ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌ʻಜನ ನಾಯಗನ್ʼ ನಿರ್ಮಾಪಕ ವೆಂಕಟ್‌ ನಾರಾಯಣ್‌ಗೆ ತಮಿಳುನಾಡು ಸರ್ಕಾರದಲ್ಲಿ ಪ್ರಮುಖ ಹುದ್ದೆ; ಸಿಎಂ ವಿಜಯ್‌ ನಡೆಗೆ ಡಿಎಂಕೆ ಆಕ್ರೋಶ

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ನಿರ್ಮಾಪಕ ಕೆ. ವೆಂಕಟ್ ನಾರಾಯಣ್ (KVN) ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯಾಗಿ ತಮಿಳುನಾಡು ಸರ್ಕಾರ ಒಂದು ವರ್ಷದ ಅವಧಿಗೆ ನೇಮಕ ಮಾಡಿದೆ. ಸಿಎಂ ವಿಜಯ್ ಅವರ ಈ ನಡೆಗೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ತೀವ್ರ ಆಕ್ರೋಶ ಹೊರಹಾಕಿದೆ.

CM Vijay: ʻಜನ ನಾಯಗನ್‌ʼ ನಿರ್ಮಾಪಕರಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆ!

-

Avinash GR
Avinash GR Jun 28, 2026 4:10 PM

ಸಿಎಂ ವಿಜಯ್‌ ನಟಿಸಿದ್ದ ಕೊನೆ ಸಿನಿಮಾ ʻಜನ ನಾಯಗನ್‌ʼನ ನಿರ್ಮಾಪಕ ಕೆ. ವೆಂಕಟ್‌ ನಾರಾಯಣ ಅವರನ್ನು ಹೊಸ ದೆಹಲಿಯಲ್ಲಿ ತನ್ನ ವಿಶೇಷ ಪ್ರತಿನಿಧಿಯಾಗಿ ಒಂದು ವರ್ಷದ ಅವಧಿಗೆ ತಮಿಳುನಾಡು ಸರ್ಕಾರವು ನೇಮಕ ಮಾಡಿದೆ. ಆದರೆ, ಈ ನೇಮಕಾತಿಯು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ತಮಿಳುನಾಡು ಸರ್ಕಾರದ ಆದೇಶದ ಪ್ರಕಾರ, ಕೆವಿಎನ್‌ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಅವರ ನೇಮಕಾತಿಯ ನಿಯಮಗಳು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ 'ತಮಿಳಗ ವೆಟ್ರಿ ಕಳಗಂ' ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ನಟನೆಯ, ಬಿಡುಗಡೆಗೆ ಸಿದ್ಧವಾಗಿರುವ 'ಜನ ನಾಯಗನ್' ಚಿತ್ರದ ನಿರ್ಮಾಪಕರಾಗಿ ಕೆವಿಎನ್‌ ಅವರು ಹೆಚ್ಚು ಪರಿಚಿತರಾಗಿದ್ದಾರೆ.

ಸಿಎಂ ವಿಜಯ್‌ ಹುಟ್ಟುಹಬ್ಬವನ್ನು ಆಚರಿಸಲಿಲ್ವಾ ನಟಿ ತ್ರಿಷಾ ಕೃಷ್ಣನ್? AI ಫೋಟೋ ಶೇರ್‌ ಮಾಡಿ ಯಾಮಾರಿಸಿದ್ರಾ? ಗಾಯಕಿಯ ಹೊಸ ಆರೋಪ!

ವಿಜಯ್‌ಗೆ ಆಪ್ತರಾಗಿರುವ ವೆಂಕಟ್‌

ನಟ ಹಾಗೂ ರಾಜಕಾರಣಿಯಾಗಿರುವ ವಿಜಯ್ ಅವರೊಂದಿಗೆ ಕೆ. ವೆಂಕಟ್‌ ನಾರಾಯಣ್‌ ಹೊಂದಿರುವ ನಿಕಟ ಸಂಬಂಧದಿಂದಾಗಿ ಈ ನೇಮಕಾತಿ ಗಮನ ಸೆಳೆದಿದೆ. ಕಳೆದ ಮೇ ತಿಂಗಳಲ್ಲಿ ವಿಜಯ್ ಅವರು ಸರ್ಕಾರ ರಚಿಸಲು ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿ ಮಾಡಿದ್ದಾಗಲೂ ಕೆ. ವೆಂಕಟ್‌ ನಾರಾಯಣ್ ಕೂಡ ಅಂದು ಜೊತೆಯಲ್ಲಿದ್ದರು. ಇದೀಗ ವಿಜಯ್‌ ನೇತೃತ್ವದ ತಮಿಳುನಾಡು ಸರ್ಕಾರವು ಕೆವಿಎನ್‌ಗೆ ಪ್ರಮುಖ ಹುದ್ದೆ ನೀಡಿದೆ.,

ಕೆವಿಎನ್‌ ನೇಮಕಕ್ಕೆ ಪ್ರತಿಪಕ್ಷಗಳು ಕೆಂಡ

ವೆಂಕಟ್‌ ನಾರಾಯಣ್‌ ಅವರ ನೇಮಕಾತಿಯು ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ. ಡಿಎಂಕೆ (DMK) ರಾಜ್ಯಸಭಾ ಸಂಸದ ಪಿ. ವಿಲ್ಸನ್ ಅವರು, ಸಿನಿಮಾ ನಿರ್ಮಾಪಕರೊಬ್ಬರನ್ನು ಇಂತಹ ಪ್ರಮುಖ ಆಡಳಿತಾತ್ಮಕ ಹುದ್ದೆಗೆ ನೇಮಿಸಿರುವ ನಿರ್ಧಾರವನ್ನು ಪ್ರಶ್ನಿಸಿದ್ದು, ಇದು ಈ ಹುದ್ದೆಯ ಗಾಂಭೀರ್ಯವನ್ನು ಕುಗ್ಗಿಸುತ್ತದೆ ಎಂದು ವಾದಿಸಿದ್ದಾರೆ.

ʻಬ್ರೇಕ್‌ಅಪ್‌ʼ ಎಂದವರಿಗೆ ʻಬ್ರೇಕಿಂಗ್‌ ನ್ಯೂಸ್‌ʼ ಕೊಟ್ಟ ನಟಿ ತ್ರಿಶಾ; ಸಿಎಂ ವಿಜಯ್‌ಗೆ ತಡವಾಗಿ ವಿಶ್‌ ಮಾಡಿದ ಆಪ್ತ ಗೆಳತಿ!

ವಿಶೇಷ ಪ್ರತಿನಿಧಿಯ ಹುದ್ದೆಯು ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿದೆ ಎಂದು ವಿಲ್ಸನ್ ಹೇಳಿದ್ದಾರೆ. "ಕೇಂದ್ರ ಸಚಿವರೊಂದಿಗೆ ಸಮನ್ವಯ ಸಾಧಿಸುವುದು, ಹೊಸ ದೆಹಲಿಯಲ್ಲಿ ಮುಖ್ಯಮಂತ್ರಿಯವರ ಸಭೆಗಳನ್ನು ಆಯೋಜಿಸುವುದು, ರಾಜ್ಯದ ಮೇಲೆ ಪರಿಣಾಮ ಬೀರುವ ಕೇಂದ್ರ ನೀತಿಗಳ ಬೆಳವಣಿಗೆಗಳನ್ನು ತಿಳಿಸುವುದು ಮತ್ತು ಸಂಸತ್ ಅಧಿವೇಶನದ ಸಮಯದಲ್ಲಿ ತಮಿಳುನಾಡಿನ ಸಂಸದರಿಗೆ ಅಧಿಕೃತ ಮಾಹಿತಿಯೊಂದಿಗೆ ನೆರವಾಗುವುದು ಈ ಹುದ್ದೆಯ ಪ್ರಮುಖ ಜವಾಬ್ದಾರಿಗಳಾಗಿವೆ" ಎಂದು ಅವರು ಎಚ್ಚರಿಸಿದ್ದಾರೆ.

ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ

ತಮ್ಮಿಷ್ಟದ ವ್ಯಕ್ತಿಯನ್ನು ನೇಮಿಸುವ ಅಧಿಕಾರ ಸರ್ಕಾರಕ್ಕೆ ಇದ್ದರೂ, ರಾಜ್ಯದ ಆಡಳಿತಾತ್ಮಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಹುದ್ದೆಯನ್ನು ಭರ್ತಿ ಮಾಡಬೇಕಿತ್ತು ಎಂದು ವಿಲ್ಸನ್ ವಾದಿಸಿದ್ದಾರೆ. ಚಲನಚಿತ್ರ ನಿರ್ಮಾಪಕರನ್ನು ಈ ಹುದ್ದೆಗೆ ನೇಮಿಸಿರುವುದು ಕಚೇರಿಯ ಘನತೆಯನ್ನು ಕಡಿಮೆ ಮಾಡುತ್ತದೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ತಮಿಳುನಾಡು ರಾಜ್ಯವನ್ನು ಹಾಸ್ಯಾಸ್ಪದ ಆಗುವಂತೆ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಈ ಯಾವ ಟೀಕೆಗಳಿಗೂ ತಮಿಳುನಾಡು ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಿರ್ಮಾಪಕರಾಗಿರುವ ಕೆವಿಎನ್‌

ಬೆಂಗಳೂರು ಮೂಲದ ಕೆವಿಎನ್‌ ಪ್ರೊಡಕ್ಷನ್ಸ್‌ನ ನಿರ್ಮಾಪಕ ವೆಂಕಟ್‌ ನಾರಾಯಣ್‌ ಅವರು ಸಖತ್‌, ಬೈ ಟು ಲವ್‌ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ನಂತರ ಹಲವು ಚಿತ್ರಗಳ ವಿತರಣೆ ಮಾಡುವುದರ ಜೊತೆಗೆ ಈಚೆಗೆ ಕೆಡಿ, ಬಾಲನ್‌ ದಿ ಬಾಯ್ ಸಿನಿಮಾಗಳನ್ನು ರಿಲೀಸ್‌ ಮಾಡಿದ್ದರು. ಪ್ರಸ್ತುತ ಈ ಬ್ಯಾನರ್‌ನ ಎರಡು ಬಿಗ್‌ ಬಜೆಟ್‌ ಸಿನಿಮಾಗಳಾದ‌ ಜನ ನಾಯಗನ್, ಟಾಕ್ಸಿಕ್‌ ಸಿನಿಮಾಗಳು ತೆರೆಗೆ ಬರುವುದಕ್ಕೆ ರೆಡಿಯಾಗಿವೆ. ಸದ್ಯ ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲೂ ಸಿನಿಮಾಗಳನ್ನು ಕೆವಿಎನ್‌ ಬ್ಯಾನರ್‌ ಮೂಲಕ ವೆಂಕಟ್‌ ನಾರಾಯಣ್ ನಿರ್ಮಾಣ ಮಾಡುತ್ತಿದ್ದಾರೆ.