Yash: ʻಟಾಕ್ಸಿಕ್ʼ ಪೋಸ್ಟ್‌ಪೋನ್ ಆಗಿದ್ದೇ ತಡ ಆ ಜಾಗಕ್ಕೆ ಬಂದ ʻಮ್ಯಾಂಗೋ ಪಚ್ಚʼ; ರಿಪೀಟ್ ಆಗಲಿದೆಯಾ ʻಲವ್ ಮಾಕ್ಟೇಲ್ 3ʼ ರೀತಿಯ ಮ್ಯಾಜಿಕ್?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಜೂನ್ 4ರಂದು ರಿಲೀಸ್ ಆಗುತ್ತಿಲ್ಲ. ಇದೀಗ ಆ ದಿನಾಂಕವನ್ನು ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಅವರ 'ಮ್ಯಾಂಗೋ ಪಚ್ಚ' ಬಳಸಿಕೊಳ್ಳುತ್ತಿದೆ. ಜೂನ್ 5 ರಂದು ಈ ಸಿನಿಮಾವನ್ನು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅವರ ಟಾಕ್ಸಿಕ್ ಸಿನಿಮಾವು ಮತ್ತೊಮ್ಮೆ ಮುಂದೂಡಿಕೆ ಆಗಿದೆ. ಜೂನ್ 4ರಂದು ತೆರೆಕಾಣಬೇಕಿದ್ದ ಈ ಸಿನಿಮಾವೀಗ ಪೋಸ್ಟ್‌ಪೋನ್ ಆಗಿದ್ದು, ಹೊಸ ರಿಲೀಸ್ ದಿನಾಂಕವು ಇನ್ನಷ್ಟೇ ಘೋಷಣೆ ಆಗಬೇಕಿದೆ. ಟಾಕ್ಸಿಕ್ ಪೋಸ್ಟ್‌ಪೋನ್ ಆಗುತ್ತಿದ್ದಂತೆಯೇ, ಆ ಸ್ಲಾಟ್ ಅನ್ನು ಈಗ ʻಮ್ಯಾಂಗೋ ಪಚ್ಚʼ ಟೀಮ್ ಬಳಸಿಕೊಳ್ಳುತ್ತಿದೆ. ಹೌದು, ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಸಿನಿಮಾವು ಜೂನ್ 5ಕ್ಕೆ ರಿಲೀಸ್ ಆಗುತ್ತಿದೆ.
ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ
ಈಗಾಗಲೇ ಟೀಸರ್ ಮತ್ತು ರೆಟ್ರೋ ಲುಕ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಸಂಚಿತ್‌ರನ್ನು ದೊಡ್ಡ ಪರದೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಹಿರಂಗವಾಗಿದ್ದು ಸಂಚಿತ್ ಮೊದಲ ಬಾರಿಗೆ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾ ʻಮ್ಯಾಂಗೋ ಪಚ್ಚʼ ಮೈಸೂರು ಹಿನ್ನೆಲೆಯ ಕ್ರೈಂ ಥ್ರಿಲ್ಲರ್ ಆಗಿದ್ದು, 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ವಿಶೇಷವೆಂದರೆ, ಸಂಪೂರ್ಣ ಸಿನಿಮಾವು ಕರ್ನಾಟಕದಲ್ಲೇ ಚಿತ್ರೀಕರಣವಾಗಿದೆ. ಅದರಲ್ಲೂ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.
ʻಮ್ಯಾಂಗೋ ಪಚ್ಚʼ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಇನ್ನೂ ಕೆಆರ್‌ಜಿ ಸಂಸ್ಥೆಯು ಸಿನಿಮಾಗಳ ಆಯ್ಕೆ ವಿಚಾರದಲ್ಲೂ ತುಂಬಾ ಸೆಲೆಕ್ಟಿವ್ ಆಗಿದ್ದು, ಉತ್ತಮ ಸ್ಕ್ರಿಪ್ಟ್‌ಗಳನ್ನು ಸಿನಿಪ್ರಿಯರಿಗೆ ನೀಡುವ ಪ್ರಯತ್ನ ಮಾಡುತ್ತಿದೆ.
ಸುದೀಪ್ ಏನಂದ್ರು?
ಮ್ಯಾಂಗೋ ಪಚ್ಚ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಿರುವ ಕಿಚ್ಚ ಸುದೀಪ್, "ಸುಪ್ರಿಯಾನ್ವಿ ಮತ್ತು ಕೆಆರ್‌ಜಿ ಪ್ರೊಡಕ್ಷನ್ಸ್ ಅರ್ಪಿಸುವ ಆವೇಶ, ಧೈರ್ಯ ಮತ್ತು ಅಪಾರ ಸಮರ್ಪಣಾ ಮನೋಭಾವದಿಂದ ಕೂಡಿದ ಕಥೆ. ಅವರ ಆತ್ಮದಲ್ಲಿ ಮಿಡಿಯುತ್ತಿರುವ ಕನಸುಗಳೊಂದಿಗೆ, ಈ ತಂಡವು ಸಾಮಾನ್ಯರಲ್ಲಿ ಅಸಾಮಾನ್ಯವಾದುದನ್ನು ಹುಡುಕ ಹೊರಟಿದೆ. ಇದು "ಪ್ರಶಾಂತ (ಪಚ್ಚ) ಮ್ಯಾಂಗೋ ಪಚ್ಚನಾಗಿ ಬೆಳೆದ ಪ್ರಯಾಣದ ಕಥೆ" ಎಂದು ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರ ಟ್ವೀಟ್
Supriyanvi & KRG bring to you a Tale,, told with fervor, grit and plenty of dedication.
— Kichcha Sudeepa (@KicchaSudeep) April 29, 2026
With dreams pulsing in their souls, the team chase the extraordinary in the ordinary. ✨️✨️
The story of "Prashantha's(Pachcha)" journey to becoming "MANGO PACHCHA" #MangoPachcha ❤️… pic.twitter.com/bPFkc4jb7m
ಇನ್ನು, ಈ ಸಿನಿಮಾದಲ್ಲಿ ಸಂಚಿತ್‌ಗೆ ನಾಯಕಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಮಯೂರ್ ಪಟೇಲ್, ಭಾವನಾ, ಹರಿಣಿ ಶ್ರೀಕಾಂತ್, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್ ಸೇರಿದಂತೆ ಅನೇಕರಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣವಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ರಿಪೀಟ್ ಆಗಲಿದೆಯಾ ಲವ್ ಮಾಕ್ಟೇಲ್ 3 ಮ್ಯಾಜಿಕ್?
ಈ ಹಿಂದೆ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆಗ ದಿಢೀರ್ ಅಂತ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿತ್ತು. ಆಗ ಆ ಜಾಗಕ್ಕೆ ಸಡನ್ ಆಗಿ ಎಂಟ್ರಿ ಕೊಟ್ಟಿದ್ದು ಲವ್ ಮಾಕ್‌ಟೇಲ್ 3 ಸಿನಿಮಾ. ಮಾರ್ಚ್ 19ರಂದು ತೆರೆಕಂಡಿದ್ದ ಲವ್ ಮಾಕ್ಟೇಲ್ 3 ಸಿನಿಮಾವು ದೊಡ್ಡ ಗೆಲುವು ಪಡೆದುಕೊಂಡಿತ್ತು. ಈಗ ಜೂನ್ 4ರಂದು ರಿಲೀಸ್ ಆಗಬೇಕಿದ್ದ ಟಾಕ್ಸಿಕ್, ಮತ್ತೆ ಮುಂದಕ್ಕೆ ಹೋಗಿದ್ದು, ಆ ಡೇಟ್ ಅನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಮ್ಯಾಂಗೋ ಪಚ್ಚ ರೆಡಿ ಆಗಿದ್ದು, ಈ ಬಾರಿಯೂ ರಿಪೀಟ್ ಆಗಲಿದೆಯಾ ಲವ್ ಮಾಕ್ಟೇಲ್ 3 ಥರದ ಮ್ಯಾಜಿಕ್ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.