ವಿಶ್ವಸಂಸ್ಥೆಯಲ್ಲಿ ಉಗ್ರಪೋಷಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತ; ವಿದೇಶಾಂಗ ಸಚಿವರು ಹೇಳಿದ್ದೇನು?
ನಿರಂತರವಾಗಿ ಭಯೋತ್ಪಾದನೆಯನ್ನು ಪೋಷಿಸಿ ಅದು ಸಹಜ ಎನ್ನುವ ವಾದ ಮಂಡನೆ ಮಾಡುತ್ತಿರುವ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಮ್ಮ ಭಾಷಣದಲ್ಲಿ ವಾಸ್ತವಾಂಶಗಳನ್ನು ಮರೆ ಮಾಡಿದ್ದಾರೆ ಎಂದು ಹೇಳಿದರು.
ಸಂಗ್ರಹ ಚಿತ್ರ -
ನವದೆಹಲಿ: ಭಯೋತ್ಪಾದನೆಯನ್ನು ಸಹಜವೆಂದು ವಾದ ಮಂಡಿಸುತ್ತಿರುವ ದೇಶ ನಿರಂತರವಾಗಿ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದಲ್ಲಿ ಅವರು ಶನಿವಾರ ಮಾತನಾಡಿ ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಅದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನವು ವಾಸ್ತವಾಂಶಗಳನ್ನು ತಪ್ಪಾಗಿ ಬಿಂಬಿಸುತ್ತಿದೆ ಎಂದ ಅವರು, ಆತ್ಮರಕ್ಷಣೆ ಭಾರತದ ಹಕ್ಕು ಎಂದು ಪುನರುಚ್ಚರಿಸಿದರು.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಾಡಿರುವ ಭಾಷಣವನ್ನು ಉಲ್ಲೇಖಿಸಿ ಆ ದೇಶವು ವಾಸ್ತವಾಂಶಗಳನ್ನು ಮರೆ ಮಾಡುತ್ತಿದೆ. ಭಯೋತ್ಪಾದನೆಯ ಚಟುವಟಿಕೆಗಳು ನಿಂತರೆ ಮಾತ್ರ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ಸಾಧ್ಯ ಎಂದು ಅವರು ತಿಳಿಸಿದರು.
ನಿರಂತರವಾಗಿ ಭಯೋತ್ಪಾದನೆಯನ್ನು ಪೋಷಿಸುವ ದೇಶವೊಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಾಸ್ತವಾಂಶಗಳನ್ನು ಮರೆ ಮಾಡಿದೆ. ಭಯೋತ್ಪಾದನೆ ಸಹಜ ಎಂದು ಬಿಂಬಿಸಿ ಅದರ ಪರಿಣಾಮಗಳಿಂದ ನುಣುಚಿಕೊಳ್ಳುವ ವಾದವನ್ನು ಮಾಡಿದೆ. ಆದರೆ ಇದನ್ನು ನಾವು ಮಾನ್ಯ ಮಾಡಲಾಗುವುದಿಲ್ಲ ಎಂದರು.
ಭಯೋತ್ಪಾದನೆಯ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ನಾವು ಚಲಾಯಿಸುತ್ತೇವೆ. ಭಯೋತ್ಪಾದನೆಯೊಂದಿಗೆ ಸ್ನೇಹ ಮತ್ತು ಸೌಹಾರ್ದತೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಪೋಷಿಸುವ ದೇಶವೇ ತನ್ನ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದರು.
ಶಾಂತಿಗೆ ನಿರಂತರ ಬೆದರಿಕೆಯಾಗಿರುವ ಭಯೋತ್ಪಾದನೆ ರಾಷ್ಟ್ರವೊಂದರ ಪ್ರಾಯೋಜಿತ ಕೃತ್ಯವಾಗಿರಬಹುದು. ಇದು ಜಾಗತಿಕ ವ್ಯವಸ್ಥೆಗೆ ನೇರ ಸವಾಲಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನಿಲುವಿನಲ್ಲಿ ಯಾವುದೇ ಸಡಿಲಿಕೆ ಮಾಡಬಾರದು. ಭಯೋತ್ಪಾದನೆಗೆ ಸಂಬಂಧಿಸಿದ ಆರ್ಥಿಕ ಜಾಲಗಳನ್ನು ಬಯಲಿಗೆಳೆಯಬೇಕು ಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದ ಅವರು ಹೇಳಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಳೆದ ಮೇ ತಿಂಗಳಲ್ಲಿ ಭಾರತ ನಡೆಸಿರುವ ಆಪರೇಷನ್ ಸಿಂದೂರ್ ಅನ್ನು ಬಾಹ್ಯ ಆಕ್ರಮಣ ಎಂದು ಬಣ್ಣಿಸಿ ಪಾಕಿಸ್ತಾನದ ಕ್ರಮಗಳು ವಿಶ್ವಸಂಸ್ಥೆಯ ಸನ್ನದಿನ 51ನೇ ವಿಧಿಯ ಅಡಿಯಲ್ಲಿ ತನ್ನ ಆತ್ಮರಕ್ಷಣೆಯಾಗಿದೆ ಎಂದು ಪ್ರತಿಪಾದಿಸಿದರು. ಅಲ್ಲದೇ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಅವರ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿ ಅವರು ಶತ್ರುಗಳ ಬಾಯಿ ಮುಚ್ಚಿಸಿ, ಅವರ ದಾಳಿಗಳನ್ನು ಹಿಮ್ಮೆಟ್ಟಿಸಿದರು ಮತ್ತು ಎಂದಿಗೂ ಮರೆಯಲಾಗದಂತಹ ಪಾಠವನ್ನು ಕಲಿಸಿದರು ಎಂದು ಹೇಳಿದ್ದರು.
ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದ ಕನ್ನಡದ ʼಶಿವಮಣಿʼ ಡ್ರಮ್ಮರ್ ದೇವ ನಿಧನ
ಇದರೊಂದಿಗೆ ಭಾರತದ ದಾಳಿ ತಡೆಯುವಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಗಾಗಿ ಷರೀಫ್ ಅವರಿಗೆ ಧನ್ಯವಾದವನ್ನೂ ಅರ್ಪಿಸಿದರು. ಇದನ್ನು ಬಳಿಕ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಬಳಿಕ ಜೈಶಂಕರ್ ಈ ಹೇಳಿಕೆಗಳನ್ನು ನೀಡಿದ್ದಾರೆ.