10 ವರ್ಷಗಳ ಬಳಿಕ ಪುನಃ ಒಂದಾದ ʻಪ್ರೇಮಂʼ ಜೋಡಿ; ನಿವಿನ್ ಪೌಲಿ ʻವಿಜಯಂʼ ಚಿತ್ರಕ್ಕೆ ಆಲ್ಫೋನ್ಸ್ ಪುತ್ರೆನ್ ಡೈರೆಕ್ಷನ್
ಮಲಯಾಳಂ ಚಿತ್ರರಂಗದ ಬ್ಲಾಕ್‌ಬಸ್ಟರ್ ಚಿತ್ರಗಳಾದ 'ನೇರಂ' ಮತ್ತು 'ಪ್ರೇಮಂ' ನೀಡಿದ್ದ ನಟ ನಿವಿನ್ ಪೌಲಿ ಹಾಗೂ ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಹತ್ತು ವರ್ಷಗಳ ನಂತರ ತಮ್ಮ ಹೊಸ ಚಿತ್ರ ‘ವಿಜಯಂ’ ಮೂಲಕ ಮತ್ತೆ ಒಂದಾಗಿದ್ದಾರೆ. ನಿವಿನ್ ಪೌಲಿ ಅವರ ವೃತ್ತಿಬದುಕಿನ 50ನೇ ಮೈಲಿಗಲ್ಲಿನ ಈ ಚಿತ್ರವು ರೇಸಿಂಗ್ ಲೋಕದ ಹಿನ್ನೆಲೆಯಲ್ಲಿ ಮೂಡಿಬರಲಿದೆ.
-
ಮಲಯಾಳಂ ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಘೋಷಣೆ ಕೊನೆಗೂ ಹೊರ ಬಿದ್ದಿದೆ. ಬ್ಲಾಕ್‌ಬಸ್ಟರ್ ಜೋಡಿ ಎನಿಸಿಕೊಂಡಿರುವ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಹೊಸ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ತೆರೆಕಂಡು ಹೊಸ ಅಲೆ ಸೃಷ್ಟಿಸಿದ್ದ 'ನೇರಂ' ಹಾಗೂ 'ಪ್ರೇಮಂ' ಚಿತ್ರಗಳ ಅದ್ಭುತ ಯಶಸ್ಸಿನ ನಂತರ, ಈ ಕ್ರೇಜಿ ಕಾಂಬಿನೇಷನ್ ಮತ್ತೊಮ್ಮೆ ಇಂಟರೆಸ್ಟಿಂಗ್ ಪ್ರಾಜೆಕ್ಟ್‌ಗೆ ಕೈಜೋಡಿಸಿದೆ.
ಭರ್ಜರಿ ಯಶಸ್ಸು ಕಂಡಿದ್ದ 'ಪ್ರೇಮಂ'
ವಿಶೇಷವೆಂದರೆ, ಈ ಹೊಸ ಚಿತ್ರಕ್ಕೆ 'ವಿಜಯಂ' ಎಂದು ಹೆಸರಿಡಲಾಗಿದ್ದು, ಇದು ನಿವಿನ್ ಪೌಲಿ ಅವರ ವೃತ್ತಿಜೀವನದ ಮೈಲಿಗಲ್ಲಿನ 50ನೇ ಸಿನಿಮಾ ಆಗಿದೆ. ಇತ್ತೀಚೆಗೆ ಕೇರಳದ ಎರ್ನಾಕುಲಂನ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಭರ್ಜರಿ ಶೀರ್ಷಿಕೆ ವಿಡಿಯೋವನ್ನು ಅನಾವರಣಗೊಳಿಸಲಾಯಿತು. ಆಲ್ಫೋನ್ಸ್ ಪುತ್ರೇನ್ ಅವರು ಈ ಹಿಂದೆ 'ಪ್ರೇಮಂ' ಚಿತ್ರದಲ್ಲಿ ಪ್ರೀತಿಯ ವಿವಿಧ ಹಂತಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಆ ಚಿತ್ರವು ಭರ್ಜರಿ ಯಶಸ್ಸು ಕಂಡಿದ್ದಲ್ಲದೇ, ಪ್ರೇಕ್ಷಕರನ್ನು ಇಂದಿಗೂ ಕಾಡುವಂತೆ ಮಾಡಿತ್ತು.
Athiradi OTT Release: ಕಾಲೇಜು ದಿನಗಳನ್ನು ನೆನಪಿಸುವ ಕಥೆ; ಈ ಮಲಯಾಳಂ ಮೂವಿ ಸ್ಟ್ರೀಮಿಂಗ್ ಎಲ್ಲಿ?
ಹೊಸ ಸಿನಿಮಾಕ್ಕೆ ವಿಜಯಂ ಟೈಟಲ್
ಆದರೆ, ಪ್ರಸ್ತುತ ಘೋಷಣೆಯಾಗಿರುವ 'ವಿಜಯಂ' ಚಿತ್ರವು ರೇಸಿಂಗ್ ಪ್ರಪಂಚದ ಹಿನ್ನೆಲೆಯಲ್ಲಿ ಮೂಡಿಬರಲಿದ್ದು, ಸಂಪೂರ್ಣ ಭಿನ್ನವಾದ ಕಥಾಹಂದರವನ್ನು ಹೊಂದಿರಲಿದೆ. ಇದನ್ನು ಆಲ್ಫೋನ್ಸ್ ಪುತ್ರೇನ್ ಅವರೇ ಬರೆದು, ನಿರ್ದೇಶಿಸುವುದರ ಜೊತೆಗೆ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಸ್ಟೀವ್ ಕೊಟ್ಟೂರ್ ಸಂಗೀತ ಸಂಯೋಜನೆ
ವಿಜಯಂ ಚಿತ್ರವನ್ನು 'ಪೌಲಿ ಜೂನಿಯರ್ ಪಿಕ್ಚರ್ಸ್' ಜೊತೆಗೆ 'ಸಿನೆಹೋಲಿಕ್ಸ್' ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಮತ್ತು ಸುನಿಲ್ ರಾಮದಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 'ವಿಜಯಂ' ಚಿತ್ರಕ್ಕೆ ಕೇರಳ ಮೂಲದ ಪ್ರತಿಭಾವಂತ ಸಂಗೀತ ನಿರ್ದೇಶಕ ಸ್ಟೀವ್ ಕೊಟ್ಟೂರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇವರು ಈ ಹಿಂದೆ 'ದುರಂಧರ್' ಮತ್ತು 'ದುರಂಧರ್ 2' ಚಿತ್ರಗಳಿಗೆ ಕೆಲಸ ಮಾಡಿದ್ದರು. ಜೊತೆಗೆ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ನಿರ್ದೇಶನದ ವೆಬ್ ಸರಣಿ 'ಬಾ*ಡ್ಸ್ ಆಫ್ ಬಾಲಿವುಡ್'ನ ಸಂಗೀತ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಮಲಯಾಳಂ ಚಿತ್ರರಂಗಕ್ಕೆ ಜೆಪಿ ತುಮ್ಮಿನಾಡು ಎಂಟ್ರಿ; ಮಂಜು ವಾರಿಯರ್ ಜೊತೆ ʻಸು ಫ್ರಮ್ ಸೋʼ ನಟನ ಜುಗಲ್‌ಬಂದಿ!
ಸದ್ಯ ಟೈಟಲ್ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಚಿತ್ರದ ಪ್ರಮುಖ ತಾರಾಗಣ ಹಾಗೂ ಇತರೆ ತಾಂತ್ರಿಕ ವರ್ಗದ ಕುರಿತು ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ.
'ಸರ್ವಂ ಮಾಯಾ' ಮೂಲಕ ಭರ್ಜರಿ ಗೆಲುವು ಕಂಡಿರುವ ನಿವಿನ್
ಈಚೆಗೆ ಬಂದ ನಿವಿನ್ ಪೌಲಿ ಅವರ 'ಸರ್ವಂ ಮಾಯಾ' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಯಶಸ್ಸಿಗಾಗಿ ಕಾಯುತ್ತಿದ್ದ ನಿವಿನ್ ಪೌಲಿ ಅವರಿಗೆ ಈ ಸಿನಿಮಾ ಭರ್ಜರಿ ಕಮ್‌ಬ್ಯಾಕ್ ತಂದುಕೊಟ್ಟಿತು. ಈ ಚಿತ್ರದ ಯಶಸ್ಸು ನಿವಿನ್ ಪೌಲಿ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ನೀಡಿದ್ದಲ್ಲದೆ, ಅವರ ಮುಂದಿನ 50ನೇ ಚಿತ್ರವಾದ 'ವಿಜಯಂ' ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.