ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುಕೆ, ಕೆನಡಾ, ಸಿಂಗಾಪುರಕ್ಕೆ ಜಿಯೋಹಾಟ್‌ಸ್ಟಾರ್‌ ಲಗ್ಗೆ: ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸ್ಟ್ರೀಮಿಂಗ್‌ ಕ್ರಾಂತಿ

ಜಿಯೋಹಾಟ್‌ಸ್ಟಾರ್‌ ಸ್ಟ್ರೀಮಿಂಗ್ ವೇದಿಕೆ ಯುಕೆ, ಕೆನಡಾ ಮತ್ತು ಸಿಂಗಾಪುರ ದೇಶಗಳಿಗೆ ಅಧಿಕೃತವಾಗಿ ವಿಸ್ತರಣೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. 12ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 1.60 ಲಕ್ಷ ಗಂಟೆಗಳ ಭಾರತೀಯ ಕಾರ್ಯಕ್ರಮಗಳನ್ನು ಹೊತ್ತು ತಂದಿದೆ.

ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಯೋಹಾಟ್‌ಸ್ಟಾರ್‌

-

Avinash GR
Avinash GR Sep 3, 2026 1:34 PM

ಪ್ರಮುಖ ಮನರಂಜನಾ ಸ್ಟ್ರೀಮಿಂಗ್ ವೇದಿಕೆಯಾದ ಜಿಯೋಹಾಟ್‌ಸ್ಟಾರ್‌ ತನ್ನ ಕಾರ್ಯವ್ಯಾಪ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ್ದು, ಯುನೈಟೆಡ್ ಕಿಂಗ್‌ಡಮ್ (ಯುಕೆ), ಕೆನಡಾ ಮತ್ತು ಸಿಂಗಾಪುರಗಳಲ್ಲಿ ಅಧಿಕೃತವಾಗಿ ಸೇವೆ ಆರಂಭಿಸಿದೆ. ಜಾಗತಿಕ ವೇದಿಕೆಯಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆಯಿಟ್ಟಿರುವ ಜಿಯೋಹಾಟ್‌ಸ್ಟಾರ್‌, ಈ ಮೂರು ದೇಶಗಳ ವೀಕ್ಷಕರಿಗೆ 12ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 1.60 ಲಕ್ಷಕ್ಕೂ ಅಧಿಕ ಗಂಟೆಗಳ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ಉಣಬಡಿಸಲು ಸಜ್ಜಾಗಿದೆ.

ಟೆಲಿವಿಷನ್ ಧಾರಾವಾಹಿಗಳು, ಬ್ಲಾಕ್‌ಬಸ್ಟರ್ ಸಿನಿಮಾಗಳು, ಪ್ರಾದೇಶಿಕ ಕಂಟೆಂಟ್, ನಾನ್-ಫಿಕ್ಷನ್, ಮಕ್ಕಳ ಕಾರ್ಯಕ್ರಮಗಳು ಹಾಗೂ ಅನಿಮೆ ಸೇರಿದಂತೆ ಅಪಾರ ಪ್ರಮಾಣದ ಭಾರತೀಯ ಕಂಟೆಂಟ್ ಇದರಲ್ಲಿ ಲಭ್ಯವಿರಲಿದ್ದು, ಪ್ರತಿವರ್ಷ 30,000 ಗಂಟೆಗಳ ಹೊಸ ವಿಷಯಗಳನ್ನು ಸೇರ್ಪಡೆಗೊಳಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಲೈವ್ ಮ್ಯಾಚ್‌ ನೋಡುತ್ತಲೇ ಮಾಡಿ ಫುಡ್‌ ಆರ್ಡರ್‌! ಸ್ಟ್ರೀಮಿಂಗ್ ಲೋಕದಲ್ಲಿ ಜಿಯೋಹಾಟ್‌ಸ್ಟಾರ್-ಸ್ವಿಗ್ಗಿ ಕ್ರಾಂತಿ

ಮೊದಲ ಬಾರಿಗೆ ಲೈವ್ ವೋಟಿಂಗ್

ಅಂತರರಾಷ್ಟ್ರೀಯ ವೀಕ್ಷಕರನ್ನು ಸೆಳೆಯಲು ಹಲವು ವಿನೂತನ ಮತ್ತು ಸಂವಾದಾತ್ಮಕ ವೈಶಿಷ್ಟ್ಯಗಳನ್ನು ಜಿಯೋಹಾಟ್‌ಸ್ಟಾರ್‌ ಪರಿಚಯಿಸಿದೆ. ಪ್ರಮುಖವಾಗಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಆರು ಭಾಷೆಗಳಲ್ಲಿ ಪ್ರಸಾರವಾಗಲಿದ್ದು, ಯುಕೆ, ಕೆನಡಾ ಮತ್ತು ಸಿಂಗಾಪುರದ ವೀಕ್ಷಕರು ಇದೇ ಮೊದಲ ಬಾರಿಗೆ ಲೈವ್ ವೋಟಿಂಗ್ ಮೂಲಕ ಆಟದ ಮೇಲೆ ನೇರ ಪ್ರಭಾವ ಬೀರುವ ಅವಕಾಶ ಪಡೆದುಕೊಂಡಿದ್ದಾರೆ.

ಇದರೊಂದಿಗೆ ಕೆನಡಾ ಮತ್ತು ಯುಕೆ ಬಳಕೆದಾರರಿಗೆ 24x7 ಲೈವ್ ಫೀಡ್ ಸೌಲಭ್ಯ ದೊರೆಯಲಿದ್ದು, ಕೆನಡಾದ ವೀಕ್ಷಕರು 'ಬಿಗ್ ಬಾಸ್ ಹಿಂದಿ' ಸಂಚಿಕೆಗಳನ್ನು ಟಿವಿ ಪ್ರಸಾರಕ್ಕಿಂತ 7 ದಿನಗಳ ಮುಂಚಿತವಾಗಿಯೇ ವೀಕ್ಷಿಸಬಹುದಾಗಿದೆ. ಇದಲ್ಲದೆ, ನಟ ಅನಿಲ್ ಕಪೂರ್ ನಡೆಸಿಕೊಡುವ 'ಇಂಡಿಯಾ ಕಾ ಟಾಪ್ 1 ಪರ್ಸೆಂಟ್' ಎಂಬ ವಿನೂತನ ಗೇಮ್ ಶೋ ಕೆನಡಾ ಮತ್ತು ಸಿಂಗಾಪುರದಲ್ಲಿ ಪ್ರಸಾರವಾಗಲಿದೆ.

ಟಿವಿಗಿಂತ ಮೊದಲೇ ವೀಕ್ಷಣೆ

ಜಿಯೋಸ್ಟಾರ್ ನೆಟ್‌ವರ್ಕ್‌ನ ಸ್ಟಾರ್ ಪ್ಲಸ್, ಕಲರ್ಸ್, ಸ್ಟಾರ್ ವಿಜಯ್, ಏಷ್ಯಾನೆಟ್, ಸ್ಟಾರ್ ಜಲ್ಶಾ ಹಾಗೂ ಸ್ಟಾರ್ ಪ್ರವಾಹ್‌ನಂತಹ ಪ್ರಮುಖ ವಾಹಿನಿಗಳ ಧಾರಾವಾಹಿಗಳು ಜಾಗತಿಕ ವೀಕ್ಷಕರಿಗೆ ಲಭ್ಯವಾಗಲಿವೆ. 'ಅನುಪಮಾ', 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ಟಿವಿಗಿಂತ ಮೊದಲೇ ಕೆನಡಾ ಮತ್ತು ಸಿಂಗಾಪುರದ ಚಂದಾದಾರರು ವೀಕ್ಷಿಸಬಹುದಾಗಿದ್ದು, ಯುಕೆಯಲ್ಲಿ ಟಿವಿ ಜೊತೆಯಲ್ಲೇ ಏಕಕಾಲದಲ್ಲಿ ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಇವುಗಳ ಜೊತೆಗೆ 'ಅಲಿ ಬಾಬಾ ಔರ್ ಚಾಲೀಸ್ ಭೂತ್', 'ದಿ ಕೋರ್ಟ್' ಮುಂತಾದ ಹೊಸ ಒರಿಜಿನಲ್ಸ್ ಹಾಗೂ 'ಕ್ರಿಮಿನಲ್ ಜಸ್ಟೀಸ್', 'ಸ್ಪೆಷಲ್ ಆಪ್ಸ್', 'ಅಸುರ್', 'ಆರ್ಯ' ಸೇರಿದಂತೆ ಜನಪ್ರಿಯ ಸರಣಿಗಳು, 'ಕಾಫಿ ವಿತ್ ಕರಣ್', 'ಖತ್ರೋನ್ ಕೆ ಖಿಲಾಡಿ'ಯಂತಹ ರಿಯಾಲಿಟಿ ಶೋಗಳು ಮತ್ತು '12th ಫೇಲ್', 'ಕಿಲ್' ಮುಂತಾದ ಹಿಟ್ ಚಿತ್ರಗಳ ಬೃಹತ್ ಸಂಗ್ರಹವೇ ವೀಕ್ಷಕರಿಗೆ ಸಿಗಲಿದೆ.

ಬಳಕೆದಾರರ ಅನುಕೂಲಕ್ಕಾಗಿ ಮೊಬೈಲ್ ಮತ್ತು ಕನೆಕ್ಟೆಡ್ ಟಿವಿ ಎರಡರಲ್ಲೂ ಈ ಆ್ಯಪ್ ಲಭ್ಯವಿದ್ದು, ವಾರ್ಷಿಕ ಚಂದಾದಾರಿಕೆಯ ಜೊತೆಗೆ ಹೊಸದಾಗಿ ತ್ರೈಮಾಸಿಕ (ಮೂರು ತಿಂಗಳ) ಯೋಜನೆಗಳನ್ನು ಪರಿಚಯಿಸಲಾಗಿದೆ. ಯುಕೆಯಲ್ಲಿ ತ್ರೈಮಾಸಿಕಕ್ಕೆ £19.99 ಹಾಗೂ ವಾರ್ಷಿಕಕ್ಕೆ £69.99, ಕೆನಡಾದಲ್ಲಿ ತ್ರೈಮಾಸಿಕಕ್ಕೆ CAD 19.99 ಹಾಗೂ ವಾರ್ಷಿಕಕ್ಕೆ CAD 49.99, ಮತ್ತು ಸಿಂಗಾಪುರದಲ್ಲಿ ತ್ರೈಮಾಸಿಕಕ್ಕೆ SGD 29.98 ಹಾಗೂ ವಾರ್ಷಿಕಕ್ಕೆ SGD 69.98 ದರ ನಿಗದಿಪಡಿಸಲಾಗಿದೆ. ಹಾಲಿ ಹಾಟ್‌ಸ್ಟಾರ್ ಚಂದಾದಾರರು ಯಾವುದೇ ಅಡಚಣೆಯಿಲ್ಲದೆ ತಮ್ಮ ಹಳೆಯ ಲಾಗಿನ್ ವಿವರಗಳ ಮೂಲಕವೇ ಜಿಯೋಹಾಟ್‌ಸ್ಟಾರ್‌ಗೆ ಸ್ವಯಂಚಾಲಿತವಾಗಿ ಅಪ್‌ಗ್ರೇಡ್ ಆಗಬಹುದಾಗಿದೆ.

ಜಿಯೋಸ್ಟಾರ್‌ ಹೇಳೋದೇನು?

ಆಧುನಿಕ ಬಳಕೆದಾರ ಇಂಟರ್‌ಫೇಸ್ (UI/UX), ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಯಕ್ತಿಕ ಶಿಫಾರಸುಗಳು ಮತ್ತು ಕನ್ನಡ, ಹಿಂದಿ, ಮಲಯಾಳಂ, ಇಂಗ್ಲಿಷ್ ಸೇರಿದಂತೆ 12ಕ್ಕೂ ಹೆಚ್ಚು ಭಾಷೆಗಳಲ್ಲಿ ಅತ್ಯುತ್ತಮ ಸಬ್‌ಟೈಟಲ್ಸ್ ಹಾಗೂ ಡಬ್ಬಿಂಗ್ ಸೌಲಭ್ಯವನ್ನು ವೇದಿಕೆ ಒಳಗೊಂಡಿದೆ. ಭಾರತೀಯ ಸ್ಟ್ರೀಮಿಂಗ್ ಸೇವೆಯನ್ನು ಕೇವಲ ರಫ್ತು ಮಾಡುವುದಷ್ಟೇ ತಮ್ಮ ಉದ್ದೇಶವಲ್ಲ, ಬದಲಾಗಿ ಜಾಗತಿಕವಾಗಿರುವ ದಕ್ಷಿಣ ಏಷ್ಯಾದ ವಲಸಿಗರನ್ನು ಹಾಗೂ ವೈವಿಧ್ಯಮಯ ಕಥೆಗಳನ್ನು ಬಯಸುವ ಅಂತಾರಾಷ್ಟ್ರೀಯ ವೀಕ್ಷಕರನ್ನು ಒಂದೇ ಸೂರಿನಡಿ ತರುವುದು ಮತ್ತು ಮನರಂಜನೆಯ ಅನುಭವವನ್ನೇ ಮರುರೂಪಿಸುವುದು ತಮ್ಮ ಗುರಿ ಎಂದು ಜಿಯೋಸ್ಟಾರ್‌ನ ಅಂತರರಾಷ್ಟ್ರೀಯ ವ್ಯವಹಾರ ಮುಖ್ಯಸ್ಥ ಅಮಿತ್ ಮಲ್ಹೋತ್ರಾ ತಿಳಿಸಿದ್ದಾರೆ.