Ratha Saptami: ಎಂ ಎಸ್ ಉಮೇಶ್ ನಟಿಸಿದ್ದ ಕೊನೇ ಸೀರಿಯಲ್ ಡಿ.8ರಿಂದ ಆರಂಭ; ಯಾರೆಲ್ಲಾ ಅಭಿನಯಿಸಿದ್ದಾರೆ? ಎಲ್ಲಿ ಪ್ರಸಾರ?
MS Umesh Ratha Saptami Serial: ನಟ ಎಂ ಎಸ್ ಉಮೇಶ್ ಅವರು ಕೊನೆಯದಾಗಿ ಅಭಿಯನಸಿದ್ದ ಧಾರಾವಾಹಿ 'ರಥಸಪ್ತಮಿ' ಡಿ.8 ರಿಂದ ಪ್ರಸಾರವಾಗಲಿದೆ. ರಂಗಭೂಮಿ ಹಿನ್ನಲೆಯ ಪೂರ್ಣಚಂದ್ರ ತೇಜಸ್ವಿ ಅವರು ನಿರ್ದೇಶಿಸುತ್ತಿರುವ ಈ ಸೀರಿಯಲ್‌ನಲ್ಲಿ ನಾಯಕಿಯಾಗಿ ಮೌಲ್ಯಾ ಗೌಡ (ಸಪ್ತಮಿ) ಮತ್ತು ನಾಯಕನಾಗಿ ಜೀವನ್ (ಶ್ರೀಮಂತ್) ನಟಿಸಿದ್ದಾರೆ.
-
ಈಚೆಗಷ್ಟೇ ನಿಧನರಾದ ನಟ ಎಂ ಎಸ್ ಉಮೇಶ್ ಅವರು ತಮ್ಮ ಕೊನೇ ಗಳಿಗೆಯವರೆಗೂ ಬಣ್ಣದ ಲೋಕದ ನಂಟು ಬಿಟ್ಟಿರಲಿಲ್ಲ. ಅವರ ನಿಧನಕ್ಕೆ ಒಂದೆರಡು ದಿನಗಳ ಹಿಂದೆ ʻಜಿಎಸ್‌ಟಿʼ ಸಿನಿಮಾ ತೆರೆಕಂಡಿತ್ತು. ಅದರಲ್ಲೂ ಉಮೇಶ್ ನಟಿಸಿದ್ದರು. ಅವರು ನಟಿಸಿ, ಇನ್ನೂ ತೆರೆಕಾಣದ ಒಂದಷ್ಟು ಸಿನಿಮಾಗಳು ಕೂಡ ಬಾಕಿ ಇವೆ. ಈ ಮಧ್ಯೆ ಉಮೇಶ್ ಕೊನೆಯದಾಗಿ ನಟಿಸಿದ್ದ ಸೀರಿಯಲ್ ಒಂದು ಪ್ರಸಾರಕ್ಕೆ ಅಣಿಯಾಗಿದೆ. ಅದೇ ʻರಥಸಪ್ತಮಿʼ ಧಾರಾವಾಹಿ.
ಡಿಸೆಂಬರ್ 8ರಿಂದ ರಥಸಪ್ತಮಿ ಸೀರಿಯಲ್ ಶುರು
ಶಿವರಾಜ್‌ಕುಮಾರ್ ಅವರ ಎರಡನೇ ಸಿನಿಮಾ ʻರಥಸಪ್ತಮಿʼ ಆ ಕಾಲಕ್ಕೆ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಇದೀಗ ಅದೇ ಹೆಸರಿನಲ್ಲಿ ಉದಯ ಟಿವಿಯಲ್ಲಿ ಧಾರಾವಾಹಿ ಮೂಡಿಬರುತ್ತಿದೆ. ಈ ಸೀರಿಯಲ್ ಡಿಸೆಂಬರ್ 8ರಿಂದ ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ರಂಗಭೂಮಿ ಹಿನ್ನಲೆಯ ನಟ, ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.
ಈ ಸೀರಿಯಲ್‌ನಲ್ಲಿ ಯಾರೆಲ್ಲಾ ನಟಿಸಿದ್ದಾರೆ?
ರಥಸಪ್ತಮಿ ಧಾರಾವಾಹಿಯಲ್ಲಿ ನಟ ಉಮೇಶ್ ಅವರು ಒಂದು ಪಾತ್ರ ಮಾಡಿದ್ದು, ಧಾರಾವಾಹಿಯ ಆರಂಭಿಕ ಎಪಿಸೋಡ್‌ಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಕೊನೇ ಧಾರಾವಾಹಿ ಎಂದು ವಾಹಿನಿ ಹೇಳಿಕೊಂಡಿದೆ. ಇನ್ನುಳಿದಂತೆ, ಜೀವನ್ ಹೀರೋ ಆಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಮೌಲ್ಯಾ ಗೌಡ ನಟಿಸಿದ್ದಾರೆ. ನಾಗೇಶ್ ಮಯ್ಯ, ಸುನಿಲ್, ವಂದನ, ಭೂಮಿಕಾ, ಪುಷ್ಪಾ ಬೆಳವಾಡಿ, ಪ್ರಮೀಳಾ, ಸುಮೋಕ್ಷ, ಮಧುಸೂದನ್, ನೀನಾಸಂ ಪ್ರದೀಪ್, ಚಂದನ, ಅಥರ್ವ ಮುಂತಾದವರು ʻರಥಸಪ್ತಮಿʼ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಕೃಷ್ಣ ಅವರು ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಹೊಣೆ ವಿಶಾಲ್ ವಿನಾಯಕ್ ಅವರದ್ದು. ಸ್ಟೋರಿ ಬ್ರೀವ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹ್ಯಾರಿಸ್ ನಿರ್ಮಾಣ ಮಾಡುತ್ತಿದ್ದಾರೆ
ʻರಥಸಪ್ತಮಿʼ ಸೀರಿಯಲ್ ಕಥೆ ಏನು?
ನಿಸ್ವಾರ್ಥ ಹಾಗೂ ಉದಾರ ಮನೋಭಾವದ, ಮಧ್ಯಮ ವರ್ಗದ ಪದವಿ ಮುಗಿಸಿರುವ ಹುಡುಗಿ ಸಪ್ತಮಿ. ಅಪ್ಪನ ಮುದ್ದಿನ ಮಗಳು. ಇವಳ ದಾನಗುಣ ಮಲತಾಯಿಗೆ ಇಷ್ಟವಾಗುವುದಿಲ್ಲ. ಈಕೆಗೆ ಶ್ರೀಮಂತ್ ಅನ್ನೋ ಒಬ್ಬ ಜಿಪುಣನ ಜೊತೆ ಮದುವೆ ನಿಶ್ಚಯವಾಗುತ್ತದೆ. ಶ್ರೀಮಂತ್‌ಗೆ ಚಿಕ್ಕಪ್ಪನಿಂದ ಮೋಸವಾಗಿದ್ದರಿಂದ ಯಾರನ್ನೂ ನಂಬದೇ ಪೈಸೆ ಪೈಸೆಗೂ ಲೆಕ್ಕ ಇಡುವಂಥವನು. ಮನೆಯಲ್ಲಿ ಈತನನ್ನು ಕಂಜೂಸ್ ಕುಮಾರ ಅಂತಲೂ ಕರೆಯುತ್ತಿರುತ್ತಾರೆ. ಈತನ ಸರ್ಕಾರಿ ಸಂಬಳದಿಂದ ಕುಟುಂಬದ ಐದು ಜನರ ಬದುಕು ನಡೆಯಬೇಕಿರುತ್ತದೆ. ಎರಡೂ ಪರಿವಾರ ಹೇಳೋ ಸುಳ್ಳುಗಳಿಂದ ಸಪ್ತಮಿ ಮತ್ತು ಶ್ರೀಮಂತ್ ಪ್ರೀತಿಸುವಂತಾಗಿ ಮದುವೆ ಕೂಡ ಆಗ್ತಾರೆ. ತನ್ನ ಕುಟುಂಬವೇ ಸರ್ವಸ್ವ ಅಂತ ನಂಬಿರೋ ಸಪ್ತಮಿಗೆ ಆ ಕುಟುಂಬವನ್ನು ಭೂಮಿಗೆ ಭಾರ ಎನ್ನುವ ಥರ ನೋಡುವ ಶ್ರೀಮಂತ್‌ನ ಜೊತೆ ಬದುಕುವ ಅನಿವಾರ್ಯತೆ! ಈ ವ್ಯತ್ಯಾಸ-ವೈಶಿಷ್ಟ್ಯ-ಸಂಘರ್ಷಗಳ ನಡುವೆ ಇಬ್ಬರ ಬದುಕು ಹೇಗೆ ಸಾಗುತ್ತದೆ ಎನ್ನುವುದೇ ಈ ಧಾರಾವಾಹಿ ಕಥೆ.