ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೌರ್ಯ ಜೊತೆ ಎಂಗೇಜ್‌ ಆದ ʻಹನುಮಾನ್‌ʼ ಸಿನಿಮಾ ಹೀರೋ ತೇಜ ಸಜ್ಜಾ; ಈ ಜೋಡಿಯ ಮದುವೆ ಯಾವಾಗ?

‘ಹನುಮಾನ್’ ಸಿನಿಮಾ ಖ್ಯಾತಿಯ ನಟ ತೇಜ ಸಜ್ಜಾ ಅವರ ನಿಶ್ಚಿತಾರ್ಥ ಸಮಾರಂಭವು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಅಮೆರಿಕದ ಮೂಲದ ಐಟಿ ಉದ್ಯಮಿ ಮೌರ್ಯ ಅವರೊಂದಿಗೆ ತೇಜ ಸಜ್ಜಾ ಉಂಗುರ ಬದಲಿಸಿಕೊಂಡಿದ್ದಾರೆ.

‌‌ಮೌರ್ಯ ಜೊತೆ ʻಹನುಮಾನ್‌ʼ ಸಿನಿಮಾ ಹೀರೋ ತೇಜ ಸಜ್ಜಾ ನಿಶ್ಚಿತಾರ್ಥ

-

Avinash GR
Avinash GR Nov 16, 2026 6:48 PM

‘ಹನುಮಾನ್’, ‘ಮಿರಾಯ್’ನಂತಹ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಫೇಮಸ್‌ ಆಗಿರುವ ನಟ ತೇಜ ಸಜ್ಜಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಆ ಹಿನ್ನೆಲೆಯಲ್ಲಿ ಇಂದು (ನವೆಂಬರ್ 16) ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಮೌರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎರಡೂ ಕುಟುಂಬಗಳ ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿದ ಶುಭ ಸಮಾರಂಭಕ್ಕೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಆಗಮಿಸಿ ಭಾವಿ ವಧು-ವರರಿಗೆ ಶುಭ ಹಾರೈಸಿದರು.

ರಾಜ್ಯಪಾಲರಿಂದ ಆಶೀರ್ವಾದ

ಈ ವಿಶೇಷ ಸಮಾರಂಭಕ್ಕೆ ತೆಲಂಗಾಣ ರಾಜ್ಯಪಾಲರಾದ ಶಿವ ಪ್ರತಾಪ್ ಶುಕ್ಲಾ ಅವರು ಆಗಮಿಸಿ ನೂತನ ಜೋಡಿಗೆ ಆಶೀರ್ವದಿಸಿದರು. ಅವರೊಂದಿಗೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ತೆಲಂಗಾಣ ಸಿನಿಮಾಟೋಗ್ರಫಿ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಸಚಿವೆ ಸೀತಕ್ಕ, ಮಾಜಿ ಸಚಿವ ಹರೀಶ್ ರಾವ್, ಗಂಟಾ ಶ್ರೀನಿವಾಸ ರಾವ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಪಾಲ್ಗೊಂಡು ಸಂಭ್ರಮಿಸಿದರು. ಇನ್ನು ತೆಲುಗು ಚಿತ್ರರಂಗದಿಂದ ಮೆಗಾಸ್ಟಾರ್ ಚಿರಂಜೀವಿ, ರವಿತೇಜ, ನಾನಿ, ರಾಣಾ ದಗ್ಗುಬಾಟಿ, ಅಡಿವಿ ಶೇಷ್, ಸುಧೀರ್ ಬಾಬು, ಶ್ರೀಕಾಂತ್, ಶಿವಾಜಿ, ರಾವ್ ರಮೇಶ್, ವರಲಕ್ಷ್ಮಿ ಶರತ್‌ಕುಮಾರ್, ನಿಧಿ ಅಗರ್ವಾಲ್, ನಿಹಾರಿಕಾ ಕೊನಿಡೇಲ, ರಿತಿಕಾ ನಾಯಕ್ ಹಾಗೂ ಇಮಾನ್ವಿ ಮುಂತಾದ ತಾರೆಯರು ಆಗಮಿಸಿ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದರು.

ಡಿಸೆಂಬರ್‌ನಲ್ಲಿ ಸರಳವಾಗಿ ಹಸೆಮಣೆ ಏರಲಿರುವ ‘ಹನು-ಮಾನ್’ ಖ್ಯಾತಿಯ ತೇಜ ಸಜ್ಜಾ; ಉದಯಪುರದಲ್ಲಿ ಕಲ್ಯಾಣ ಮಹೋತ್ಸವ

ಖ್ಯಾತ ನಿರ್ದೇಶಕರು, ನಿರ್ಮಾಪಕರು ಭಾಗಿ

ಜೊತೆಗೆ ತೆಲುಗು ಚಿತ್ರರಂಗದ ಪ್ರಮುಖ ನಿರ್ದೇಶಕರು ಮತ್ತು ನಿರ್ಮಾಪಕರ ದಂಡೇ ಈ ಸಮಾರಂಭದಲ್ಲಿ ನೆರೆದಿತ್ತು. ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್, ಬಿ. ಗೋಪಾಲ್, ಅನಿಲ್ ರವಿಪುಡಿ, ಶಿವ ನಿರ್ವಾಣ, ನಂದಿನಿ ರೆಡ್ಡಿ, ಮಾರುತಿ, ಚಂದೂ ಮೊಂಡೇಟಿ, ಶೈಲೇಶ್ ಕೊಲನು, ಬಿವಿಎಸ್ ರವಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ತೇಜ ಸಜ್ಜಾ ಅವರ ಸಿನಿಮಾ ಪಯಣದಲ್ಲಿ ಪ್ರಮುಖ ಪಾತ್ರ ವಹಿಸಿದ ನಿರ್ದೇಶಕರಾದ ಪ್ರಶಾಂತ್ ವರ್ಮಾ, ಕಾರ್ತಿಕ್ ಘಟ್ಟಮನೇನಿ ಆಗಮಿಸಿದ್ದರು. ಅಲ್ಲದೆ ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್, ಸುರೇಶ್ ಬಾಬು, ದಿಲ್ ರಾಜು, ಟಿ.ಜಿ. ವಿಶ್ವಪ್ರಸಾದ್, ಸುಷ್ಮಿತಾ ಕೊನಿಡೇಲ, ಸಾಹು ಗಾರಪಾಟಿ, ವೆಂಕಟ್ ಬೋಯನಪಲ್ಲಿ ಕೂಡ ಆಗಮಿಸಿ ಶುಭ ಕೋರಿದರು.

ಐಟಿ ಉದ್ಯಮಿ ಆಗಿರುವ ಮೌರ್ಯ

ತಮ್ಮ ಭಾವಿ ಬಾಳಸಂಗಾತಿಯ ಕುರಿತು ತೇಜ ಸಜ್ಜಾ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮದು ಸಂಪೂರ್ಣವಾಗಿ ಹಿರಿಯರು ನಿಶ್ಚಯಿಸಿದ ಮದುವೆಯಾಗಿದ್ದು, ವಧುವಿನ ಕುಟುಂಬಕ್ಕೆ ಚಿತ್ರರಂಗದೊಂದಿಗೆ ಯಾವುದೇ ನಂಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದಲ್ಲಿ ಬೆಳೆದಿರುವ ಮೌರ್ಯ ಪ್ರಸ್ತುತ ತಮ್ಮ ತಂದೆಯೊಂದಿಗೆ ಐಟಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಅವರ ಖಾಸಗಿತನಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಆರಂಭದಲ್ಲಿ ಅವರ ವಿವರಗಳನ್ನು ಗೌಪ್ಯವಾಗಿ ಇಡಲಾಗಿತ್ತು ಎಂದು ತೇಜ ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಮದುವೆ

ನಿಶ್ಚಿತಾರ್ಥ ಸಮಾರಂಭ ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ ಈಗ ಎಲ್ಲರ ಗಮನ ಮದುವೆಯತ್ತ ನೆಟ್ಟಿದೆ. ಮೂಲಗಳ ಪ್ರಕಾರ, ಡಿಸೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ತೇಜ ಸಜ್ಜಾ ಮತ್ತು ಮೌರ್ಯ ಅವರ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯಲಿದೆ. ಕೇವಲ ಕುಟುಂಬ ಸದಸ್ಯರು ಮತ್ತು ಅತ್ಯಂತ ಆಪ್ತರ ಸಮ್ಮುಖದಲ್ಲಿ ಈ ವಿವಾಹವನ್ನು ನೆರವೇರಿಸಲು ನಿರ್ಧರಿಸಲಾಗಿದ್ದು, ನಂತರ ಟಾಲಿವುಡ್ ಗಣ್ಯರು ಮತ್ತು ಸ್ನೇಹಿತರಿಗಾಗಿ ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಲಾಗುವುದು ಎಂದು ತಿಳಿದುಬಂದಿದೆ.

ಶೀಘ್ರದಲ್ಲೇ ಮದುವೆ ದಿನಾಂಕದ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನಿಶ್ಚಿತಾರ್ಥದ ಫೋಟೋಗಳಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.