ಸಿಬ್ಬಂದಿ ಅಸ್ವಸ್ಥ: ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಮಾರ್ಗ ಬದಲಾವಣೆ
IndiGo Flight Diverted: ಕತಾರ್‌ನ ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ಓಮನ್‌ನ ಮಸ್ಕತ್‌ಗೆ ಮಾರ್ಗ ಬದಲಿಸಲಾಯಿತು. ಬೆಂಗಳೂರಿಗೆ ಪ್ರಯಾಣವನ್ನು ಮುಂದುವರಿಸಲು ಪರ್ಯಾಯ ವಿಮಾನ ಮತ್ತು ಹೊಸ ಸಿಬ್ಬಂದಿ ವರ್ಗದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ದೋಹಾ, ಸೆ.3: ಕತಾರ್‌ನ ದೋಹಾ (Doha) ದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು (IndiGo Flight) ಓಮನ್‌ನ (Oman) ಮಸ್ಕತ್‌ಗೆ ಮಾರ್ಗ ಬದಲಿಸಲಾಯಿತು. ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಬೇಕಾಗಿದ್ದರಿಂತ ವಿಮಾನವನ್ನು ಮಸ್ಕತ್‌ಗೆ ತಿರುಗಿಸಲಾಯಿತು. ಅಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಯಿತು.
“ಬೆಂಗಳೂರಿಗೆ ಪ್ರಯಾಣವನ್ನು ಮುಂದುವರಿಸಲು ಪರ್ಯಾಯ ವಿಮಾನ ಮತ್ತು ಹೊಸ ಸಿಬ್ಬಂದಿ ವರ್ಗದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಮಸ್ಕತ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿರುವ ಅವರಿಗೆ ಉಪಾಹಾರ ಹಾಗೂ ಮಾಹಿತಿಗಳನ್ನು ಒದಗಿಸುವುದು ಸೇರಿದಂತೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಯೇ ಇಂಡಿಗೋ (IndiGo) ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ” ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಅಮೃತಸರ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ 18 ಗಂಟೆ ವಿಳಂಬ
ಪಂಜಾಬ್‌ನ ಅಮೃತಸರದಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ ಸುಮಾರು 17-18 ಗಂಟೆಗಳ ಕಾಲ ವಿಳಂಬವಾಗಿದ್ದ ಘಟನೆ ಆಗಸ್ಟ್ 30 ರಂದು ನಡೆದಿತ್ತು. ಪ್ರಯಾಣಿಕರು ಬಿಸಿಲಿನಲ್ಲೇ ವಿಮಾನ ನಿಲ್ದಾಣದಲ್ಲಿ ಕಾದಿದ್ದರು. ಅಮೃತಸರದ ಶ್ರೀ ಗುರು ರಾಮ್‌ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವು ಆರಂಭದಲ್ಲಿ ಬೆಳಗ್ಗೆ 8 ಗಂಟೆಗೆ ಹೊರಡುವ ನಿರೀಕ್ಷೆಯಿತ್ತು. ನಂತರ ನಿರ್ಗಮನ ಸಮಯವನ್ನು ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. ಬಳಿಕ ಮರುದಿನ ಬೆಳಗಿನ ಜಾವ 2 ಗಂಟೆಗೆ ಹೊರಡಲಿದೆ ಎಂದು ತಿಳಿಸಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದರು.
ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ದೋಷ; ತುರ್ತು ಭೂಸ್ಪರ್ಶ
ದೀರ್ಘ ವಿಳಂಬಕ್ಕೆ ಸ್ಪಷ್ಟ ವಿವರಣೆ ನೀಡಲಾಗಿಲ್ಲ. ಕಾಯುವ ಸಮಯದಲ್ಲಿ ವಿಮಾನಯಾನ ಸಿಬ್ಬಂದಿ ಸಹಕಾರ ನೀಡಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದರು. ಕೆಲವು ಪ್ರಯಾಣಿಕರು ತಮಗೆ ಹೋಟೆಲ್ ಅಥವಾ ಪರ್ಯಾಯ ಪ್ರಯಾಣ ವ್ಯವಸ್ಥೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಹೇಳಿದ್ದರು.
ಫಾಗ್ವಾರಾದಿಂದ ದುಬೈಗೆ ಪ್ರಯಾಣಿಸುತ್ತಿದ್ದ ದೀಪಕ್ ಕುಮಾರ್ ಎಂಬುವವರು ತಮ್ಮ ಭಯಾನಕ ಅನುಭವ ಬಿಚ್ಚಿಟ್ಟಿದ್ದರು. ವಿಮಾನಕ್ಕಾಗಿ ಅಮೃತಸರ ಏರ್‌ಪೋರ್ಟ್ ತಲುಪಲು ಸುಮಾರು 250 ಕಿಲೋ ಮೀಟರ್ ಪ್ರಯಾಣಿಸಿದ್ದಾಗಿ ಹೇಳಿದರು. ಕುಮಾರ್ ಅವರ ವಿಮಾನವು ಬೆಳಗ್ಗೆ 8:40ಕ್ಕೆ ನಿಗದಿಯಾಗಿತ್ತು. ನಂತರ ನಿರ್ಗಮನವನ್ನು ಬೆಳಗ್ಗೆ 11 ಗಂಟೆಗೆ ಮತ್ತು ನಂತರ 2:30ಕ್ಕೆ ಬದಲಾಯಿಸಲಾಯಿತು. ಪರಿಷ್ಕೃತ ನಿರ್ಗಮನ ಸಮಯವನ್ನು ಸಹ ದೃಢೀಕರಿಸಲಾಗಿಲ್ಲ ಎಂದು ಅವರು ಹೇಳಿದ್ದರು.
ವಿಮಾನಯಾನ ಸಂಸ್ಥೆಯ ಸಹಾಯವಾಣಿಯು ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಗಿದೆ ಎಂದು ತಿಳಿಸಲಾಗಿತ್ತು. ವಿಮಾನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುವ ತಾಂತ್ರಿಕ ಸಮಸ್ಯೆ ಇದ್ದಾಗ, ಪ್ರಯಾಣಿಕರಿಗೆ ಮೊದಲೇ ಏಕೆ ಎಚ್ಚರಿಕೆ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದ್ದರು.