ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಕನ್ನಡದ ʼಶಿವಮಣಿʼ ಡ್ರಮ್ಮರ್ ದೇವ ನಿಧನ

ಕನ್ನಡದ ಶಿವಮಣಿ ಎಂದೇ ಪ್ರಖ್ಯಾತರಾಗಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ವಾದ್ಯಗಾರ ಡ್ರಮ್ಮರ್ ದೇವ ಅವರು ತೀವ್ರ ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕಳೆದ ಜೂನ್‌ ತಿಂಗಳಿನಲ್ಲಿ ಡ್ರಮ್ಮರ್ ದೇವ ಸ್ಟ್ರೋಕ್‌ಗೆ ಒಳಗಾಗಿದ್ದರು. ಆನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಕನ್ನಡದ ʼಶಿವಮಣಿʼ ಡ್ರಮ್ಮರ್ ದೇವ ನಿಧನ

ಡ್ರಮ್ಮರ್‌ ದೇವ -

Vishakha Bhat Heggar
Vishakha Bhat Heggar Sep 27, 2026 9:04 AM

ಬೆಂಗಳೂರು: ಕನ್ನಡದ ಶಿವಮಣಿ ಎಂದೇ ಪ್ರಖ್ಯಾತರಾಗಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ವಾದ್ಯಗಾರ ಡ್ರಮ್ಮರ್ ದೇವ (Drummer Deva) ಅವರು ತೀವ್ರ ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕಳೆದ ಜೂನ್‌ ತಿಂಗಳಿನಲ್ಲಿ ಡ್ರಮ್ಮರ್ ದೇವ ಸ್ಟ್ರೋಕ್‌ಗೆ ಒಳಗಾಗಿದ್ದರು. ಆನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಗ್ಯಾಂಗ್ರೀನ್ ನಿಂದಾಗಿ ಡ್ರಮ್ಮರ್ ದೇವ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ನಂತರ ಸ್ಟ್ರೋಕ್‌ನ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಜನಿಸಿದ ದೇವ್ ಅವರು, ಆರಂಭದಲ್ಲಿ ಕೇವಲ ಡ್ರಮ್ ಒರೆಸುವ ಕೆಲಸ ಮಾಡುತ್ತಿದ್ದರು. ಆದರೆ ಸಂಗೀತದ ಮೇಲಿನ ಅಪಾರ ಆಸಕ್ತಿಯಿಂದ ಡ್ರಮ್ಸ್ ನುಡಿಸುವುದನ್ನು ಕಲಿತು ದೊಡ್ಡ ಮಟ್ಟದ ಕಲಾವಿದರಾಗಿ ಬೆಳೆದರು. ಇವರ ಪ್ರತಿಭೆಯನ್ನು ಗುರುತಿಸಿದ ನಟ ಶಂಕರ್ ನಾಗ್ ಅವರು ತಮ್ಮ ಸಂಕೇತ್ ಸ್ಟುಡಿಯೋ ಮೂಲಕ ಇವರನ್ನು ಮದ್ರಾಸ್‌ನಿಂದ ಬೆಂಗಳೂರಿಗೆ ಕರೆತಂದರು.

ದೇವ್ ಅವರು ಕನ್ನಡ ಸೇರಿದಂತೆ ವಿವಿಧ ಭಾಷೆಗಳ 800ಕ್ಕೂ ಹೆಚ್ಚು ಚಲನಚಿತ್ರಗಳ ಹಾಡುಗಳಿಗೆ ಡ್ರಮ್ಸ್ ನುಡಿಸಿದ್ದಾರೆ. ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ಪ್ರಸಿದ್ಧ ನಟರ ನೂರಾರು ಸೂಪರ್ ಹಿಟ್ ಹಾಡುಗಳಿಗೆ ಇವರದ್ದೇ ಡ್ರಮ್ಸ್ ಬೀಟ್ಸ್ ನುಡಿಸಿದ್ದಾರೆ. ಇಳಯರಾಜ, ಹಂಸಲೇಖ, ಸಾಧು ಕೋಕಿಲ, ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್, ಗುರುಕಿರಣ್ ಹಾಗೂ ವಿ. ಮನೋಹರ್ ಅವರಂತಹ ದಿಗ್ಗಜ ಸಂಗೀತ ನಿರ್ದೇಶಕರ ತಂಡಗಳಲ್ಲಿ ಪ್ರಮುಖ ಡ್ರಮ್ಮರ್ ಆಗಿ ದೇವ್ ಕೆಲಸ ಮಾಡಿದ್ದರು.

ಆರ್‌ಸಿಬಿ ಅಭಿಮಾನಿ

ಆರ್‌ಸಿಬಿ ಅಭಿಮಾನಿಯಾಗಿದ್ದ ದೇವ್‌, ಐಪಿಎಲ್ ಕ್ರಿಕೆಟ್ ಟೂರ್ನಿಗಳ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳಲ್ಲಿ ತಮ್ಮ ಲೈವ್ ಡ್ರಮ್ ಬೀಟ್ಸ್ ಮೂಲಕ ಇಡೀ ಕ್ರೀಡಾಂಗಣದ ಅಭಿಮಾನಿಗಳಲ್ಲಿ ಉತ್ಸಾಹವನ್ನು ತುಂಬುತ್ತಿದ್ದರು.