Duleep Trophy 2026: ಈಶಾನ್ಯ ವಲಯವನ್ನು ಮಣಿಸಿ ಸೆಮಿಫೈನಲ್‌ಗೇರಿದ ಪೂರ್ವ ವಲಯ!
Duleep Trophy 2026: ಶಹಬಾಝ್ ಅಹ್ಮದ್ ಅವರ ಆಲ್‌ರೌಂಡರ್ ಆಟದಸ ಬಲದಿಂದ ಪೂರ್ವ ವಲಯ ತಂಡ, ಎದುರಾಳಿ ಈಶಾನ್ಯ ವಲಯ ಎದುರು ಇನಿಂಗ್ಸ್ ಹಾಗೂ 210 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ದುಲೀಪ್ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಈಶಾನ್ಯ ವಲಯವನ್ನು ಮಣಿಸಿ ಸೆಮೀಸ್‌ಗೇರಿದ ಪೂರ್ವ ವಲಯ. -
ಬೆಂಗಳೂರು: ಶಹಬಾಝ್ ಅಹ್ಮದ್ (Shahbaz Ahmed) ಅವರ ಆಲ್‌ರೌಂಡರ್ ಆಟದ ಬಲದಿಂದ ಪೂರ್ವ ವಲಯ ತಂಡ, 2026ರ ದುಲೀಪ್ ಟ್ರೋಫಿ (Duleep Trophy 2026) ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಮೂರನೇ ದಿನವೇ ಪೂರ್ವ ವಲಯ ತಂಡ, ಎದುರಾಳಿ ಈಶಾನ್ಯ ವಲಯವನ್ನು ಇನಿಂಗ್ಸ್ ಹಾಗೂ 210 ರನ್‌ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ಅಂತಿಮ ನಾಲ್ಕರ ಸುತ್ತಿಗೆ ಪ್ರವೇಶ ಮಾಡಿದೆ. ಇನ್ನು ಮುಶೀರ್ ಖಾನ್ ಹಾಗೂ ಋತುರಾಜ್ ಗಾಯಕ್ವಾಡ್ ಅವರ ಅರ್ಧಶತಕಗಳ ಬಲದಿಂದ ಪಶ್ಚಿಮ ವಲಯ, ಎದುರಾಳಿ ಉತ್ತರ ವಲಯದ ಎದುರು ಗೆಲುವಿನ ಸನಿಹದಲ್ಲಿದೆ.
ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇವಲ ಮೂರು ದಿನಗಳಲ್ಲೇ ಪೂರ್ವ ವಲಯ, ಈಶಾನ್ಯ ವಲಯ ತಂಡವನ್ನು ಇನಿಂಗ್ಸ್ ಮತ್ತು 210 ರನ್‌ಗಳ ಭಾರೀ ಅಂತರದಿಂದ ಸೋಲಿಸಿತು. ಮೊದಲ ಇನಿಂಗ್ಸ್‌ನಲ್ಲಿ ಪೂರ್ವ ವಲಯ 467 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಈಶಾನ್ಯ ವಲಯ ಮೊದಲ ಇನಿಂಗ್ಸ್‌ನಲ್ಲಿ ಕೇವಲ 111 ರನ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 146 ರನ್‌ಗಳಿಗೆ ಆಲೌಟ್ ಆಗಿತ್ತು.
IND vs SL: ಫಾಲೋ ಆನ್ ಭೀತಿಯಲ್ಲಿ ಶ್ರೀಲಂಕಾ, ಮೂರನೇ ದಿನವೂ ಭಾರತ ತಂಡ ಪ್ರಾಬಲ್ಯ!
ಅನುಕೂಲ್ ರಾಯ್ 5 ವಿಕೆಟ್ ಕಬಳಿಸಿ ಮಿಂಚು
ಈಶಾನ್ಯ ವಲಯ ಎರಡನೇ ಇನಿಂಗ್ಸ್ ಕೂಡ ಕಳಪೆ ಆರಂಭ ಕಂಡಿತ್ತು. ಆರಂಭಿಕ ಬ್ಯಾಟರ್ ಅರ್ಪಿತ್ ಸುಭಾಷ್ ಭಟೇವಾರಾ ಕೇವಲ 1 ರನ್ ಗಳಿಸಿ ಮುಖೇಶ್ ಕುಮಾರ್ ಬೌಲಿಂಗ್‌ನಲ್ಲಿ ಔಟಾದರು. ಜೋಸೆಫ್ ಲಾಲ್ಥಮ್ಕುಮಾ 44 ಎಸೆತಗಳನ್ನು ಎದುರಿಸಿ ಕೇವಲ 9 ರನ್ ಗಳಿಸಿದರು. ಒಂದು ಹಂತದಲ್ಲಿ ನಾರ್ತ್ ಈಸ್ಟ್ ಝೋನ್ 90 ರನ್‌ಗೆ 8 ವಿಕೆಟ್ ಕಳೆದುಕೊಂಡಿತ್ತು.
ಈ ವೇಳೆ ಆಕಾಶ್ ಚೌಧರಿ ಮತ್ತು ಫೆರೋಯಿಜಮ್ ಜೋತಿನ್ 9ನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ನೀಡಿದರು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನಾರ್ತ್ ಈಸ್ಟ್ ಝೋನ್ 146 ರನ್‌ಗಳಿಗೆ ಆಲೌಟ್ ಆಯಿತು. ಜೋತಿನ್ ತಂಡದ ಪರ ಗರಿಷ್ಠ 39 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು. ಈ ನಡುವೆ ಅನುಕೂಲ ರಾಯ್ 5 ವಿಕೆಟ್ ಕಬಳಿಸಿ ಪೂರ್ವ ವಲಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್ ಜುರೆಲ್!
ಎಡಗೈ ಸ್ಪಿನ್ನರ್ ಅನುಕೂಲ ರಾಯ್ ಜೊತೆಗೆ ವೈಭವ್ ಸೂರ್ಯವಂಶಿ ಕೂಡ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು. ಮೊದಲ ಇನಿಂಗ್ಸ್ ಬಳಿಕ ಎರಡನೇ ಇನಿಂಗ್ಸ್‌ನಲ್ಲೂ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರಿಗೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರು 5 ಓವರ್ ಬೌಲ್ ಮಾಡಿ ಕೇವಲ 10 ರನ್ ನೀಡಿದರು.
ಶಹಬಾಝ್ ಅಹ್ಮದ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಪೂರ್ವ ವಲಯ ಆಲ್‌ರೌಂಡರ್ ಶಹಬಾಝ್ ಅಹ್ಮದ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶಹಬಾಝ್ ಭರ್ಜರಿ 167 ರನ್‌ಗಳ ಇನಿಂಗ್ಸ್ ಆಡಿದರು. ಅವರ ಅಮೋಘ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದ್ದವು. ಬ್ಯಾಟಿಂಗ್‌ನಲ್ಲಿ ಮಿಂಚಿದ ಅವರು ಬೌಲಿಂಗ್‌ನಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದು ಒಟ್ಟು 4 ವಿಕೆಟ್ ಕಬಳಿಸಿದರು. ದುಲೀಪ್ ಟ್ರೋಫಿ 2026ರ ಸೆಮಿಫೈನಲ್ ಪಂದ್ಯಗಳು ಆಗಸ್ಟ್ 30ರಿಂದ ಆರಂಭವಾಗಲಿವೆ.