‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಜೊತೆ ಯಶ್ ಹೊಸ ಸಿನಿಮಾ? ಚಂದ್ರಗುಪ್ತ ಮೌರ್ಯನ ಪಾತ್ರದಲ್ಲಿ ‘ರಾಕಿ ಭಾಯ್’
‘ರಾಮಾಯಣ’ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ರಾಕಿಂಗ್ ಸ್ಟಾರ್ ಯಶ್ ಅವರು ಮೌರ್ಯ ಸಾಮ್ರಾಜ್ಯದ ಸ್ಥಾಪಕ ‘ಚಂದ್ರಗುಪ್ತ ಮೌರ್ಯ’ನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ‘ಧುರಂಧರ್’ ಖ್ಯಾತಿಯ ಆದಿತ್ಯ ಧರ್ ನಿರ್ದೇಶನದ ಈ ಮೆಗಾ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ.
-
‘ಕೆಜಿಎಫ್’ ಸಿನಿಮಾ ಸರಣಿಗಳ ಮೂಲಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ ನಟ ಯಶ್, ಇತ್ತೀಚೆಗಷ್ಟೇ ತೆರೆಕಂಡ ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಚಿತ್ರಮಂದಿರಗಳಲ್ಲಿ ‘ರಾಮಾಯಣ’ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ರಾಕಿ ಭಾಯ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆಮಾಡಿದೆ.
ಇದೀಗ ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದ್ದು, ‘ಧುರಂಧರ್’ ಫ್ರಾಂಚೈಸಿ ಮೂಲಕ ಬ್ಯಾಕ್-ಟು-ಬ್ಯಾಕ್ ಬ್ಲಾಕ್ಬಸ್ಟರ್ ಹಿಟ್ ನೀಡಿರುವ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ಮುಂದಿನ ಐತಿಹಾಸಿಕ ಚಿತ್ರದಲ್ಲಿ ಯಶ್ ನಾಯಕನಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಮೂಲಗಳ ಪ್ರಕಾರ, ನಿರ್ದೇಶಕ ಆದಿತ್ಯ ಧರ್ ಅವರು ಮೌರ್ಯ ಸಾಮ್ರಾಜ್ಯದ ಸ್ಥಾಪಕ ‘ಚಂದ್ರಗುಪ್ತ ಮೌರ್ಯ’ನ ಜೀವನ ಚರಿತ್ರೆ ಹಾಗೂ ಸಾಮ್ರಾಜ್ಯದ ಉದಯದ ಕುರಿತಾದ ಐತಿಹಾಸಿಕ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಚಂದ್ರಗುಪ್ತ ಮೌರ್ಯನ ಶಕ್ತಿಶಾಲಿ ಪಾತ್ರಕ್ಕಾಗಿ ನಟ ಯಶ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಚಾಣಕ್ಯನ ಪಾತ್ರದಲ್ಲಿ ರಣವೀರ್ ಸಿಂಗ್
ಅಷ್ಟೇ ಅಲ್ಲದೆ, ಚಂದ್ರಗುಪ್ತನ ಅಧಿಕಾರದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜತಾಂತ್ರಿಕ ಹಾಗೂ ಮಹಾನ್ ಸಲಹೆಗಾರ ಚಾಣಕ್ಯನ ಪಾತ್ರಕ್ಕೂ ಕಥೆಯಲ್ಲಿ ಅಷ್ಟೇ ಮಹತ್ವವಿದ್ದು, ಆ ಪಾತ್ರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಮಲ್ಟಿಸ್ಟಾರರ್ ಐತಿಹಾಸಿಕ ಚಿತ್ರದ ತಾರಾಗಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಕುತೂಹಲಕಾರಿ ವದಂತಿಗಳು ಹಬ್ಬಿವೆ. ಯಶ್ ಮತ್ತು ರಣವೀರ್ ಸಿಂಗ್ ಜೊತೆಗೆ ತಮಿಳಿನ ವಿಜಯ್ ಸೇತುಪತಿ ಹಾಗೂ ಬಾಲಿವುಡ್ನ ಅಕ್ಷಯ್ ಖನ್ನಾ ಕೂಡ ಈ ಪ್ರಾಜೆಕ್ಟ್ನ ಭಾಗವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಎನ್ಟಿಆರ್ ಕೂಡ ನಟಿಸ್ತಾರಾ?
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನೆಟ್ಟಿಗರು, ಟಾಲಿವುಡ್ ಸ್ಟಾರ್ ಜೂನಿಯರ್ ಎನ್ಟಿಆರ್, ಮಲಯಾಳಂನ ಫಹಾದ್ ಫಾಸಿಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕೂಡ ಆದಿತ್ಯ ಧರ್ ಅವರ ಈ ‘ಚಂದ್ರಗುಪ್ತ ಮೌರ್ಯ’ ಚಿತ್ರತಂಡವನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ. ಆದರೆ, ಈ ಯಾವ ಪಾತ್ರವರ್ಗದ ಕುರಿತೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಈ ಹಿಂದೆ ‘ವೆರೈಟಿ ಇಂಡಿಯಾ’ ಪ್ರಕಟಿಸಿದ್ದ ವರದಿಯೊಂದರಲ್ಲಿ, ನಿರ್ದೇಶಕ ಆದಿತ್ಯ ಧರ್ ಅವರು ಚಂದ್ರಗುಪ್ತ ಮೌರ್ಯನ ಆಳ್ವಿಕೆಯ ಸುತ್ತ ಹೆಣೆಯಲಾದ ಐತಿಹಾಸಿಕ ಕಥಾಹಂದರದ ಚಿತ್ರದ ಬಗ್ಗೆ ಆಲೋಚಿಸುತ್ತಿದ್ದು, ಈ ಕುರಿತು ನಟ ರಣವೀರ್ ಸಿಂಗ್ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದ್ದರು ಎಂದು ಉಲ್ಲೇಖಿಸಲಾಗಿತ್ತು. ಇದರ ಜೊತೆಗೆ ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಹಾಗೂ ಒಂದು ಸ್ಪೋರ್ಟ್ಸ್ ಡ್ರಾಮಾ ಸೇರಿದಂತೆ ಇತರ ಪ್ರಾಜೆಕ್ಟ್ಗಳ ಬಗ್ಗೆಯೂ ಅವರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಆದಿತ್ಯ ಧರ್ ತಮ್ಮ ಹೊಸ ಪ್ರಾಜೆಕ್ಟ್ನ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, 2027ರ ಮಾರ್ಚ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ರೂಪಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರ ಸಮಾಗಮವಾಗಲಿದೆ ಎನ್ನಲಾಗುತ್ತಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ರಾವಣನ ಪಾತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಯಶ್, ಒಂದು ವೇಳೆ ಚಂದ್ರಗುಪ್ತ ಮೌರ್ಯನಾಗಿ ತೆರೆಮೇಲೆ ಬಂದರೆ ಮತ್ತೊಂದು ಇತಿಹಾಸ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಸದ್ಯಕ್ಕೆ ಸಿನಿಮಾದ ಶೀರ್ಷಿಕೆ, ತಾರಾಗಣ ಅಥವಾ ಚಿತ್ರೀಕರಣದ ಕುರಿತು ನಿರ್ದೇಶಕರಾಗಲಿ ಅಥವಾ ನಟರಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲದಿರುವುದರಿಂದ, ಅಧಿಕೃತ ಪ್ರಕಟಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.