ನೀವೂ ಬೆಂಗಳೂರಿನಲ್ಲಿ ಸಂಚಾರಿ ಪೊಲೀಸ್ ಆಗಬೇಕೆ? ಪರೀಕ್ಷೆ ಇಲ್ಲ, ಸಂದರ್ಶನ ಇಲ್ಲ, ಜಸ್ಟ್ ಹೆಸರು ನೋಂದಾಯಿಸಿದರೆ ಸಾಕು; ಏನಿದು ಹೊಸ ಅಭಿಯಾನ?
Bengaluru Police Launch Cop for the Day: ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ತಮ್ಮ ಕಾಪ್ ಫಾರ್ ದಿ ಡೇ (ಒಂದು ದಿನದ ಪೊಲೀಸ್) ಉಪಕ್ರಮವನ್ನು ಮರಳಿ ತಂದಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಎಕ್ಸ್‌ನಲ್ಲಿ ಈ ಉಪಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಗರದ ಸಂಚಾರವನ್ನು ನಿರ್ವಹಿಸುವಲ್ಲಿ ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಆ. 25: ನಗರದಲ್ಲಿ ಸಂಚಾರಿ ಪೊಲೀಸರು (Bengaluru Police) ತಮ್ಮ ಕಾಪ್ ಫಾರ್ ದಿ ಡೇ (ಒಂದು ದಿನದ ಪೊಲೀಸ್) ಉಪಕ್ರಮವನ್ನು ಮರಳಿ ತಂದಿದ್ದಾರೆ (Cop for the Day). ಇದು ಸ್ವಯಂಸೇವಕರಿಗೆ ಒಂದು ದಿನದ ಮಟ್ಟಿಗೆ ನಾಗರಿಕ ಸಂಚಾರಿ ಪೊಲೀಸರಾಗಿ ಕಾರ್ಯನಿರ್ವಹಿಸಲು ಮತ್ತು ದಟ್ಟಣೆಯ ಅವಧಿ ಸಮಯದಲ್ಲಿ ನೈಜ ಸಂಚಾರ ನಿರ್ವಹಣೆಯ ಆನ್-ಗ್ರೌಂಡ್ ಅನುಭವವನ್ನು ಪಡೆಯಲು ಅವಕಾಶ ನೀಡುತ್ತದೆ. ಇದು ಬೆಂಗಳೂರಿನ (Bengaluru) ನಿವಾಸಿಗಳು ಸಂಚಾರಿ ಪೊಲೀಸರಂತೆ ಒಂದು ದಿನ ಕಾರ್ಯ ನಿರ್ವಹಿಸಬಹುದು. ಇದರಿಂದ ನಗರದ ಸಂಚಾರವನ್ನು ನಿರ್ವಹಿಸುವಲ್ಲಿ ಎದುರಾಗುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳಬಹುದು.
ಬೆಂಗಳೂರು ಸಂಚಾರ ಪೊಲೀಸರು ಎಕ್ಸ್‌ನಲ್ಲಿ ಈ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಚಾರ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳ ನೇರ ಅನುಭವವನ್ನು ಪಡೆಯಲು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಸಲಹೆಗಳನ್ನು ನೀಡಲು ಮನವಿ ಮಾಡಿದ್ದಾರೆ.
ಆಸಕ್ತ ನಾಗರಿಕರು BTP ASTraM ಅಪ್ಲಿಕೇಶನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. “ಒಂದು ದಿನದ ಪೊಲೀಸ್ ಅಭಿಯಾನದ ಭಾಗವಾಗಿ ಸಂಚಾರಿ ಪೊಲೀಸರ ಪಾತ್ರ ನಿರ್ವಹಿಸಿ ಮತ್ತು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಅವರ ದೃಷ್ಟಿಕೋನದಿಂದ ಅನುಭವಿಸಿ. ನಮ್ಮ ಸಂಚಾರಿ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳುವಳಿಕೆ ಪಡೆದುಕೊಳ್ಳಿ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಮತ್ತು ಸುರಕ್ಷಿತ ಹಾಗೂ ಸುಗಮ ರಸ್ತೆಗಳಿಗಾಗಿ ನಿಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಿ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಇಲ್ಲಿದೆ ಪೋಸ್ಟ್:
Namaste Bengaluru!
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 24, 2026
Step into the shoes of a Traffic Cop with “Cop for the Day” and experience Bengaluru traffic from their perspective.
Get a firsthand understanding of the challenges faced by our traffic personnel, share your experiences and offer valuable suggestions for… pic.twitter.com/5PtBDlZJr8
ಈ ಅಭಿಯಾನವನ್ನು ಈ ಹಿಂದೆಯೂ ಯಶಸ್ವಿಯಾಗಿ ನಡೆಸಲಾಗಿತ್ತು. ಈಗ ಅದನ್ನು ಮತ್ತೆ ತರಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಹಂಚಿಕೊಂಡಿರುವ ವಿಡಿಯೊದಲ್ಲಿ ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಇದು ನಾಗರಿಕರು ಸಂಚಾರ ಪೊಲೀಸ್ ಸಿಬ್ಬಂದಿಯೊಂದಿಗೆ ಒಂದು ದಿನ ಕಳೆಯಲು ಮತ್ತು ಬೆಂಗಳೂರಿನ ಸಂಚಾರವನ್ನು ನಿರ್ವಹಿಸುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದ್ದಾರೆ.
ಚಿಂತಾಮಣಿಯಲ್ಲಿ ಡಿಜೆ, ಪಟಾಕಿಗೆ ನಿರ್ಬಂಧ: ಶಾಂತಿಯುತ ಈದ್ ಮಿಲಾದ್‌ಗೆ ಪೊಲೀಸ್ ಬಿಗಿ ಬಂದೋಬಸ್ತ್
ನಾಗರಿಕರು ಭಾಗವಹಿಸಲು ಮತ್ತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಕಾರ್ತಿಕ್ ರೆಡ್ಡಿ ಕರೆ ನೀಡಿದ್ದಾರೆ. ಸುರಕ್ಷಿತ ಮತ್ತು ವೇಗವಾದ ಬೆಂಗಳೂರಿಗೆ ಒಟ್ಟಾಗಿ ಕೆಲಸ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರ 'ಕಾಪ್ ಫಾರ್ ಎ ಡೇ' ಉಪಕ್ರಮಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- BTP ASTraM ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿ ಮತ್ತು ಲಾಗಿನ್ ಮಾಡಿ.
- ಅಪ್ಲಿಕೇಶನ್‌ನ ಮುಖಪುಟಕ್ಕೆ ಹೋಗಿ, ‘ಒಂದು ದಿನದ ಸಂಚಾರ ಪೊಲೀಸ್’ ಆಯ್ಕೆ ಮಾಡಿ.
- ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ.
- ಯಶಸ್ವಿ ನೋಂದಣಿಯ ನಂತರ, ನೀವು ಈ ಅಭಿಯಾನದಲ್ಲಿ ಭಾಗವಹಿಸಬಹುದು ಮತ್ತು ಬೆಂಗಳೂರಿನ ಸಂಚಾರ ಪೊಲೀಸ್ ಆಗಿ ಒಂದು ದಿನ ಕರ್ತವ್ಯ ನಿರ್ವಹಿಸಬಹುದು.