Vishnuvardhan Amrutha Mahotsava: ಇಂದು ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಆಚರಣೆ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Vishnuvardhan: ಕನ್ನಡ ಚಿತ್ರರಂಗದ ಅಪ್ರತಿಮ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಅಮೃತ ಮಹೋತ್ಸವವನ್ನು ಇಂದು (ಸೆಪ್ಟೆಂಬರ್ 27) ಬೆಂಗಳೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅತ್ಯಂತ ಅದ್ದೂರಿಯಾಗಿ ಆಯೋಜಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಅಮೃತ ಮಹೋತ್ಸವದ ಕಾರ್ಯಕ್ರಮಗಳು ರಾತ್ರಿ 12 ಗಂಟೆಯವರೆಗೆ ನಿರಂತರವಾಗಿ ನಡೆಯಲಿದ್ದು, ದಿನವಿಡೀ ವಿವಿಧ ಸಾಂಸ್ಕೃತಿಕ, ಸಂಗೀತ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ಡಾ. ವಿಷ್ಣುವರ್ಧನ್ ಅವರ ಕಲಾ ಬದುಕು, ವ್ಯಕ್ತಿತ್ವ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತದೆ.
ವಿಷ್ಣುವರ್ಧನ್ ಅಮೃತ ಮಹೋತ್ಸವ -
ಕನ್ನಡ ಚಿತ್ರರಂಗದ ಅಪ್ರತಿಮ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಅಮೃತ ಮಹೋತ್ಸವವನ್ನು ಇಂದು (ಸೆಪ್ಟೆಂಬರ್ 27) ಬೆಂಗಳೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅತ್ಯಂತ ಅದ್ದೂರಿಯಾಗಿ ಆಯೋಜಿಸಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಅಮೃತ ಮಹೋತ್ಸವದ ಕಾರ್ಯಕ್ರಮಗಳು ರಾತ್ರಿ 12 ಗಂಟೆಯವರೆಗೆ ನಿರಂತರವಾಗಿ ನಡೆಯಲಿದ್ದು, ದಿನವಿಡೀ ವಿವಿಧ ಸಾಂಸ್ಕೃತಿಕ, ಸಂಗೀತ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ಡಾ. ವಿಷ್ಣುವರ್ಧನ್ ಅವರ ಕಲಾ ಬದುಕು, ವ್ಯಕ್ತಿತ್ವ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತದೆ.
ಕಾರ್ಯಕ್ರಮದ ಮೊದಲ ಆಕರ್ಷಣೆಯಾಗಿ ಬೆಳಿಗ್ಗೆ 6 ಗಂಟೆಗೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಆರಂಭವಾಗಿದೆ. ನಟರು, ಕಲಾವಿದರು ಹಾಗೂ ಡಾ. ವಿಷ್ಣು ಸೇನಾ ಸಮಿತಿಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ಕನ್ನಡ ಧ್ವಜವನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಲಾಗುವುದು. ಮೆರವಣಿಗೆಯು ಬೆಳಿಗ್ಗೆ ಸುಮಾರು 7.30ರ ವೇಳೆಗೆ ನಂದಿ ಲಿಂಕ್ ಗ್ರೌಂಡ್ ತಲುಪಿದೆ.
ನಂತರ ಬೆಳಿಗ್ಗೆ 9.30ಕ್ಕೆ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಶ್ರೀನಾಥ್, ಡಾ. ರಮೇಶ್ ಅರವಿಂದ್, ಶ್ರುತಿ, ಡಾ. ಜಯಮಾಲಾ, ಅವಿನಾಶ್, ಮಾಳವಿಕಾ ಅವಿನಾಶ್, ಎಸ್. ನಾರಾಯಣ್, ರಾಜೇಂದ್ರ ಸಿಂಗ್ ಬಾಬು, ಡಾ. ಸುಂದರರಾಜ್, ಅಭಿಜಿತ್, ಸಿಹಿಕಹಿ ಚಂದ್ರು, ಶ್ರೀಮುರಳಿ, ರಮೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದ ನಂತರ ಬೆಳಿಗ್ಗೆ 11 ಗಂಟೆಯವರೆಗೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ನೇತೃತ್ವದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅದಾದ ಬಳಿಕ ‘ಸಂಪಾದಕರ ಕಣ್ಣಲ್ಲಿ ವಿಷ್ಣುವರ್ಧನ್’ ಎಂಬ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಡಿನ ವಿವಿಧ ಪತ್ರಿಕೆಗಳು ಹಾಗೂ ವಾಹಿನಿಗಳ ಸಂಪಾದಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಾ. ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಒಡನಾಟ, ನೆನಪುಗಳು ಮತ್ತು ವೃತ್ತಿಜೀವನದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವದ ಅಂಗವಾಗಿ 75 ಕಲಾವಿದರನ್ನು ವಿಶೇಷವಾಗಿ ಅಭಿನಂದಿಸಿ ಗೌರವಿಸಲಾಗುವುದು. ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಹಿರಿಯ ಹಾಗೂ ವಿವಿಧ ಕ್ಷೇತ್ರಗಳ ಕಲಾವಿದರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.
ಇದನ್ನೂ ಓದಿ: BiggBoss Kannada Season 13: ಕಿಚ್ಚ ಸುದೀಪ್ 30 ವರ್ಷಗಳ ಸಿನಿ ಪಯಣಕ್ಕೆ ಬಿಗ್ಬಾಸ್ ಭರ್ಜರಿ ಸರ್‌ಪ್ರೈಸ್
ಪ್ರಮುಖ ವೇದಿಕೆ ಕಾರ್ಯಕ್ರಮ ಆರಂಭ
ಸಂಜೆ 5 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಮುಖ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಡಾ. ಶಿವರಾಜ್‌ಕುಮಾರ್, ಡಾ. ರವಿಚಂದ್ರನ್, ಕಿಚ್ಚ ಸುದೀಪ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ನೀನಾಸಂ ಸತೀಶ್, ನೆನಪಿರಲಿ ಪ್ರೇಮ್, ಡಾ. ಶ್ರುತಿ, ಡಾ. ಜಯಮಾಲಾ, ಶ್ರೀನಗರ ಕಿಟ್ಟಿ, ರಚಿತಾ ರಾಮ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಭಾಗವಹಿಸಿ ವೇದಿಕೆಯನ್ನು ಅಲಂಕರಿಸಲಿದ್ದಾರೆ.
ಸಂಜೆ 7 ಗಂಟೆಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಸಿಷ್ಠ ಸಿಂಹ, ನವೀನ್ ಕೃಷ್ಣ, ಕಾರುಣ್ಯ ರಾಮ್, ಯಮುನಾ ಶ್ರೀನಿಧಿ ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ಡಾ. ವಿಷ್ಣುವರ್ಧನ್ ಅಭಿನಯದ ಚಿತ್ರಗಳ ಜನಪ್ರಿಯ ಗೀತೆಗಳಿಗೆ ನೃತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳನ್ನು ನೀಡಲಿದ್ದಾರೆ.
ಅಮೃತ ಮಹೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ರಾತ್ರಿ 10 ಗಂಟೆಗೆ ‘ದಾದಾ DJ’ ಎಂಬ ವಿಶೇಷ ನೃತ್ಯ ರೂಪಕ ಆಯೋಜಿಸಲಾಗಿದೆ. ಡಾ. ವಿಷ್ಣುವರ್ಧನ್ ಅವರ ಜನಪ್ರಿಯ ಗೀತೆಗಳಿಗೆ ಸಾವಿರಾರು ಅಭಿಮಾನಿಗಳು ಏಕಕಾಲದಲ್ಲಿ ಹೆಜ್ಜೆ ಹಾಕುವ ಮೂಲಕ ಈ ಅಮೃತ ಮಹೋತ್ಸವಕ್ಕೆ ಅದ್ದೂರಿ ತೆರೆ ಬೀಳಲಿದೆ.
ಕಾರ್ಯಕ್ರಮದ ಅಂಗವಾಗಿ ಅಭಿಮಾನಿಗಳಿಗಾಗಿ ಹಲವು ವಿಶೇಷ ಆಕರ್ಷಣೆಗಳನ್ನು ಕೂಡ ಸಿದ್ಧಪಡಿಸಲಾಗಿದೆ. ಪೋಸ್ಟರ್ ತೋಟ, ಪೋಸ್ಟರ್ ಗ್ಲೋಬ್, ಡಾ. ವಿಷ್ಣುವರ್ಧನ್ ಫೋಟೋ ಗ್ಯಾಲರಿ, ಆಕಾಶ ಬುಟ್ಟಿಯಲ್ಲಿ ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು ವಿಶೇಷ ದೃಶ್ಯ ಹಾಗೂ ಕಲಾ ಆಕರ್ಷಣೆಗಳು ಸಮಾರಂಭದ ಮೆರುಗನ್ನು ಹೆಚ್ಚಿಸಲಿವೆ.
ಈ ಅದ್ದೂರಿ ಅಮೃತ ಮಹೋತ್ಸವಕ್ಕೆ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಇಡೀ ಕಾರ್ಯಕ್ರಮದ ನೇತೃತ್ವವನ್ನು ಡಾ. ವಿಷ್ಣು ಸೇನಾ ಸಮಿತಿ ವಹಿಸಿಕೊಂಡಿದ್ದು, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವೀರಕಪುತ್ರ ಶ್ರೀನಿವಾಸ್ ಅವರು ವಹಿಸಿಕೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಾರ್ಮಿಕರ ಕೂಟ ಹಾಗೂ ಕಲಾವಿದರ ಸಂಘ ಸೇರಿದಂತೆ ಕನ್ನಡ ಚಿತ್ರರಂಗದ ವಿವಿಧ ಸಂಘಟನೆಗಳು ಈ ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಕನ್ನಡದ ʼಶಿವಮಣಿʼ ಡ್ರಮ್ಮರ್ ದೇವ ನಿಧನ
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ — ಅಭಿಮಾನಿಗಳ ಪಾಲಿಗೆ ಇದು ಕೇವಲ ಒಂದು ಕಾರ್ಯಕ್ರಮವಲ್ಲ; ತಮ್ಮ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುವ, ಗೌರವಿಸುವ ಮತ್ತು ಸಂಭ್ರಮಿಸುವ ಒಂದು ಐತಿಹಾಸಿಕ ದಿನವಾಗಲಿದೆ.