ ಹಾಗೂ ವೃತ್ತಿಬದುಕಿನ ಅತ್ಯಂತ ಮಹತ್ವದ ಭಾಗವಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಾವು ಹಂಚಿಕೊಂಡ ನೆನಪುಗಳು, ಕಲಿತ ಪಾಠಗಳು ಮತ್ತು ಆ ಕ್ಷಣಗಳು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತವೆ" ಎಂದು ಹೇಳಿದ್ದಾರೆ ದಿಯಾ.
ದಿಯಾ ಪಾಲಕ್ಕಲ್ ಅವರ ಪೋಸ್ಟ್
ನಮ್ಮ ಅದ್ಭುತ ಪ್ರೇಕ್ಷಕರಿಗೆ ಧನ್ಯವಾದಗಳು
"ನನ್ನ ಇಡೀ 'ಬ್ರಹ್ಮಗಂಟು' ಕುಟುಂಬಕ್ಕೆ, ಈ ಎರಡು ವರ್ಷಗಳನ್ನು ಇಷ್ಟು ಸುಂದರ ಹಾಗೂ ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಅದ್ಭುತ ಪ್ರೇಕ್ಷಕರ ನಿರಂತರ ಪ್ರೀತಿ, ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ನಿಮ್ಮ ಪ್ರತಿಯೊಂದು ಸಂದೇಶ, ಪ್ರತಿಯೊಂದು ಮೆಚ್ಚುಗೆ ಮತ್ತು ಪ್ರೀತಿಯ ನುಡಿಗಳು ನಮಗೆ ತುಂಬಾ ಅಮೂಲ್ಯವಾದವು. 'ಬ್ರಹ್ಮಗಂಟು' ಧಾರಾವಾಹಿಯ ಸುಂದರ 2 ವರ್ಷಗಳ ಯಶಸ್ಸಿನ ಸಂಭ್ರಮ ಇಲ್ಲಿದೆ, ಮುಂದೆಯೂ ಇಂತಹ ಇನ್ನೂ ಹಲವು ಮೈಲಿಗಲ್ಲುಗಳನ್ನು ತಲುಪುವಂತಾಗಲಿ" ಎಂದು ದಿಯಾ ಅವರು ಹಾರೈಸಿದ್ದಾರೆ.